ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನಹಡಗಲಿ: ‘2ಬಿ’ ಮೀಸಲಾತಿ ರದ್ದು- ಮುಸ್ಲಿಮರ ಆಕ್ರೋಶ

Last Updated 30 ಮಾರ್ಚ್ 2023, 13:05 IST
ಅಕ್ಷರ ಗಾತ್ರ

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಅಲ್ಪಸಂಖ್ಯಾತರ ‘2ಬಿ’ ಮೀಸಲಾತಿ ರದ್ದತಿ ವಿರೋಧಿಸಿ ಮುಸ್ಲಿಂ ಸಮುದಾಯವರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಶಾಸ್ತ್ರಿ ವೃತ್ತದಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿ, ಮೀಸಲಾತಿ ರದ್ದುಪಡಿಸಿದ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೀಸಲಾತಿ ಯಥಾವತ್ತಾಗಿ ಮುಂದುವರಿಸಲು ಒತ್ತಾಯಿಸಿ ತಹಶೀಲ್ದಾರ್ ಕೆ.ಶರಣಮ್ಮ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಹಿರಿಯ ಮುಖಂಡ ಸಿ.ಚಾಂದಸಾಹೇಬ್ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಧರ್ಮಾಧಾರಿತ ಮೀಸಲಾತಿ ಸಂವಿಧಾನ ಬಾಹಿರ ಎಂದು ಹೇಳಿದ್ದಾರೆ. ಹಾಗಾದರೆ ಧರ್ಮಾಧಾರಿತ ರಾಜಕಾರಣ, ಭಾಷಣ, ಧರ್ಮಾಧಾರಿತ ಚುನಾವಣಾ ಪ್ರಚಾರ ಸಂವಿಧಾನ ಬಾಹಿರವಲ್ಲವೇ ಎಂದು ಪ್ರಶ್ನಿಸಿದರು.

ಭಾರತದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಂ ಸಮುದಾಯದ ಸಾವಿರಾರು ಜನರು ಪ್ರಾಣತ್ಯಾಗ ಮಾಡಿದ್ದಾರೆ. ನಾವು ದೇಶದ ಮೂಲ ನಿವಾಸಿಗಳಾಗಿದ್ದು, ಮೀಸಲಾತಿ ನಮ್ಮ ಸಾಂವಿಧಾನಿಕ ಹಕ್ಕು. ಹೋರಾಟ ತೀವ್ರ ಸ್ವರೂಪ ಪಡೆಯುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಮೀಸಲಾತಿ ರದ್ದತಿ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಮುಖಂಡ ಕೆ.ಗೌಸ್ ಮೊಹಿದ್ದೀನ್ ಮಾತನಾಡಿ, ಮುಸ್ಲಿಮರ ಮೀಸಲಾತಿಯನ್ನು ಕಿತ್ತು ಬೇರೆ ಸಮುದಾಯಗಳಿಗೆ ಹಂಚಿಕೆ ಮಾಡುವ ಮೂಲಕ ಸರ್ಕಾರವೇ ಜಾತಿ ಜಗಳ ಹಚ್ಚಿದೆ. ಎಲ್ಲರೊಂದಿಗೆ ಸೌಹಾರ್ದದೊಂದಿಗೆ ಬದುಕುವ ಮುಸ್ಲಿಮರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮೀಸಲಾತಿ ರದ್ದುಪಡಿಸಿರುವುದು ಸಂವಿಧಾನ ಬಾಹಿರ ಎಂದು ಕಿಡಿಕಾರಿದರು.

ಬಾವಿಹಳ್ಳಿ ಗೌಸ್ ಸಾಬ್ ಮಾತನಾಡಿ, ಮುಸ್ಲಿಮರಿಗೂ ದೇಶಾಭಿಮಾನವಿದೆ. ದೇಶದ್ರೋಹಿಗಳಿದ್ದರೆ ಅವರಿಗೆ ತಕ್ಕ ಶಿಕ್ಷೆ ಕೊಡಿ ಬದಲಾಗಿ ಇಡೀ ಸಮುದಾಯವನ್ನು ಅನುಮಾನಿಸಬೇಡಿ. ರಾಜಕಾರಣಕ್ಕಾಗಿ ಜಾತಿ, ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುವುದು ಸರಿಯಲ್ಲ. ‘2ಬಿ’ ಮೀಸಲಾತಿಯನ್ನು ಯಥಾವತ್ತಾಗಿ ಉಳಿಸಿಕೊಡಬೇಕು ಎಂದು ಒತ್ತಾಯಿಸಿದರು.

ಯುವ ಮುಖಂಡ ಕೆ.ಎಸ್.ಶಬ್ಬೀರ್ ಮಾತನಾಡಿ, ದೇಶದ ಅಭಿವೃದ್ಧಿಗೆ ನಾವೂ ತೆರಿಗೆ ಕಟ್ಟುವುದರಿಂದ ಮೀಸಲಾತಿಯಲ್ಲಿ ನಮಗೂ ಸಾಂವಿಧಾನಿಕ ಹಕ್ಕಿದೆ. ಮೀಸಲಾತಿ ರದ್ದತಿಯಿಂದ ವಾರ್ಷಿಕ 300 ವೈದ್ಯಕೀಯ ಶಿಕ್ಷಣ ಸೀಟುಗಳು, 1600 ಎಂಜಿನಿಯರಿಂಗ್ ಸೀಟುಗಳು ನಮ್ಮ ಸಮುದಾಯದ ಮಕ್ಕಳ ಕೈ ತಪ್ಪಲಿವೆ. ಹಲವರು ಉದ್ಯೋಗ ವಂಚಿತರಾಗುತ್ತಾರೆ. ಹಿಜಾಬ್, ಹಲಾಲ್ ಕಟ್, ಜಟ್ಕಾ ಕಟ್ ಮುಂತಾದ ವಿವಾದಗಳನ್ನು ಸರ್ಕಾರ ಸೃಷ್ಟಿಸಿದಾಗ ನಾವು ಸುಮ್ಮನಿದ್ದೆವು. ಈಗ ಬದುಕಿಗೆ ಕೊಳ್ಳಿ ಇಟ್ಟಿರುವುದರಿಂದ ಸುಮ್ಮನಿರಲು ಸಾಧ್ಯವಿಲ್ಲ. ಸರ್ಕಾರದ ಕ್ರಮ ವಿರೋಧಿಸಿ ಬೀದಿಗಿಳಿಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸರ್ಜಪ್ಪನವರ ಶಫಿವುಲ್ಲಾ, ಬಿ.ಅಬೂಬಕರ್, ಎಂ.ಅಬ್ದುಲ್ ವಾಜೀದ್ ಇತರರು ಮಾತನಾಡಿದರು. ಎಚ್.ಶೇಕ್ ಮಹ್ಮದ್, ಹುಲಿಗಿ ದಾವಲ್ ಮಾಲಿಕ್, ಮಾಣಿಕ ಬಾಷಾ, ಎಂ.ರಾಜಾ, ಮುಲ್ಲಾ ಗೌಸ್ ಸಾಬ್, ವಾರದ ಸಿಖಂದರ್, ಇಸಾಕ್ ಸಾಬ್, ಕೊಟ್ಟೂರು ಗೌಸ್,, ಬಿಚ್ಚುಗತ್ತಿ ಖಾಜಾಹುಸೇನ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT