ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

1,200 ಪೆನ್ ರಿಫಿಲ್‌ನಲ್ಲಿ ಅರಳಿದ ಹಂಪಿ ರಥ ಕಲಾಕೃತಿ

ಒಂದೂವರೆ ವರ್ಷದಲ್ಲಿ ಸಿದ್ಧವಾದ ಕಲಾಕೃತಿ
Published 2 ಡಿಸೆಂಬರ್ 2023, 5:12 IST
Last Updated 2 ಡಿಸೆಂಬರ್ 2023, 5:12 IST
ಅಕ್ಷರ ಗಾತ್ರ

ಹೊಸಪೇಟೆ: ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್‌ ಎಂ.ಆರ್‌.ಶ್ರೀನಿವಾಸುಲು ಪೆನ್ ರಿಫಿಲ್‌ನಿಂದ ಸಿದ್ಧಪಡಿಸಿದ ಹಂಪಿಯ ಕಲ್ಲಿನ ರಥದ ಚಿಕಣಿ ಪ್ರತಿಕೃತಿ ದೆಹಲಿ ಕೆಂಪುಕೋಟೆ ಅಂಗಣದಲ್ಲಿದೆ.

ಜಿ20 ರಾಷ್ಟ್ರಗಳ ಅಂತರರಾಷ್ಟ್ರೀಯ ಮಟ್ಟದ ಕಲಾಕೃತಿಗಳ ಪ್ರದರ್ಶನಕ್ಕೆ ಪೂರಕವಾಗಿ ಕೆಂಪುಕೋಟೆಯಲ್ಲಿ ಡಿಸೆಂಬರ್ 8 ರಿಂದ ಮಾರ್ಚ್ 31ರವರೆಗೆ ವಿವಿಧ ರಾಜ್ಯಗಳ ಕಲಾಕೃತಿಗಳು ಸೇರಿ ವೈವಿಧ್ಯಮಯ ವಸ್ತುಗಳ ಪ್ರದರ್ಶನ ಜರುಗಲಿದೆ. ಇಲ್ಲಿ ಮೆಚ್ಚುಗೆ ಪಡೆಯುವ ಕಲಾಕೃತಿಯು ಅಂತರರಾಷ್ಟ್ರೀಯ ಪ್ರದರ್ಶನಕ್ಕೆ ಆಯ್ಕೆಯಾಗುತ್ತದೆ. ರಾಜ್ಯದಿಂದ ಒಂದೂವರೆ ಅಡಿ ಎತ್ತರದ ರಿಫಿಲ್‌ ಕಲ್ಲಿನ ರಥ ಮಾತ್ರ ಆಯ್ಕೆ ಆಗಿದೆ.

ಒಟ್ಟು 1200 ರಿಫಿಲ್‌ಗಳ 9727 ತುಂಡುಗಳನ್ನು ಮಾಡಿ 1 ವರ್ಷ 10 ತಿಂಗಳ ಅವಧಿಯಲ್ಲಿ ಮೂಲಸ್ವರೂಪದ ಕಲ್ಲಿನ ರಥ ಸಿದ್ಧಪಡಿಸಿದ್ದೇನೆ.
–ಎಂ.ಆರ್.ಶ್ರೀನಿವಾಸುಲು ಚಿಕಣಿ ಕಲಾವಿದ

ಬೆಂಗಳೂರು ಹೆಬ್ಬಾಳ ನಿವಾಸಿ ಶ್ರೀನಿವಾಸುಲು ಅವರು 17 ವರ್ಷಗಳಿಂದ ಚಿಕಣಿ (ಮಿನಿಯೇಚರ್‌) ಕಲಾಕೃತಿಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪೆನ್‌ರಿಫಿಲ್‌ನಲ್ಲಿ ಅವರು ಐಫೆಲ್ ಗೋಪುರ, ತಾಜ್‌ಮಹಲ್‌, ಚಾರ್ಮಿನರ್‌,  ಗೇಟ್‌ವೇ ಆಫ್‌ ಇಂಡಿಯಾ, ಅಮೃತಸರದ ಸ್ವರ್ಣಮಂದಿರ, ಜೈಪುರದ ಹವಾಮಹಲ್, ಸಿಡ್ನಿಯ ಹಾರ್ಬರ್‌ ಸೇತುವೆ, ಪೀಸಾ ಗೋಪುರ, ಮೈಸೂರಿನ ಸೇಂಟ್‌ ಫಿಲೋಮಿನಾ ಚರ್ಚ್‌ ಸೇರಿ ಪ್ರಮುಖವಾದುದ್ದನ್ನು ಸಿದ್ಧಪಡಿಸಿದ್ದಾರೆ.

‘ಹಂಪಿಯ ಕಲ್ಲಿನ ರಥದ ಮೇಲೆ ಈ ಮೊದಲು ಇಟ್ಟಿಗೆಯಿಂದ ತಯಾರಿಸಿದ ವಿಮಾನಗೋಪುರ ಇತ್ತು. ಕಲ್ಲಿನ ರಥಕ್ಕೆ ಧಕ್ಕೆ ಆಗುವುದೆಂದು 1982ರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಇಟ್ಟಿಗೆ ಗೋಪುರ ತೆರವುಗೊಳಿಸಿತು. ಆ ಮೂಲ ಸ್ವರೂಪವನ್ನೇ ಇಲ್ಲಿ ಪೆನ್‌ ರಿಫಿಲ್‌ ಮೂಲಕ ಸೃಷ್ಟಿಸಿದ್ದೇನೆ’ ಎಂದು ಚಿಕಣಿ ಕಲಾವಿದ ಶ್ರೀನಿವಾಸುಲು ‘ಪ್ರಜಾವಾಣಿ’ಗೆ ತಿಳಿಸಿದರು.

ನೃತ್ಯದಲ್ಲೂ ಪರಿಣತಿ ಹೊಂದಿರುವ ಶ್ರೀನಿವಾಸುಲು ಅವರು ಚಾಕ್‌ಪೀಸ್‌ ಮತ್ತು ಮರಳು ಶಿಲ್ಪ ಕಲಾವಿದರೂ ಹೌದು. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಧರ್ಮಾವರಂನಲ್ಲಿ ಜನಿಸಿದ ಶ್ರೀನಿವಾಸುಲು ಅವರ ತಾಯಿಯ ತವರು ಬೆಂಗಳೂರು. ಹೀಗಾಗಿ ಅವರ ಮಾತೃಭಾಷೆ ಕನ್ನಡ. 

ರಿಫಿಲ್‌ ಕಲ್ಲಿನ ರಥದೊಂದಿಗೆ ಎಂ.ಆರ್‌.ಶ್ರೀನಿವಾಸುಲು
ರಿಫಿಲ್‌ ಕಲ್ಲಿನ ರಥದೊಂದಿಗೆ ಎಂ.ಆರ್‌.ಶ್ರೀನಿವಾಸುಲು
ರಿಫಿಲ್‌ ಕಲ್ಲಿನ ರಥ
ರಿಫಿಲ್‌ ಕಲ್ಲಿನ ರಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT