ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ, ಸ್ಥಾನಮಾನ ಪಕ್ಷದಿಂದ ನಿರ್ಧಾರ- ಶೆಟ್ಟರ್

Last Updated 16 ಮಾರ್ಚ್ 2023, 6:38 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): 'ರಾಜ್ಯ ವಿಧಾನಸಭೆ ಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ. ನನಗೆ ಯಾವ ಸ್ಥಾನಮಾನ ನೀಡಬೇಕು ಎನ್ನುವುದರ ಬಗ್ಗೆ ಬಿಜೆಪಿ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ' ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ಇಲ್ಲಿನ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಪಕ್ಷ ನನಗೆ ಸಾಕಷ್ಟು ಅವಕಾಶ ಕೊಟ್ಟಿದೆ. ಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವೆ. ಭವಿಷ್ಯದಲ್ಲಿ ಪಕ್ಷ ಯಾವ ಜವಾಬ್ದಾರಿ ಕೊಡುತ್ತದೆ ಅದನ್ನು ನಿಭಾಯಿಸಲು ಸಿದ್ಧ. ನನಗೆ ಇದೇ ಬೇಕು, ಅದೇ ಹುದ್ದೆ ಬೇಕೆಂದು ನಾನು ಕೇಳುವುದಿಲ್ಲ ಎಂದು ತಿಳಿಸಿದರು.

ಮೋದಿಯವರು ಇಡೀ ರಾಷ್ಟ್ರಕ್ಕೆ ನಾಯಕತ್ವ ಕೊಡುತ್ತಿದ್ದಾರೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರು ರಾಜ್ಯಕ್ಕೆ ಬಂದು ಚುನಾವಣೆ ಪ್ರಚಾರ ಮಾಡುವುದರಲ್ಲಿ ತಪ್ಪೇನಿದೆ? ಹಿಂದೆ ಇಂದಿರಾ ಗಾಂಧಿಯವರು ಬಂದು ಪ್ರಚಾರ ಮಾಡುತ್ತಿರಲಿಲ್ಲವೇ ಎಂದು ಕೇಳಿದರು.

ವಯಸ್ಸು, ಅನಾರೋಗ್ಯದ ಕಾರಣದಿಂದ ಕೆಲ ಹಾಲಿ ಶಾಸಕರಿಗೆ ಪಕ್ಷದ ಟಿಕೆಟ್ ಸಿಗದಿರಬಹುದು. ಎಲ್ಲ ಪಕ್ಷಗಳಲ್ಲಿ ಇದು ನಡೆಯುತ್ತದೆ. ಕೆಲವರಿಗೆ ಟಿಕೆಟ್ ಸಿಗದೇ ಇರಬಹುದು. ಸಚಿವ ವಿ. ಸೋಮಣ್ಣನವರ ವಿಚಾರ ಪಕ್ಷ ಸರಿಪಡಿಸುವ ಕೆಲಸ ಮಾಡಲಿದೆ ಎಂದರು.

ಅಯೋಧ್ಯೆಯಲ್ಲಿ ಭವ ರಾಮಮಂದಿರ ನಿರ್ಮಾಣವಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದೆ. ಯಾವುದೇ ಭಯವಿಲ್ಲದೆ ಜನ ಕಾಶ್ಮೀರಕ್ಕೆ‌ ಹೋಗಿ ಬರುತ್ತಿದ್ದಾರೆ. ಆಂತರಿಕ ಸುರಕ್ಷತೆ ಹೆಚ್ಚಾಗಿದೆ. ಹೆದ್ದಾರಿಗಳು ಅಭಿವೃದ್ಧಿಗೊಳ್ಳುತ್ತಿವೆ. ಆರ್ಥಿಕ ಕ್ಷೇತ್ರದಲ್ಲಿ ನಮ್ಮ ದೇಶ ಜಾಗತಿಕ ಮಟ್ಟದಲ್ಲಿ ಈ ಹಿಂದೆ 16ನೇ ಸ್ಥಾನದಲ್ಲಿತ್ತು. ಈಗ 5ನೇ ಸ್ಥಾನಕ್ಕೇರಿದೆ. ಬರುವ ದಿನಗಳಲ್ಲಿ ನಂಬರ್ ಒನ್ ಆಗಬಹುದು. ನಮ್ಮ ಪಕ್ಷ ಕೊಟ್ಟ ಎಲ್ಲ ಭರವಸೆಗಳನ್ಮು ಈಡೇರಿಸಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದು ಬಾಕಿ ಉಳಿದಿದೆ. ಬರುವ ದಿನಗಳಲ್ಲಿ ಅದು ಕೂಡ ಜಾರಿಗೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಪಕ್ಷದ ಮುಖಂಡರಾದ ವೆಂಕಟೇಶ ಪ್ರಸಾದ್, ಸಿದ್ದೇಶ್ ಯಾದವ್, ಸತ್ಯನಾರಾಯಣ, ಅನುರಾಧ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT