ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಜನ ನಮ್ಮ ಧ್ವನಿ: ಮಾರ್ಗಸೂಚಿ ಪಾಲಿಸದ ಲೇಔಟ್‌ಗಿಲ್ಲ ಅನುಮತಿ

ಷರತ್ತು ಪೂರೈಸದ 15 ಲೇಔಟ್‌ ಮಾಲೀಕರಿಗೆ ಹುಡಾದಿಂದ ನೋಟಿಸ್‌
Last Updated 5 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಸರ್ಕಾರದ ಮಾರ್ಗಸೂಚಿ ಪಾಲಿಸದ ಹೊಸ ಲೇಔಟ್‌ಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರವು (ಹುಡಾ) ಅನುಮತಿಯೇ ನೀಡುತ್ತಿಲ್ಲ. ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರ ಪರಿಣಾಮ ಲೇಔಟ್‌ ನಿರ್ಮಿಸುವವರಿಗೆ ನಿಯಮ ಪಾಲಿಸುವುದು ಅನಿವಾರ್ಯವಾಗಿದೆ.

ಹೊಸ ಲೇಔಟ್‌ ನಿರ್ಮಿಸಬೇಕಾದರೆ ಅನುಮತಿ ಪಡೆದು, ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಹೊಸ ಲೇಔಟ್‌ನಲ್ಲಿ ರಸ್ತೆ, ಒಳಚರಂಡಿ, ಕುಡಿಯುವ ನೀರಿನ ಸಂಪರ್ಕ, ವಿದ್ಯುತ್‌ ಸಂಪರ್ಕ ಹಾಗೂ ಉದ್ಯಾನ ನಿರ್ಮಿಸಬೇಕು. ಆಗ ಮಾತ್ರ ಲೇಔಟ್‌ನಲ್ಲಿ ನಿವೇಶನ ಮಾರಾಟಕ್ಕೆ ಅನುಮತಿ ನೀಡಲಾಗುತ್ತಿದೆ.

ಇದರಲ್ಲಿ ಯಾವುದಾದರೂ ಒಂದರಲ್ಲಿ ಕೊರತೆ ಕಂಡು ಬಂದರೂ ನಗರಾಭಿವೃದ್ಧಿ ಪ್ರಾಧಿಕಾರ ಅನುಮತಿ ನಿರಾಕರಿಸತ್ತಿದೆ. ಈ ಕ್ರಮ ಕೆಲವರಿಗೆ ಆರಂಭದಲ್ಲಿ ಬೇಸರ ತರಿಸಿತ್ತು. ಎಷ್ಟೇ ಒತ್ತಡ ತಂದರೂ ನಿಯಮ ಪಾಲಿಸದವರಿಗೆ ಅನುಮತಿ ಕೊಡದ ಕಾರಣ ಈಗ ಅನಿವಾರ್ಯವಾಗಿ ಎಲ್ಲರೂ ನಿಯಮ ಪಾಲಿಸುತ್ತಿದ್ದಾರೆ. ಹೀಗಾಗಿಯೇ ಹೊಸ ಲೇಔಟ್‌ಗಳು ಸಕಲ ಸೌಕರ್ಯದಿಂದ ನಿರ್ಮಾಣಗೊಳ್ಳುತ್ತಿವೆ.

ಕಠಿಣ ಕ್ರಮವೇಕೆ?: ಈ ಹಿಂದೆ ಕೃಷಿ ಜಮೀನನ್ನು ಕೃಷಿಯೇತರ ಜಮೀನಾಗಿ ಪರಿವರ್ತಿಸಿದ ನಂತರ ಅಲ್ಲಿ ಲೇಔಟ್‌ ನಿರ್ಮಾಣಕ್ಕೆ ಅನುಮತಿ ಪಡೆಯಲಾಗುತ್ತಿತ್ತು. ನಂತರ ರಸ್ತೆ, ಒಳಚರಂಡಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸದೆಯೇ ನಿವೇಶನಗಳನ್ನು ಮಾರಾಟ ಮಾಡಲಾಗುತ್ತಿತ್ತು. ಹತ್ತಾರು ವರ್ಷಗಳಾದರೂ ಸೌಕರ್ಯ ಸಿಗುತ್ತಿರಲಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಕಠಿಣ ನಿಯಮ ಜಾರಿಗೆ ತಂದಿತು. ಆದರೂ, ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಸ್ಥಳೀಯ ಪ್ರಾಧಿಕಾರಗಳು ಯಾವುದನ್ನೂ ಪರಿಶೀಲಿಸದೇ ಅನುಮತಿ ನೀಡುತ್ತಿದ್ದವು. ಇಲ್ಲಿನ ಹುಡಾ ಅದಕ್ಕೆ ಅಪವಾದವೆಂಬಂತೆ ಕ್ರಮ ಜರುಗಿಸುತ್ತಿದೆ.

ಈ ಹಿಂದೆ ಲೇಔಟ್‌ಗಳಿಗೆ ಅನುಮತಿ ಪಡೆದ ಸುಮಾರು 15 ಲೇಔಟ್‌ ಮಾಲೀಕರಿಗೆ ಷರತ್ತುಗಳನ್ನು ಪಾಲಿಸುವಂತೆ ಸೂಚಿಸಿದೆ. ನಿಗದಿತ ಕಾಲಮಿತಿಯೊಳಗೆ ಷರತ್ತು ಪಾಲಿಸದಿದ್ದರೆ ಲೇಔಟ್‌ ಅನುಮತಿ ರದ್ದುಗೊಳಿಸುವ ಎಚ್ಚರಿಕೆಯನ್ನೂ ನೀಡಿದೆ. ಕೆಲವು ಪ್ರಕರಣಗಳು ಜಿಲ್ಲಾಧಿಕಾರಿ ನ್ಯಾಯಾಲಯದ ಅಂಗಳದಲ್ಲಿವೆ ಎಂದು ಹುಡಾ ಮೂಲಗಳು ತಿಳಿಸಿವೆ.

ವಿಜಯನಗರ ಜಿಲ್ಲೆಯಾದ ನಂತರ ಜಮೀನಿಗೆ ಚಿನ್ನದ ಬೆಲೆ ಬಂದಿದೆ. ಲೇಔಟ್‌ ನಿರ್ಮಿಸುವವರ ಸಂಖ್ಯೆ ಹೆಚ್ಚಾಗಿದೆ. ಹುಡಾ ಪ್ರತಿಯೊಂದನ್ನೂ ಪರಿಶೀಲಿಸಿದ ನಂತರ ಅನುಮತಿ ನೀಡುತ್ತಿರುವುದರಿಂದ ಹೊಸ ಲೇಔಟ್‌ಗಳ ನಿರ್ಮಾಣ ಸಂಖ್ಯೆ ನಿಧಾನಗತಿಯಲ್ಲಿ ನಡೆಯುತ್ತಿದೆ. ಹುಡಾದಿಂದ ಹಲವು ವರ್ಷಗಳ ಹಿಂದೆ ನಿರ್ಮಿಸಿದ ಲೇಔಟ್‌ಗಳಲ್ಲೂ ಸೌಕರ್ಯಗಳು ಮರೀಚಿಕೆಯಾಗಿದ್ದವು. ಈಗ ಅಲ್ಲಿ ಸೌಕರ್ಯ ಕಲ್ಪಿಸಲಾಗುತ್ತಿದೆ. ಅದಕ್ಕೆ ತಾಜಾ ನಿದರ್ಶನ ವಿನಾಯಕ ನಗರ. ಎಲ್ಲ ಸವಲತ್ತು ಒದಗಿಸಿದ ನಂತರವೇ ಲೇಔಟ್‌ಗಳಲ್ಲಿ ನಿವೇಶನ ಮಾರಾಟ ಮಾಡುತ್ತಿರುವುದರಿಂದ ಜನ ಹೈರಾಣುಗುವುದು ತಪ್ಪುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT