ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Hampi Utsava 2023: ಉತ್ಸವ ರಂಗೇರಿಸಿದ ಜಾನಪದ ಹಾಡು, ನೃತ್ಯ

Last Updated 29 ಜನವರಿ 2023, 13:22 IST
ಅಕ್ಷರ ಗಾತ್ರ

ಹಂಪಿ (ಹೊಸಪೇಟೆ ): ಸುರಿದ ಬಿಸಿಲಿನ ತಾಪಕ್ಕೆ ಕಾದು ಕೆಂಡದಂತಾಗಿದ್ದ ಹಂಪಿಯ ಬಂಡೆಗಳು ಮೆಲ್ಲಗೆ ತಣ್ಣಗಾಗುತ್ತಿದ್ದವು... ಎಲ್ಲೆಡೆ ಸುತ್ತಾಡಿ ದಣಿದಿದ್ದ ಜನರ ಕರ್ಣಗಳಿಂದ ಇಂಪಾದ ಧ್ವನಿ ಬೀಳುತ್ತಿದ್ದಂತೆ ಅವರ ಆಯಾಸವೆಲ್ಲ ದೂರವಾಯಿತು.

ಶನಿವಾರ ಹಂಪಿ ಎದುರು ಬಸವಣ್ಣ ವೇದಿಕೆಯಲ್ಲಿ ಹೊರಹೊಮ್ಮಿದ ಇಂಪಾದ ಧ್ವನಿ, ರೋಮಾಂಚನಕಾರಿ ನೃತ್ಯಗಳು, ವಾದ್ಯಗೋಷ್ಠಿಗಳ ನಾದ ಸ್ವರಕ್ಕೆ ಕಲ್ಲುಬಂಡೆಗಳ ನಡುವೆ ಕುಳಿತಿದ್ದ ಮನಸ್ಸುಗಳು ತಂಪಾದವು. ಉತ್ತರ ಕನ್ನಡದ ಅನ್ನಪೂರ್ಣೇಶ್ವರಿ ಅಂಧರ ಗೀತ ಗಾಯನ ತಂಡದ ಕಲಾವಿದರ ಧ್ವನಿಯಲ್ಲಿ, 'ಕಾಣದ ಕಡಲಿಗೆ‌ ಹಂಬಲಿಸಿದೆ ಮನ', 'ನಮ್ಮಮ್ಮ ಶಾರದೆ‌' ಗೀತಗಾಯನ ಕಂಪುಸೂಸಿತು.

ಬೆಂಗಳೂರಿನ ಉತ್ತರಹಳ್ಳಿ ರಂಗಕಹಳೆ ತಂಡದ 30 ಕ್ಕೂ ಹೆಚ್ಚು ಕಲಾವಿದರಿಂದ ಬೊಮ್ಮನಹಳ್ಳಿ ಕಿಂದರಿ ಜೋಗಿ ನೃತ್ಯ ಪ್ರೇಕ್ಷಕರ ಮನಸೂರೆಗೊಳಿಸಿತು. ಹಾವೇರಿಯ ಶರಣಪ್ಪ ವಡಿಗೇರ ಏರುಧ್ವನಿಯಲ್ಲಿ 'ಎಳ್ಳು ಜೀರಿಗೆ ಬೆಳೆದ ಭೂತಾಯಿ’, ನೆಚ್ಚಿ ಕುಂತಿದೆ ಸುಳ್ಳ, ಯಾರ ಹೊಲ, ಯಾರ ಮನೆಯೋ' , 'ಗಿಲಗಿಲೇರಿ ನಾರಿ, ನಾಗಲೋಕದ‌ ನಾರಿ' ತತ್ವಪದಗಳು ಕೊರೆವ ಚಳಿ ಮರೆಸಿದವು.

ಸ್ಯಾಕ್ಸ್ ಫೋನ್ ವಾದನದಲ್ಲಿ ಮೇಲುಕೋಟೆಯ ಕಲಾವಿದ ಸಾಗರ ತಂಡ 'ನೀನಲ್ಲ ನಿನದಲ್ಲ ತರವಲ್ಲ' ಗಣೇಶ ಸ್ತುತಿ ನುಡಿಸಿ ಕಲಾರಸಿಕರ ಮನಗೆದ್ದರು. ಧಾರವಾಡದ ಗಾಯಕ ಪ್ರಸನ್ನ ಗುಡಿ ಅವರ ಶಾಸ್ತ್ರೀಯ ಸಂಗೀತ ಇಂಪೆನಿಸಿತು. ಬೆಂಗಳೂರಿನ ಪುಷ್ಪಾಂಜಲಿ ನೃತ್ಯ ಶಾಲೆ ಕಲಾವಿದರ, 'ಮಹಾದೇವ ಶಿವ ಶಂಭೋ ನೃತ್ಯ', ಬಿ.ಉಷಾ ತಂಡದ 'ಮಹಾಗಣಪತಿ ಮನಸಾ ಸ್ಮರಾಮಿ' ನೃತ್ಯರೂಪಕ ಮತ್ತು ವರಾಹ ರೂಪಂ ಗೀತೆಗೆ ಹುಬ್ಬಳ್ಳಿ ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆಯ ತಂಡದವರು ಪ್ರದರ್ಶಿಸಿದ ಜಾನಪದ‌ ನೃತ್ಯ ರೂಪಕ‌ ಉತ್ಸವಕ್ಕೆ‌ ರಂಗುತಂದಿತು.

‘ನೀ ಎನ್ನ ಸಲುಹು ನಿನ್ನೆ ನಂಬಿರುವೆ ಸದ್ಗುರುವೇ’ ಗೀತೆಯನ್ನು ಗಾಯಕ ಕೇಶವ ನಾಯಕ ತಂಡ ಪ್ರಸ್ತುತಪಡಿಸಿತು. ಬಾಗಲಕೋಟೆ ಶ್ರೇಯಾ ಪ್ರಹ್ಲಾದ ಕುಲಕರ್ಣಿ ಅವರ ಶಿವ ಪ್ರಿಯ ನಮೋ ನಮಃ ಭರತನಾಟ್ಯ , ಹಾವೇರಿಯ ಭಜಂತ್ರಿ ಬಸವರಾಜ ಅವರ ಶಹನಾಯಿ ವಾದನ ಮುದ ನೀಡಿತು.
ಚಿತ್ರದುರ್ಗದ ಕೆ.ಸಿ.ಶಿವಣ್ಣ ಅವರ 'ವೀರನಾದರೆ ಸಿಂಧೂರ ಲಕ್ಷ್ಮಣನಾಗು', ಕನ್ನಡವೆಂದರೆ ಬರೀ ನುಡಿಯಲ್ಲ', ಹಾಡುಗಳಿಂದ ರಂಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT