ಮಂಗಳವಾರ, ಸೆಪ್ಟೆಂಬರ್ 28, 2021
24 °C

ಕಿಕ್‌ಬ್ಯಾಕ್‌ ಅರ್ಥ ನನಗೆ ಗೊತ್ತಿಲ್ಲ: ಉಗ್ರಪ್ಪ ಆರೋಪಕ್ಕೆ ಆನಂದ್ ಸಿಂಗ್ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ‘ಕಿಕ್‌ಬ್ಯಾಕ್‌ ಅರ್ಥ ನನಗೆ ಗೊತ್ತಿಲ್ಲ. ಅದರ ಅರ್ಥ ಹೇಳಿದರೆ ಅದರ ಬಗ್ಗೆ ಪ್ರತಿಕ್ರಿಯಿಸುವೆ. ಕಿಕ್‌ಬ್ಯಾಕ್‌ ಅಂದರೆ ಹಿಂದೆ ಒದೆ ಎಂಬ ಮಾತಿದೆ. ಆದರೆ, ಈ ಕಿಕ್‌ಬ್ಯಾಕ್‌ ಅರ್ಥ ಗೊತ್ತಿಲ್ಲ’ ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಆನಂದ್‌ ಸಿಂಗ್‌ ವ್ಯಂಗ್ಯವಾಗಿ ಹೇಳಿದರು.

‘ಜಿಂದಾಲ್‌ಗೆ ಜಮೀನು ಪರಭಾರೆ ಮಾಡುವುದನ್ನು ಈ ಹಿಂದೆ ಬಲವಾಗಿ ವಿರೋಧಿಸಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಚಿವ ಆನಂದ್ ಸಿಂಗ್‌ ಹಾಗೂ ಬಿಜೆಪಿಯವರು ಈಗ ಅದನ್ನು ಮಾರಾಟ ಮಾಡಿರುವುದು ನೋಡಿದರೆ ಕಿಕ್‌ಬ್ಯಾಕ್‌ ಪಡೆದಿರುವ ಅನುಮಾನ ಬರುತ್ತಿದೆ’ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಮಾಡಿರುವ ಗಂಭೀರ ಆರೋಪದ ಕುರಿತು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

‘ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಯಾವುದೇ ಸರ್ಕಾರವಿರಲಿ ಕಾರ್ಖಾನೆಗಳಿಗೆ ಜಮೀನು ಮಾರಾಟ ಮಾಡುವುದಕ್ಕೆ ಈಗಲೂ ನನ್ನ ವಿರೋಧವಿದೆ. ಯಾವುದೇ ಕಾರ್ಖಾನೆಗೆ ಭೂಮಿ ಕೊಡಬೇಕಾದರೆ ನೀತಿ ರೂಪಿಸಬೇಕು. 50, 100  ಎಷ್ಟು ವರ್ಷಗಳಾದರೂ ಜಮೀನು ಕೊಡಲಿ. ಒಂದುವೇಳೆ ಭವಿಷ್ಯದಲ್ಲಿ ಕಾರ್ಖಾನೆ ಮುಚ್ಚಿದರೆ ಆ ಜಮೀನು ಪುನಃ ಸರ್ಕಾರಕ್ಕೆ ಸೇರಬೇಕು ಎನ್ನುವುದು ನನ್ನ ವಾದ’ ಎಂದು ಹೇಳಿದರು.
‘ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದರೆ ಸರ್ಕಾರದ ನಿರ್ಧಾರ ವಿರೋಧಿಸುತ್ತಿದ್ದೆ. ಆ ರೀತಿ ಮಾಡಬಾರದು ಅದು ತಪ್ಪು ಎನ್ನುವುದನ್ನು ಹೇಳುತ್ತಿದ್ದೆ. ಕೋವಿಡ್‌ ವ್ಯಾಪಕವಾಗಿ ಹರಡುತ್ತಿದೆ. ಮನುಷ್ಯರ ಪ್ರಾಣ ಮುಖ್ಯವಾಗಿದ್ದರಿಂದ ಸಂಪುಟ ಸಭೆಗೆ ಹೋಗುವುದರ ಬದಲು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಭೇಟಿ ನೀಡಿ ಕೋವಿಡ್‌ ನಿಯಂತ್ರಣಕ್ಕೆ ಏನೇನು ಕ್ರಮ ಕೈಗೊಳ್ಳಬಹುದು ಎನ್ನುವುದರ ಬಗ್ಗೆ ಸಮಾಲೋಚನೆಯಲ್ಲಿ ತೊಡಗಿದ್ದೆ. ಸಂಪುಟ ಸಭೆಯ ಅಜೆಂಡಾ ನೋಡಬೇಕಿತ್ತು. ಆದರೆ, ನನಗೆ ನೋಡಲು ಸಾಧ್ಯವಾಗಿರಲಿಲ್ಲ’ ಎಂದು ತಿಳಿಸಿದರು.

‘ಜಮೀನು ಪರಭಾರೆ ಮಾಡಿರುವುದಕ್ಕೆ ಆನಂದ್‌ ಸಿಂಗ್‌ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ನಾನು ಎಲ್ಲಿಯೂ ವಿಷಾದ ವ್ಯಕ್ತಪಡಿಸಿಲ್ಲ. ಈಗಲೂ ನನ್ನ ಮೊದಲಿನ ನಿಲುವಿಗೆ ಬದ್ಧನಾಗಿದ್ದೇನೆ. ನನ್ನ ನಿಲುವು ಬದಲಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು