ಸೋಮವಾರ, ಸೆಪ್ಟೆಂಬರ್ 27, 2021
25 °C
ಶ್ರೀಕೃಷ್ಣದೇವರಾಯನ 45 ಅಡಿ ಕಂಚಿನ ಪ್ರತಿಮೆ, ಸುಂದರ ಹೂದೋಟ ನಿರ್ಮಾಣ

ವಿಜಯನಗರ: ಜೋಳದರಾಶಿ ಗುಡ್ಡದಲ್ಲಿ ಹಾರಾಡಲಿದೆ ತ್ರಿವರ್ಣ ಧ್ವಜ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ನಗರ ಹೊರವಲಯದ ಜೋಳದರಾಶಿ ಗುಡ್ಡದ ಮೇಲೆ ಆ. 15ರಂದು ತ್ರಿವರ್ಣ ಧ್ವಜ ಹಾರಾಡಲಿದೆ.

ಈಗಾಗಲೇ 100 ಅಡಿ ಎತ್ತರದ ಧ್ವಜ ಸ್ತಂಭ ಸ್ಥಾಪಿಸುವ ಕೆಲಸ ಭರದಿಂದ ನಡೆದಿದೆ. ಸಚಿವ ಆನಂದ್‌ ಸಿಂಗ್‌ ಅವರು ವೈಯಕ್ತಿಕವಾಗಿ ₹45 ಲಕ್ಷ ವೆಚ್ಚದಲ್ಲಿ ಈ ಧ್ವಜ ಸ್ತಂಭ ನಿರ್ಮಿಸುತ್ತಿರುವುದು ವಿಶೇಷ. ಬಜಾಜ್‌ ಕಂಪನಿಗೆ ಕೆಲಸ ವಹಿಸಲಾಗಿದ್ದು, ಆ. 14ರೊಳಗೆ ಎಲ್ಲ  ಕೆಲಸ ಪೂರ್ಣಗೊಳ್ಳಲಿದೆ. ಆ. 15ರ ಸ್ವಾತಂತ್ರ್ಯ ದಿನದಂದು ರಾಷ್ಟ್ರ ಧ್ವಜ ನೆರವೇರಿಸಲು ಉದ್ದೇಶಿಸಲಾಗಿದೆ.

ಜೋಳದರಾಶಿ ಗುಡ್ಡ ನಗರದಲ್ಲಿ ಎತ್ತರದ ಪ್ರದೇಶವಾಗಿದೆ. ಈ ಗುಡ್ಡದ ಮೇಲೆ ನಿಂತು ನೋಡಿದರೆ ಇಡೀ ನಗರ ಕಾಣುತ್ತದೆ. ಹಾಗೆಯೇ ನಗರದ ಯಾವುದೇ ಮೂಲೆಯಿಂದ ನೋಡಿದರೂ ಆ ಗುಡ್ಡ ಗೋಚರಿಸುತ್ತದೆ. ಧ್ವಜ ಸ್ತಂಭ ನಿರ್ಮಿಸಿ, ಧ್ವಜ ಹಾರಾಡುವುದರಿಂದ ಅದಕ್ಕೆ ವಿಶೇಷ ಕಳೆ ಬರಲಿದೆ.

ನಗರದ ಹೃದಯ ಭಾಗದ ರೋಟರಿ ವೃತ್ತದಲ್ಲಿ ಈಗಾಗಲೇ 100 ಅಡಿ ಎತ್ತರದ ಧ್ವಜ ಸ್ತಂಭ ನಿರ್ಮಿಸಲಾಗಿದೆ. ರೈಲ್ವೆ ಇಲಾಖೆಯವರು ಇತ್ತೀಚೆಗೆ ನಗರದ ರೈಲು ನಿಲ್ದಾಣದ ಆವರಣದಲ್ಲಿ ಇದೇ ಮಾದರಿಯ ಧ್ವಜ ಸ್ತಂಭ ಮಾಡಿಸಿದ್ದಾರೆ. ನಗರದ ಮುನ್ಸಿಪಲ್ ಮೈದಾನದಲ್ಲಿ 150 ಅಡಿ ಧ್ವಜ ಸ್ತಂಭ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

ಮುನ್ಸಿಪಲ್‌ ಮೈದಾನ ಹಾಗೂ ತಾಲ್ಲೂಕು ಕ್ರೀಡಾಂಗಣದ ಜಾಗವನ್ನು ಒಟ್ಟಿಗೆ ಸೇರಿಸಿ ಬೃಹತ್‌ ಕ್ರೀಡಾಂಗಣ ನಿರ್ಮಿಸಲು ರೂಪುರೇಷೆ ತಯಾರಿಸಲಾಗಿದ್ದು, ಅದರ ಬಳಿಕ ಧ್ವಜ ಸ್ತಂಭ ತಲೆ ಎತ್ತಲಿದೆ. ಬರುವ ದಿನಗಳಲ್ಲಿ ನಗರದ ನಾಲ್ಕು ದಿಕ್ಕುಗಳಲ್ಲೂ ತ್ರಿವರ್ಣ ಧ್ವಜ ರಾರಾಜಿಸಲಿವೆ.

ಪ್ರವಾಸಿ ತಾಣವಾಗಿ ಅಭಿವೃದ್ಧಿ: ಜೋಳದರಾಶಿ ಗುಡ್ಡವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿ 45 ಅಡಿ ಎತ್ತರದ ಶ್ರೀ ಕೃಷ್ಣದೇವರಾಯನ ಕಂಚಿನ ಪ್ರತಿಮೆ ಸ್ಥಾಪನೆಗೆ ನಿರ್ಧರಿಸಲಾಗಿದೆ. ಚಿತ್ರದುರ್ಗದಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ವಿಸ್ತರಿಸಿ ಅದನ್ನು ಡಾಂಬರೀಕರಣಗೊಳಿಸಲಾಗುತ್ತಿದೆ. ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸಲಾಗುತ್ತಿದೆ. ಗುಡ್ಡ ಕುಸಿಯದಂತೆ ಅಲ್ಲಲ್ಲಿ ಸ್ಲ್ಯಾಬ್‌ ನಿರ್ಮಿಸಲಾಗಿದೆ. ಬರುವ ದಿನಗಳಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸಿ, ಸುಂದರವಾದ ಹೂದೋಟ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು