ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವ: ಭಾವನೆ, ಕಲ್ಪನೆಗೆ ಪದಪುಂಜ ಕಟ್ಟಿದ ಚಿಣ್ಣರು

ಕವಿಗೋಷ್ಠಿ ಉದ್ಘಾಟಿಸಿದ ಮಕ್ಕಳ ಸಾಹಿತಿ ಡಾ.ಕೆ.ಶಿವಲಿಂಗಪ್ಪ ಹಂದಿಹಾಳು
ಪಂಡಿತಾರಾಧ್ಯ ಎಚ್.ಎಂ. ಮೆಟ್ರಿ
Published 5 ಫೆಬ್ರುವರಿ 2024, 6:38 IST
Last Updated 5 ಫೆಬ್ರುವರಿ 2024, 6:38 IST
ಅಕ್ಷರ ಗಾತ್ರ

ಹಂಪಿ (ವಿಜಯನಗರ): ತಂತ್ರಜ್ಞಾನದ ಇಂದಿನ ಯುಗದಲ್ಲಿ ಮಕ್ಕಳು, ಯುವಕರು ಸೃಜನಾತ್ಮಕತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿ ನಮ್ಮ ಸಂಬಂಧಗಳನ್ನು ಮರೆಯುತ್ತಿದ್ದಾರೆ ಎನ್ನುವ ಅಪಾದನೆಗಳಿವೆ. ಇಂಥ ಕಾಲಗಟ್ಟದಲ್ಲಿಯೂ ಅದೇ ಮಕ್ಕಳು, ಯುವಕರಿಂದ ನೈಜ ಬದುಕನ್ನು ಕಟ್ಟಿಕೊಡುವ ಕವನ, ಕವಿತೆಗಳು ಮೂಡಿಬಂದವು.

ಹಂಪಿ ಉತ್ಸವದ ಅಂಗವಾಗಿ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಭಾನುವಾರ ನಡೆದ ಮಕ್ಕಳ ಹಾಗೂ ಯುವ ಕವಿಗೋಷ್ಠಿ ಇದಕ್ಕೆ ಸಾಕ್ಷಿಯಾಯಿತು.

‘ಮಣ್ಣಲಿ ಮಣ್ಣಾಗಿ ಮೇಲೊಂದು ಮರವಾಗಿ, ಸಕಲರಿಗೆ ಜೀವರಾಶಿಯಾಗಿ ಆಶ್ರಯವಾದೆ. ನಾನು ಅಸಮರ್ಥ ನೀನಗೇನು ನೀಡಲಾರೆ, ಆದರೂ ನೀ ನಮಗೆ ಫಲ ಪುಷ್ಪಗಳನ್ನು ಧಾರೆಯೆರೆಯುವೆ’ ಎಂದು 9ನೇ ತರಗತಿಯ ಕುಸುಮಾ ಭೀಮಪ್ಪ ಗುಡಗೇರಿ ವಾಚಿಸಿದ ‘ಪ್ರಕೃತಿ’ ಕವನ ಪರಿಸರ ಕಾಳಜಿಗೆ ಕನ್ನಡಿ ಹಿಡಿದಂತಿತ್ತು.

‘ನಮ್ಮ ಜಗತ್ತಿನ ಕ್ರಾಂತಿವೀರರಿವರು, ಶಿಸ್ತಿನ ಸಿಪಾಯಿಗಳಿವರು, ಮಳೆ ಇರಲಿ, ಚಳಿ ಇರಲಿ ಏನೇ ಇರಲಿ ಎಂದೆಂದಿಗೂ ಭೂತಾಯಿಯನ್ನು ಕೈಬಿಡದವರಿವರು’ ಎಂದು ವಿದ್ಯಾರ್ಥಿ ಕಾರಟಗಿ ಪ್ರೇಮನಾಥ ಇಲ್ಲೂರು ವಾಚಿಸಿದ ಕವನದಲ್ಲಿ ಅನ್ನದಾತನ ಸಂಬಂಧ ವ್ಯಕ್ತವಾಯಿತು.

‘ಉತ್ಸವ ಉತ್ಸವ ಹಂಪಿಯ ಉತ್ಸವ, ಕಣ್ಣಿಗೆ ಮನಕೆ ಆನಂದದ ದೀಪೋತ್ಸವ. ತುಂಗಭದ್ರೆಯಲ್ಲಿ ಜನಿಸಿದ, ವಿಶ್ವಪರಂಪರೆ ತಾಣದಲ್ಲಿ ಮೆರೆದ ಹಂಪಿಯ ನಾಡು ಕನ್ನಡಿಗರ ಬೀಡು...’ ಎಂದು ವಿದ್ಯಾರ್ಥಿ ಶಿಲ್ಪಾ ಬಡಿಗೇರ್ ಕವಿತೆಯಲ್ಲಿ ಹಂಪಿ ಉತ್ಸವದ ಬಣ್ಣನೆ ಅರ್ಥಗರ್ಭಿತವಾಗಿ ಮೂಡಿಬಂತು.

ಎಚ್. ಅಪೂರ್ವ, ವೀರೇಶಮ್ಮ, ಎಚ್. ಸಾನಿಯಾ, ಅಂಜುಂ ಶೇಖ್, ಕೀರ್ತಿ ಗಂಗಾವತಿ, ಜಿ.ವಿ. ಸ್ನೇಹ, ಮಲ್ಲಿಕಾ ಮಹೇಶ್ ಜಂಬಗಿ, ಎಸ್. ಕೌಸ್ತು ಭಾರದ್ವಾಜ್, ಎಚ್.ಎಂ. ಜಂಬುನಾಥ, ನಾಗರಾಜ ಬಡಿಗೇರು, ಬಿ.ಎಂ. ವಿಜಯರಾಘವೇಂದ್ರ, ವಿಶಾಲ್ ಮ್ಯಾಸರ್, ಡಿ.ಯು. ಬಸಂತ್, ನಾಗರಾಜ್ ಗಂಟಿ, ಲಕ್ಷ್ಮಿ ಗಾಲಿ, ಪಿ. ಚೈತ್ರಾ, ಎಂ. ವೀರೇಂದ್ರ, ಪ್ರಜ್ವಲ್, ಶೇಕ್ಷಾವಲಿ ಅಯ್ಯನಹಳ್ಳಿ, ಆರ್.ಪಿ. ಮಂಜುನಾಥ, ಜಿ.ಎಸ್. ಶರಣು, ಕ್ಯಾದಿಗಿಹಾಳ್ ಉದೇದಪ್ಪ, ಜಿ. ಯರಿಸ್ವಾಮಿ ಅವರಿಂದ ವಿವಿಧ ವಿಷಯಗಳ ಕುರಿತು ವಿಶಿಷ್ಟ ಕವಿತೆಗಳು ಹೊರಹೊಮ್ಮಿ ಸಭಿಕರ ಮನಸೂರೆಗೊಂಡವು.

ಬಳ್ಳಾರಿಯ ಮಕ್ಕಳ ಸಾಹಿತಿ ಡಾ.ಕೆ.ಶಿವಲಿಂಗಪ್ಪ ಹಂದಿಹಾಳು ಕವಿಗೋಷ್ಠಿ ಉದ್ಘಾಟಿಸಿ, ಕಾವ್ಯ ಎಂದಿಗೂ ಕವಿಯ ತನ್ನತನದ ಹುಡುಕಾಟವೇ ಆಗಿರುತ್ತದೆ. ಅದಕ್ಕೆ ವಯಸ್ಸಿನ ಹಂಗಿರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಇಲ್ಲಿಯ ತತ್ವಪದಗಳು, ದಾಸರ ಪದಗಳು, ಬೀದಿ ಹಾಡುಗಳು, ಬುರ‍್ರಾಕಥಾ, ಮೌಖಿಕ ಕಾವ್ಯಗಳು ಹಳ್ಳಿ ಹಳ್ಳಿಗಳಲ್ಲಿವೆ. ಇವುಗಳನ್ನು ಸಂವಿಧಾನಬದ್ಧ ವೇದಿಕೆಗಳಿಗೆ ತಂದು ಪ್ರಸಿದ್ಧಗೊಳಿಸುವ ಕೆಲಸ ಹೊಸ ತಲೆಮಾರಿನಿಂದ ಆಗಬೇಕಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಚಿಂತಕ ಅಬ್ದುಲ್ ಹೈ ತೋರಣಗಲ್ಲು ಮಾತನಾಡಿ, ಮಕ್ಕಳೆಂದರೆ ಕಾಡುವ ಕಾವ್ಯ. ಅಂಥ ಮಕ್ಕಳ ಅಕ್ಷರ ನುಡಿ ತೋರಣದಲ್ಲಿ ಮೂಡಿ ಬರುವುದರೊಂದಿಗೆ ಸಮಾಜದ ಅಂಕು ಡೊಂಕು ತಿದ್ದುವ ಕೆಲಸವಾಗಿದೆ. ಅವರಿಂದ ಕನ್ನಡದ ಅಸ್ಮಿತೆಯನ್ನು ಉಳಿಸುವ ಕಾರ್ಯವೂ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌, ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಉಪ ನಿರ್ದೇಶಕ ಪಾಲಾಕ್ಷ ಟಿ., ನೋಡಲ್ ಅಧಿಕಾರಿ ನಾಗರಾಜ್ ಹವಾಲ್ದಾರ್, ಉಪನ್ಯಾಸಕಿ ನಾಗರತ್ನ, ದಯಾನಂದ ಕಿನ್ನಾಳ್, ಕುಮಾರಸ್ವಾಮಿ ಹಾಜರಿದ್ದರು.

ಆಕ್ಷೇಪಣೆ:

ಕ್ಷಮೆ ಕೋರಿದ ಅಧಿಕಾರಿ ಪ್ರಸ್ತುತ ಗೋಷ್ಠಿಯ ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದ ರಾಮನಗರ ಮೂಲದ ಆರ್. ಮನೋಹರ್ ಅವರನ್ನು ಆಯೋಜಕರು ಕವನ ವಾಚನಕ್ಕೆ ಕರೆಯುತ್ತಿದ್ದಂತೆ ಸಭಿಕರ ಸಾಲಿನಲ್ಲಿದ್ದ ಎಚ್.ಎಂ. ಜಂಬುನಾಥ ಅವರಿಂದ ಆಕ್ಷೇಪಣೆ ವ್ಯಕ್ತವಾಯಿತು.‘ನಮ್ಮಿಂದ ಪ್ರಮಾದವಾಗಿದೆ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದವರಿಂದ ಅನುಮತಿ ಪಡೆಯಬೇಕಿತ್ತು. ಅದಕ್ಕಾಗಿ ಕ್ಷಮೆ ಕೋರುತ್ತೇವೆ’ ಎಂದು ನೋಡಲ್ ಅಧಿಕಾರಿ ನಾಗರಾಜ ಹವಾಲ್ದಾರ್ ಸ್ಪಷ್ಟಪಡಿಸಿದರು. ಮಕ್ಕಳ ಹಾಗೂ ಯುವ ಕವಿಗೋಷ್ಠಿಯಲ್ಲಿ ಮೂವರು ಹಿರಿಯರು ಭಾಗವಹಿಸಿ ಕವನ ವಾಚಿಸಿದರು. ಇದಕ್ಕೆ ಸಭಿಕರಲ್ಲಿದ್ದ ಕೆಲವರು ಇವರ ಹೆಸರು ಹೇಗೆ ತೂರಿಬಂದವು. ಇದು ಗೋಷ್ಠಿಯ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಸಭಿಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT