ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಂಪಿ ವಿರೂಪಾಕ್ಷ ರಥಬೀದಿಯ ಸಾಲು ಮಂಟಪ ಕುಸಿತ

Published 21 ಮೇ 2024, 16:28 IST
Last Updated 21 ಮೇ 2024, 16:28 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿ ವಿರೂಪಾಕ್ಷ ದೇವಸ್ಥಾನದ ರಥಬೀದಿಯಲ್ಲಿರುವ ಸಾಲು ಮಂಟಪಗಳ ಪೈಕಿ ಒಂದು ಮಂಟಪ ಮಂಗಳವಾರ ರಾತ್ರಿ ಕುಸಿದಿದ್ದು, ಇನ್ನೂ ಹಲವು ಸಾಲು ಮಂಟಪಗಳು ಕುಸಿಯುವ ಸ್ಥಿತಿಯಲ್ಲಿವೆ.

ಸೋಮವಾರ ರಾತ್ರಿ ಹಂಪಿ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿತ್ತು. ಮೂರು ಸಾಲು ಮಂಟಪಗಳು ಕುಸಿದಿವೆ ಎಂದು ಪ್ರವಾಸಿ ಮಾರ್ಗದರ್ಶಿಗಳು ತಿಳಿಸಿದ್ದರೂ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅದನ್ನು ನಿರಾಕರಿಸಿದೆ, ಬಿದ್ದಿರುವುದು ಒಂದು ಮಂಟಪ ಮಾತ್ರ ಎಂದು ಹೇಳಿದೆ.

ದೇವಸ್ಥಾನದ ಎಡಬದಿಯಲ್ಲಿ ಒಂದೊಂದಾಗಿ ಸಾಲು ಮಂಟಪಗಳ ಪುನಶ್ಚೇತನ ಕಾರ್ಯವನ್ನು ಎಎಸ್‌ಐ ನಡೆಸುತ್ತಿರುವಾಗಲೇ ಸಮೀಪದಲ್ಲೇ ಇರುವ ಈ ಮಂಟಪ ಕುಸಿದಿದೆ.

‘ಮೂರು ಮಂಟಪ ಕುಸಿದಿಲ್ಲ, ಒಂದು ಮಂಟಪವಷ್ಟೇ ಕುಸಿದಿರುವ ಬಗ್ಗೆ ನನಗೆ ಈಗ ಮಾಹಿತಿ ಬಂದಿದೆ. ಸಾಲು ಮಂಟಪಗಳಲ್ಲಿ ಹಲವು ಮಂಟಪಗಳು ಕುಸಿಯುವ ಸ್ಥಿತಿಯಲ್ಲಿರುವುದು ನಿಜ. ಎಎಸ್‌ಐ ವತಿಯಿಂದ ಹಂತ ಹಂತವಾಗಿ ಪುನಶ್ಚೇತನ ಕಾರ್ಯ ನಡೆಯುತ್ತಿದೆ. ಎಲ್ಲವನ್ನೂ ಒಮ್ಮೆಗೇ ಕೈಗೆತ್ತಿಕೊಂಡು ಮಾಡಬಹುದಾದಷ್ಟು ದುಡ್ಡೂ ಇಲ್ಲ, ಮಾನವ ಸಂಪನ್ಮೂಲವೂ ಇಲ್ಲ. ಸಾಧ್ಯವಾದ ಮಟ್ಟಿಗೆ ಸ್ಮಾರಕಗಳನ್ನು ಹೇಗಿದೆಯೋ ಹಾಗೆಯೇ ಉಳಿಸಿಕೊಳ್ಳಲು ಯತ್ನಿಸಲಾಗುತ್ತಿದೆ’ ಎಂದು ಎಎಸ್‌ಐ ಹಂಪಿ ವೃತ್ತದ ಅಧೀಕ್ಷಕ ನಿಹಿಲ್ ದಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪುನಶ್ಚೇತನ ಕೆಲಸ ಮಾಡುತ್ತಿರುವುದು ಸರಿ, ಕುಸಿಯುವ ಹಂತದಲ್ಲಿರುವ ಮಂಟಪಗಳನ್ನು ಕುಸಿಯದಂತೆ ಮಾಡುವ ಕೆಲಸವನ್ನು ಎಎಸ್‌ಐ ಮೊದಲಿಗೆ ಮಾಡಬೇಕಿತ್ತು. ಒಂದು ಬಾರಿ ಪ್ರಾಚೀನ ಕಲ್ಲಿನ ಮಂಟಪ ಕುಸಿಯಿತು ಎಂದಾದರೆ ಅದನ್ನು ಮರುಸೃಷ್ಟಿ ಮಾಡಲು ಸಾಧ್ಯವೇ ಇಲ್ಲ. ಮುಂದಿನ ಪೀಳಿಗೆಗೆ ಹಂಪಿಯ ಗತಕಾಲದ ವೈಭವವನ್ನು ಉಳಿಸಲು ಇನ್ನಾದರೂ ಗಂಭೀರ ಚಿಂತನೆ ನಡೆಸಬೇಕು’ ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆಯ ಅಧ್ಯಕ್ಷ ವಿಶ್ವನಾಥ ಮಾಳಗಿ ಒತ್ತಾಯಿಸಿದರು.

‘ನೆಲಮಾಳಿಗೆಯ ಶಿವ ದೇವಸ್ಥಾನದಲ್ಲಿ ಒಂದು ಸಣ್ಣ ಭಾಗ ಕುಸಿದು ಒಂದು ವರ್ಷ ಕಳೆದಿದೆ. ಅದರ ದುರಸ್ತಿ ನಡೆದೇ ಇಲ್ಲ, ಕುಸಿದ ಕಲ್ಲನ್ನು ಆಚೀಚೆ ಇಡಲೂ ಸಾಧ್ಯವಾಗಿಲ್ಲ. ಎಎಸ್‌ಐ ಯಾಕೆ ಹೀಗೆ ವರ್ತಿಸುತ್ತಿದೆಯೋ ಗೊತ್ತಿಲ್ಲ. ಮುಂದಿನ ಪೀಳಿಗೆ ಹಂಪಿಯ ಸೌಂದರ್ಯವನ್ನು ನೋಡುವುದರಿಂದ ವಂಚಿಸುವ ಕೆಲಸ ಮಾಡಬಾರದು ಎಂಬುದಷ್ಟೇ ನಮ್ಮ ಕಳಕಳಿ’ ಎಂದು ಪ್ರವಾಸಿ ಮಾರ್ಗದರ್ಶಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT