ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀರಿನ ವ್ಯವಸ್ಥೆ ಸುಧಾರಣೆಗೆ ₹17 ಕೋಟಿ

ನಗರಸಭೆಯಿಂದ ₹80 ಕೋಟಿ ಬಜೆಟ್‌ ಮಂಡನೆ; ಆರು ಸಾವಿರ ನಿವೇಶನ, ಮನೆ
Last Updated 14 ಮಾರ್ಚ್ 2023, 5:21 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ನಗರಸಭೆಯಲ್ಲಿ ಸೋಮವಾರ 2023–24ನೇ ಸಾಲಿನ ಬಜೆಟ್‌ ಮಂಡಿಸಲಾಗಿದ್ದು, ನಗರದಲ್ಲಿ ಕಲುಷಿತ ನೀರಿನಿಂದ ಉದ್ಭವಿಸಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೆಚ್ಚಿನ ಒತ್ತು ಕೊಡಲಾಗಿದೆ.

ಇದಕ್ಕೆ ಸಾಕ್ಷಿ ಬಜೆಟ್‌ನಲ್ಲಿ ಅದಕ್ಕೆ ಕಾಯ್ದಿರಿಸಿರುವ ಹೆಚ್ಚಿನ ಅನುದಾನ. ನಗರಸಭೆ ಉಪಾಧ್ಯಕ್ಷ ಎಲ್‌.ಎಸ್‌. ಆನಂದ್‌ ಅವರು ಒಟ್ಟು ₹80.04 ಕೋಟಿ ಮೊತ್ತದ ಬಜೆಟ್‌ ಮಂಡಿಸಿದರು. ಇದರಲ್ಲಿ ₹12 ಕೋಟಿ ಅನುದಾನ ಸಗಟು ನೀರಿನ ವ್ಯವಸ್ಥೆ ಸುಧಾರಣೆಗೆ ಮೀಸಲಿಡಲಾಗಿದೆ. ಜಿಲ್ಲಾ ಖನಿಜ ನಿಧಿ ಯೋಜನೆಯಲ್ಲಿ ಕೆಲಸ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಇಷ್ಟೇ ಅಲ್ಲ, 24X7 ಅವೈಜ್ಞಾನಿಕ ಕಾಮಗಾರಿಗೂ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ. ನೀರು ಸರಬರಾಜಿನ ಮಿಸ್ಸಿಂಗ್‌ ಲಿಂಕ್‌ ಹಾಗೂ ಇತರೆ ದುರಸ್ತಿಗಾಗಿ ₹5.2 ಕೋಟಿ ಅನುದಾನ ತೆಗೆದಿರಿಸಲು ತೀರ್ಮಾನಿಸಲಾಗಿದೆ. ಈಗಾಗಲೇ 24X7 ಕಾಮಗಾರಿಗೆ ₹80 ಕೋಟಿಗೂ ಅಧಿಕ ವೆಚ್ಚವಾಗಿದೆ. ಆದರೆ, ನಗರದ ಬಹುತೇಕ ವಾರ್ಡ್‌ಗಳಿಗೆ ಶುದ್ಧ ನೀರು ಪೂರೈಕೆಯಾಗುತ್ತಿಲ್ಲ.

ನೀರು ಸರಬರಾಜು, ಘನತ್ಯಾಜ್ಯ ವಸ್ತುಗಳ ನಿರ್ವಹಣೆ, ಕೊಳೆಗೇರಿ ಅಭಿವೃದ್ಧಿ, ಮಳೆ ನೀರು ಚರಂಡಿ ಕಾಮಗಾರಿ, ಸ್ಮಶಾನಗಳ ಅಭಿವೃದ್ಧಿಗೆ ₹11.50 ಕೋಟಿ, ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಅಭಿವೃದ್ಧಿ, ಅಂಗವಿಕಲರು, ಪೌರಕಾರ್ಮಿಕರ ವೇತನಕ್ಕಾಗಿ ₹3.55 ಕೋಟಿ, ಎಲ್ಲ 35 ವಾರ್ಡ್‌ಗಳಲ್ಲಿ ₹75 ಲಕ್ಷದಲ್ಲಿ 2 ಸಾವಿರ ವೈಯಕ್ತಿಕ ಶೌಚಾಲಯ ನಿರ್ಮಾಣ, ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಇನ್ನೂ 3 ಹೊಸ ಬೀದಿ ಬೀದಿ ವ್ಯಾಪಾರಿಗಳ ವಲಯ ನಿರ್ಮಿಸಲು ತೀರ್ಮಾನಿಸಲಾಗಿದ್ದು, ₹60.40 ಲಕ್ಷ ಮೀಸಲಿಡಲಾಗಿದೆ.

ವಸತಿರಹಿತರು ಮತ್ತು ಮನೆ ಇಲ್ಲದವರಿಗೆ ಕೆಎಂಇಆರ್‌ಎಲ್‌ ಯೋಜನೆಯಡಿಯಲ್ಲಿ 6 ಸಾವಿರ ನಿವೇಶನ, ಮನೆ ನಿರ್ಮಾಣಕ್ಕೆ ₹150 ಕೋಟಿ ಪ್ರಸ್ತಾವ ಸಲ್ಲಿಕೆ, ಪೌರಕಾರ್ಮಿಕರಿಗೆ ಜಿ+2 ಮಾದರಿಯಲ್ಲಿ 104 ಮನೆ ನಿರ್ಮಾಣ, ಹಿಂದಿನ ವರ್ಷ ಸಾವಿರ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಈ ಸಂಖ್ಯೆ ಎರಡು ಸಾವಿರ ಮಾಡಲು ತೀರ್ಮಾನಿಸಲಾಗಿದ್ದು, ಅದಕ್ಕಾಗಿ ₹15 ಲಕ್ಷ ಮೀಸಲಿಡಲಾಗಿದೆ. ನಗರದ ಹತ್ತು ಪ್ರಮುಖ ಸ್ಥಳಗಳಲ್ಲಿ ಮಾದರಿ ಸುಲಭ ಶೌಚಾಲಯ ನಿರ್ಮಾಣ ಹಾಗೂ ಪಿಪಿಪಿ ಮಾದರಿಯಲ್ಲಿ ಸುಸಜ್ಜಿತ ಶೌಚಾಲಯಕ್ಕೆ ಕ್ರಮ ವಹಿಸಲಾಗಿದೆ.

ನಗರಸಭೆ ನೌಕರರು/ ಅಧಿಕಾರಿಗಳಿಗೆ ₹1.50 ಕೋಟಿಯಲ್ಲಿ ವಸತಿ ಗೃಹ, ಅದಕ್ಕಾಗಿ ಪೌರ ಸೇವಾ ನೌಕರರ ಕಾಲೊನಿ ನಿರ್ಮಾಣ, ಅಂಗವಿಕಲರ ಕ್ಷೇಮಾಭಿವೃದ್ಧಿಗೆ ₹30 ಲಕ್ಷ, ಸ್ಮಶಾನಗಳ ಅಭಿವೃದ್ಧಿಗೆ ₹76 ಲಕ್ಷ, ಪೌರ ಕಾರ್ಮಿಕರ ಆರೋಗ್ಯ, ವಿಶ್ರಾಂತಿಗಾಗಿ ನಗರಸಭೆ ಬಳಿ ವಿಶ್ರಾಂತಿ ಗೃಹ ನಿರ್ಮಾಣ ಮಾಡಲಾಗುವುದು. ಸ್ತ್ರೀಶಕ್ತಿ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಯಂ ಉದ್ಯೋಗ ತರಬೇತಿ ಕೇಂದ್ರ ಸ್ಥಾಪನೆ, ಸಾರ್ವಜನಿಕರ ಅನುಕೂಲಕ್ಕಾಗಿ ನಗರಸಭೆ ಕಚೇರಿಯಲ್ಲೇ ಎಚ್‌ಡಿಎಫ್‌ಸಿ ಬ್ಯಾಂಕ್‌ ಕ್ಯಾಶ್‌ ಕೌಂಟರ್‌ ಆರಂಭ, ನಗರದ ಸೌಂದರ್ಯ ವರ್ಧನೆಗೆ ₹25 ಲಕ್ಷದಲ್ಲಿ ಸಸಿ ನೆಡಲು ತೀರ್ಮಾನ. ಇದಿಷ್ಟು ಬಜೆಟ್‌ನಲ್ಲಿರುವ ಪ್ರಮುಖ ಅಂಶಗಳು.

ಜೂ. 1ರಿಂದ ಕಾಗದರಹಿತ ಕಚೇರಿ; ಫಾರಂ 3 ವಿತರಣೆಗೆ ಏಕ ಗವಾಕ್ಷಿ:

ಬರುವ ಜೂನ್‌ 1ರಿಂದ ಹೊಸಪೇಟೆ ನಗರಸಭೆ ಕಾಗದರಹಿತ ಕಚೇರಿಯಾಗಿ ಕೆಲಸ ನಿರ್ವಹಿಸಲಿದೆ. ಇಂತಹದ್ದೊಂದು ಭರವಸೆ ಬಜೆಟ್‌ನಲ್ಲಿ ಕೊಡಲಾಗಿದೆ. ಎಲ್ಲ ಕೆಲಸಗಳು ಸಂಪೂರ್ಣ ಡಿಜಿಟಲೀಕರಣಗೊಳ್ಳಲಿವೆ. ಕಂದಾಯ ಇಲಾಖೆಯ ಯೋಜನೆಯ ಅಡಿಯಲ್ಲಿ ಏಕ ಗವಾಕ್ಷಿ ಮಾದರಿಯಲ್ಲಿ ಫಾರಂ 3 ವಿತರಣೆಗೆ ಕ್ರಮ ವಹಿಸಲು ನಿರ್ಧರಿಸಲಾಗಿದೆ.

ನಗರದಲ್ಲಿ ಸಂಚಾರ ಸುಧಾರಣೆಗೆ ಪೊಲೀಸ್‌ ಇಲಾಖೆಗೆ ₹1 ಕೋಟಿ. ಎಲ್ಲೆಂದರಲ್ಲಿ ಕಸ ಚೆಲ್ಲದಂತೆ ನಿಗಾ ವಹಿಸಲು 50 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ. ಜೊತೆಗೆ ರಸ್ತೆಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ‘ಗ್ರೀನ್‌ ಸ್ಕ್ವಾಡ್‌’ ತಂಡ ರಚಿಸುವ ತೀರ್ಮಾನ ಘೋಷಿಸಲಾಯಿತು.

‘ಕಬ್ಬಿನ ಗದ್ದೆಯಲ್ಲಿ ವಾಕ್‌ ಉತ್ತಮ’:

‘ನಮ್ಮ ವಾರ್ಡ್‌ ಹಳ್ಳಿಯಾದ್ರು ನಗರಸಭೆಗೆ ಸೇರಿದೆ. ಯಾವುದೇ ವ್ಯವಸ್ಥೆ ಸರಿಯಿಲ್ಲ. ಇತರೆ ವಾರ್ಡ್‌ಗಳಂತೆ ಅಭಿವೃದ್ಧಿ ಹೊಂದಬೇಕು. ವಾರ್ಡ್‌ನಲ್ಲಿ ಒಂದೇ ಒಂದು ಉದ್ಯಾನ ಇಲ್ಲ. ಒಂದು ಹೊಸ ಪಾರ್ಕ್‌ ನಿರ್ಮಿಸಬೇಕು’ ಎಂದು ಸದಸ್ಯ ಹುಲುಗಪ್ಪ ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷೆ ಸುಂಕಮ್ಮ, ‘ನಿಮ್ಮ ವಾರ್ಡ್‌ನಲ್ಲಿ ಹೊಲಗಳಿವೆ. ಅಲ್ಲೇ ವಾಕ್‌ ಮಾಡಬೇಕು. ಕಬ್ಬಿನ ಗದ್ದೆಯಲ್ಲಿ ವಾಕ್‌ ಮಾಡಿದರೆ ಉತ್ತಮ’ ಎಂದು ಸಲಹೆ ನೀಡಿದಾಗ ಇಡೀ ಸಭೆ ನಗೆಗಡಲಲ್ಲಿ ತೇಲಿತು.

‘ಮಹಿಳಾ ದಿನಾಚರಣೆಗೆ ಪ್ರೋತ್ಸಾಹ ಸಿಗಲಿ’:

‘ಮಾರ್ಚ್‌ 8ರಂದು ಮಹಿಳಾ ದಿನ ಎಲ್ಲ ಕಡೆಗಳಲ್ಲಿ ಆಚರಿಸಲಾಗಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ಸಿಗುವ ಕಾರ್ಯಕ್ರಮಗಳಾಗಿಲ್ಲ. ಈ ಕೆಲಸ ಆಗಬೇಕು’ ಎಂದು ನಾಮನಿರ್ದೇಶಿತ ಸದಸ್ಯೆ ಗೀತಾ ಶಂಕರ್‌ ಸಭೆಯ ಗಮನ ಸೆಳೆದರು.

‘ಮಾರ್ಚ್‌ 31ರೊಳಗೆ ಮಹಿಳಾ ದಿನ ಆಚರಿಸಲಾಗುವುದು. ಸ್ತ್ರೀಶಕ್ತಿ ಸಂಘಗಳನ್ನು ಆಹ್ವಾನಿಸಲಾಗುವುದು. ಮಹಿಳೆಯರಿಗಾಗಿ ಸ್ವಯಂ ಉದ್ಯೋಗ ಯೋಜನೆಯಡಿ ತರಬೇತಿ ಕೇಂದ್ರ ಆರಂಭಿಸಿ, ಸ್ವಯಂ ಉದ್ಯೋಗಕ್ಕಾಗಿ ವಿವಿಧ ಬಗೆಯ ತರಬೇತಿ ಕೊಡಲಾಗುವುದು’ ಎಂದು ಪೌರಾಯುಕ್ತ ಮನೋಹರ್‌ ನಾಗರಾಜ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT