ಬುಧವಾರ, ಆಗಸ್ಟ್ 10, 2022
25 °C
ಎರಡೂ ಪ್ರತ್ಯೇಕ ಕ್ರೀಡಾಂಗಣಗಳನ್ನು ಸೇರಿಸಿ ವಿಶಾಲ ಮೈದಾನ ನಿರ್ಮಾಣ

ಬದಲಾಗಲಿದೆ ಹೊಸಪೇಟೆ ಜಿಲ್ಲಾ ಕ್ರೀಡಾಂಗಣ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಕೆಲವೇ ತಿಂಗಳಲ್ಲಿ ನಗರದ ಕೇಂದ್ರ ಭಾಗದಲ್ಲಿರುವ ಜಿಲ್ಲಾ ಕ್ರೀಡಾಂಗಣದ ಚಹರೆ ಸಂಪೂರ್ಣ ಬದಲಾಗಲಿದೆ.

ತಾಲ್ಲೂಕು ಕ್ರೀಡಾಂಗಣ, ಮುನ್ಸಿಪಲ್‌ ಮೈದಾನವೆಂದು ಪ್ರತ್ಯೇಕವಾಗಿದ್ದ ಎರಡೂ ಜಾಗಗಳನ್ನು ಸೇರಿಸಿ, ವಿಶಾಲ ತೆರೆದ ಮೈದಾನವನ್ನು ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಇಷ್ಟೇ ಅಲ್ಲ, ಕ್ರೀಡಾಂಗಣ ನಿರ್ಮಿಸುವ ನಿರ್ಧಾರ ಕೈಬಿಡಲಾಗಿದೆ. ನಗರದ ಹೊರಭಾಗದಲ್ಲಿ ಇನ್ನಷ್ಟೇ ಸ್ಥಳ ಗುರುತಿಸಿ, ಹೊಸ ಕ್ರೀಡಾಂಗಣ ನಿರ್ಮಿಸಬೇಕಿದೆ.

ಹಾಲಿ ಕ್ರೀಡಾಂಗಣದ ಮಧ್ಯ ಭಾಗದಲ್ಲಿರುವ ಮೆಟ್ಟಿಲು ಮಾದರಿ ಆಸನ, ಸ್ಟೋರ್‌ ರೂಂ, ಕ್ರೀಡಾ ಅಧಿಕಾರಿಯ ಕಚೇರಿಯನ್ನು ತೆರವುಗೊಳಿಸಲಾಗುತ್ತಿದೆ. ಕ್ರೀಡಾಂಗಣದ ಸುತ್ತಲೂ ನಿರ್ಮಿಸಲಾಗಿದ್ದ ಹಳೆಯ ಕಾಂಪೌಂಡ್‌ ತೆರವು ಮಾಡಲಾಗುತ್ತಿದೆ. ಇದಾದ ನಂತರ ವಾಲಿಬಾಲ್‌ ಅಂಗಳವನ್ನು ಬೇರೆಡೆ ಸ್ಥಳಾಂತರಿಸಲಾಗುತ್ತದೆ.

ಬಳಿಕ ಮಣ್ಣಿನಿಂದ ನೆಲ ಸಮತಟ್ಟು ಮಾಡಿಕೊಂಡು, ಮಳೆ ನೀರು ನಿಲ್ಲದಂತೆ ಮಾಡಲಾಗುತ್ತದೆ. ಸುತ್ತಲೂ ಬೇಸ್‌ಮೆಂಟ್‌ ನಿರ್ಮಿಸಿ, ಅದಕ್ಕೆ ಗ್ರಿಲ್‌ ಅಳವಡಿಸಲಾಗುತ್ತದೆ. ವಿಶಾಲ ಮೈದಾನ ಇರುವುದರಿಂದ ಒಳಗೆ ಬಂದು ಹೋಗುವವರ ಅನುಕೂಲಕ್ಕಾಗಿ ನಾಲ್ಕೈದು ಕಡೆಗಳಲ್ಲಿ ಪ್ರವೇಶ ದ್ವಾರ ನಿರ್ಮಿಸುವ ಯೋಜನೆಯೂ ಇದೆ. ಸುತ್ತಲೂ ವಾಕಿಂಗ್‌ ಪಥ ನಿರ್ಮಿಸಿ, ಪ್ರತಿ ಹತ್ತು ಅಡಿಗಳ ಅಂತರದಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸಿ, ಅಗತ್ಯ ಇರುವ ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.

ಸುತ್ತಲೂ ಮರ, ಗಿಡಗಳನ್ನು ಬೆಳೆಸಲಾಗುತ್ತದೆ. ಮೈದಾನದ ಮಧ್ಯ ಭಾಗದಲ್ಲಿ 405 ಅಡಿ ಎತ್ತರದ ಧ್ವಜ ಸ್ತಂಭ ಪ್ರತಿಷ್ಠಾಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಆರಂಭಿಕ ಹಂತದಲ್ಲಿ ₹2.94 ಕೋಟಿಯಲ್ಲಿ ಮೈದಾನ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಉದ್ಯಾನದ ಅಭಿವೃದ್ಧಿಯ ಹೊಣೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ.

‘ಈ ಹಿಂದೆ ಎರಡೂ ಜಾಗಗಳನ್ನು ಸೇರಿಸಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ, ಅದನ್ನು ಕೈಬಿಡಲಾಗಿದೆ. ನಗರದ ಮಧ್ಯಭಾಗದಲ್ಲಿರುವ ವಿಶಾಲ ಜಾಗ ಇದಾಗಿದ್ದು, ‘ಬ್ರೀತಿಂಗ್‌ ಸ್ಪೇಸ್‌’ ಇರಲಿ ಎನ್ನುವ ಕಾರಣಕ್ಕಾಗಿ ತೆರೆದ ಮೈದಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಸುತ್ತಲೂ ಗ್ರಿಲ್‌ ಅಳವಡಿಸಿ, ಅಗತ್ಯ ಸೌಕರ್ಯ ಕಲ್ಪಿಸಲಾಗುತ್ತದೆ. ಹಿರಿಯ ನಾಗರಿಕರು, ಯುವಕರು ಸೇರಿದಂತೆ ಎಲ್ಲ ವಯೋಮಾನದವರು ಬಂದು ಹೋಗುವ ರೀತಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಇದೆ’ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಿಶೋರ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು