ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಂಪಿ ಸ್ಮಾರಕ ಬಳಿ ತಪಾಸಣೆ ಬಂದ್‌

ಪ್ರವಾಸಿಗರ ಅಳಲಿಗೆ ಸ್ಪಂದಿಸಿದ ಎಸ್‌ಪಿ–ಕಡ್ಡಿರಾಂಪುರ, ಕಮಲಾಪುರ ಪ್ರವೇಶ ಸ್ಥಳದಲ್ಲಷ್ಟೇ ಕಾರ್ಯಾಚರಣೆ
Published 16 ಜೂನ್ 2024, 6:51 IST
Last Updated 16 ಜೂನ್ 2024, 6:51 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣ ಹಂಪಿಗೆ ಪ್ರವಾಸಿಗರು ಬಂದು ಸ್ಮಾರಕಗಳ ಸೌಂದರ್ಯ ನೋಡಿಕೊಂಡು ಹೋಗುವಾಗ ಪೊಲೀಸ್‌ ತಪಾಸಣೆಯ ಕಿರಿಕಿರಿಯನ್ನೂ ಅನುಭವಿಸಬೇಕಿತ್ತು. ಇನ್ನು ಮುಂದೆ ಅದಕ್ಕೆ ಸಂಪೂರ್ಣ ತೆರೆ ಬೀಳಲಿದ್ದು, ಕಡ್ಡಿರಾಂಪುರ ಕ್ರಾಸ್‌, ಕಮಲಾಪುರಗಳಲ್ಲಷ್ಟೇ ತಪಾಸಣೆ ನಡೆಯಲಿದೆ.

ಹಂಪಿಗೆ ಪ್ರವಾಸ ಬಂದ ನಾಲ್ಕಾರು ಮಂದಿ ತಮ್ಮ ಕೆಟ್ಟ ಅನುಭವಗಳನ್ನು ‘ಪ್ರಜಾವಾಣಿ’ ಜತೆಗೆ ಹಂಚಿಕೊಂಡಿದ್ದರು. ಸ್ಮಾರಕಗಳ ಸೌಂದರ್ಯ, ವಿಜಯನಗರ ಅರಸರ ಕಾಲದ ವೈಭವದ ಗುಂಗಿನಲ್ಲೇ ಇರುವ ನಮಗೆ ಧುತ್ತನೆ ಪೊಲೀಸ್ ತಪಾಸಣೆಯ ದುಃಸ್ವಪ್ನ ಕಾಡಿದರೆ ಹೇಗಿರುತ್ತದೆ ಹೇಳಿ ಎಂದು ಅವರು ಪ್ರಶ್ನಿಸಿದ್ದರು.

‘ನಾವು ಬೆಂಗಳೂರಿನಿಂದ ಇಲ್ಲಿಗೆ ಬಂದಿರುವುದು ಹಂಪಿ ನೋಡಿಕೊಂಡು ಹೋಗಲು, ತಪಾಸಣೆಗೆ ಒಳಗಾಗಲು ಅಲ್ಲ, ನಾವು ಬಾಡಿಗೆ ಮಾಡಿಕೊಂಡು ವಾಹನದಲ್ಲಿ ಬಂದಿದ್ದೇವೆ. ತಪಾಸಣೆ ಮಾಡುವುದು ಬೇಡ ಎನ್ನುವುದಿಲ್ಲ, ಮಾಡುವುದಿದ್ದರೆ ಹಂಪಿಗೆ ಪ್ರವೇಶ ದ್ವಾರ ಇರುವ ಕಡೆಯಲ್ಲೇ ಮಾಡಿಬಿಡಲಿ, ಒಳಗೆ ಮತ್ಯಾರೂ ಬರುವುದಿಲ್ಲವಲ್ಲ, ಅರ್ಧ ಸ್ಮಾರಕಗಳನ್ನು ನೋಡಿರುತ್ತೇವೆ, ಆಗ ಇವರ ತಪಾಸಣೆ ಶುರುವಾಗುತ್ತದೆ, ನಮ್ಮ ಪ್ರವಾಸ ಅನುಭವ ಹೇಗಿದ್ದೀತು ಹೇಳಿ’ ಎಂದು ಬೆಂಗಳೂರಿನಿಂದ ಬಂದಿದ್ದ ಮಹೇಶ್ ಡನಾಪುರ ಎಂಬುವವರು ತಮ್ಮ ಅಳಲು ತೋಡಿಕೊಂಡಿದ್ದರು.

ಇದೇ ರೀತಿ ಇನ್ನೂ ಮೂವರು ಬೇಸರದಿಂದಲೇ ಹೇಳಿದ್ದರು. ‘ಹಂಪಿಯಲ್ಲಿ ಆಧುನೀಕರಣ ಬರಬೇಕೆಂದು ನಾವು ಬಯಸುವುದಿಲ್ಲ, ವಿಜಯನಗರ ಸಾಮ್ರಾಜ್ಯ ಹೇಗೆ ಇದ್ದಿರಬಹುದು ಎಂಬುದು ಇಲ್ಲಿನ ಸ್ಮಾರಕಗಳನ್ನು ನೋಡಿದಾಗಲೇ ಗೊತ್ತಾಗಿಬಿಡುತ್ತದೆ. ಆದರೆ ವಾಹನ ವಿಮೆ, ಎಫ್‌ಸಿ, ಆರ್‌ಸಿ, ಎಮಿಷನ್‌ ಅಂತ ಹೇಳಿ ಇಲ್ಲಿ ನಮಗೆ ಕಿರಿಕಿರಿ ಮಾಡಿದರೆ ಸರಿಯಲ್ಲ’ ಎಂದು ಹೇಳಿದ್ದರು.

ಈ ಬಗ್ಗೆ ಎಸ್‌ಪಿ ಶ್ರೀಹರಿಬಾಬು ಬಿ.ಎಲ್‌. ಅವರನ್ನು ಸಂಪರ್ಕಿಸಿದಾಗ, ‘ಇದೊಂದು ನಿಜಕ್ಕೂ ಯೋಚಿಸಬೇಕಾದ ವಿಚಾರ, ಹಂಪಿಯೊಳಗೆ ತಪಾಸಣೆ ನಡೆಸುವುದನ್ನು ತಕ್ಷಣ ನಿಲ್ಲಿಸಲು ಸೂಚಿಸುತ್ತೇನೆ, ಕಡ್ಡಿರಾಂಪುರ ಕ್ರಾಸ್‌, ಕಮಲಾಪುರಗಳಲ್ಲಿ ಮಾತ್ರ ತಪಾಸಣೆ ನಡೆಸುವಂತೆ ಈಗಲೇ ಆದೇಶ ನೀಡುತ್ತೇನೆ’ ಎಂದರು.

ಶ್ರೀಹರಿಬಾಬು ಬಿ.ಎಲ್‌. 
ಶ್ರೀಹರಿಬಾಬು ಬಿ.ಎಲ್‌. 
ಹಂಪಿಯ ಸಾಸಿವೆಕಾಳು ಗಣೇಶ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು
ಹಂಪಿಯ ಸಾಸಿವೆಕಾಳು ಗಣೇಶ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು

ಪ್ರವಾಸಿಗರಿಗೆ ತೊಂದರೆ ಕೊಡುವ ಉದ್ದೇಶ ಇಲ್ಲ. ಸ್ಮಾರಕಗಳ ವೀಕ್ಷಣೆಯ ಖುಷಿಗೆ ಭಂಗ ಬರದ ರೀತಿಯಲ್ಲಿ ಹೊರಭಾಗದಲ್ಲಷ್ಟೇ ವಾಹನ ತಪಾಸಣೆ ನಡೆಸುತ್ತೇವೆ

-ಶ್ರೀಹರಿಬಾಬು ಬಿ.ಎಲ್‌. ಎಸ್‌ಪಿ

ನಾವು ಹಂಪಿಯ ಸ್ಮಾರಕಗಳನ್ನು ನೋಡುತ್ತ ಬರುತ್ತೇವೆ ಆಗಲೇ ಪೊಲೀಸರಯ ವಾಹನ ಅಡ್ಡ ಹಾಕಿಬಿಟ್ಟಿರುತ್ತಾರೆ. ನಾವು ಖುಷಿ ಅನುಭವಿಸುವುದಾದರೂ ಹೇಗೆ

- ಮಹೇಶ್‌ ಡನಾಪುರ ಪ್ರವಾಸಿಗ ಬೆಂಗಳೂರು

‘ತಪಾಸಣೆ ಮಾಡದಿರಲು ಸಾಧ್ಯವಿಲ್ಲ’ ‘ಪ್ರವಾಸಿಗರನ್ನು ಕರೆತಂದ ವಾಹನ ಎಂಬ ಕಾರಣಕ್ಕೆ ವಾಹನಗಳನ್ನು ತಪಾಸಣೆ ಮಾಡದೆ ಇರಲು ಸಾಧ್ಯವಿಲ್ಲ. ಅದೆಷ್ಟೋ ವಾಹನಗಳಲ್ಲಿ ಅಗತ್ಯದ ದಾಖಲೆಗಳೇ ಇರುವುದಿಲ್ಲ ದೂರದ ಊರುಗಳಿಂದ ಬರುವ ವಾಹನಗಳ ಚಾಲಕರಿಗೆ ಇಂತಹ ಕನಿಷ್ಠ ಜ್ಞಾನ ಬೇಕಲ್ಲವೇ? ಖಾಸಗಿ ವಾಹನದಲ್ಲಿ ಬಾಡಿಗೆ ಮಾಡುವ ಮಂದಿಯೂ ಇದ್ದಾರೆ. ನಿಗದಿತ ಆಸನಕ್ಕಿಂತ ತುಂಬಾ ಅಧಿಕ ಮಂದಿಯನ್ನು ಹೇರಿಕೊಂಡು ಬರುವವರೂ ಇರುತ್ತಾರೆ. ಆಗೆಲ್ಲ ತಪಾಸಣೆ ಅನಿವಾರ್ಯ. ಆದರೆ ಪ್ರವಾಸಿಗರಿಗೆ ಆಗುವ ಕಿರಿಕಿರಿ ತಪ್ಪಿಸಬೇಕು ಎಂಬ ಮಾತು ಮಾತ್ರ ನಿಜ ಅದಕ್ಕೆ ನಮ್ಮ ಸಮ್ಮತಿಯೂ ಇದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT