ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಗಿಲ್‌ ವಿಜಯೋತ್ಸವ ಕವಿಗೋಷ್ಠಿಯಲ್ಲಿ ದೇಶಭಕ್ತಿ, ಬೆಲೆ ಏರಿಕೆ ಮೇಲೆ ಬೆಳಕು

‘ಮತೀಯವಾದದಿಂದ ಯುವಕರಲ್ಲಿ ವಿಷ ಬೀಜ’
Last Updated 31 ಜುಲೈ 2022, 12:52 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಮತೀಯವಾದದ ಮೂಲಕ ಯುವಕರಲ್ಲಿ ವಿಷ ಬೀಜ ಬಿತ್ತುವ ಕೆಲಸ ನಡೆದಿದ್ದು, ಯುವಜನಾಂಗ ಅದರ ಬಗ್ಗೆ ಎಚ್ಚರದಿಂದಿರಬೇಕು’ ಎಂದು ಚಿಂತಕ ಎಸ್‌. ಶಿವಾನಂದ ತಿಳಿಸಿದರು.

ವಿಜಯನಗರ ಸಾಹಿತ್ಯ ಬಳಗದಿಂದ ಭಾನುವಾರ ನಗರದ ಗೃಹರಕ್ಷಕ ದಳದ ಭವನದಲ್ಲಿ ಏರ್ಪಡಿಸಿದ್ದ ಕಾರ್ಗಿಲ್‌ ವಿಜಯೋತ್ಸವ ನೆನಪು ಮತ್ತು ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಒಂದು ಕಡೆ ಗಡಿ ಕಾಯುವ ‌ಯೋಧರು. ಇನ್ನೊಂದೆಡೆ ಕುರ್ಚಿಗಾಗಿ ಹೆಣ ಉರುಳಿಸುವ ರಾಜಕಾರಣಿಗಳು

‘ಒಂದು ಕಡೆ ಗಡಿ ಕಾಯುವ ಸೈನಿಕರು. ಇನ್ನೊಂದೆಡೆ ತಮ್ಮ ಕುರ್ಚಿಗಾಗಿ ನಿತ್ಯ ಹೆಣ ಉರುಳಿಸುವ ರಾಜಕಾರಣಿಗಳು. ಅದರ ಬಗ್ಗೆ ನಮ್ಮ ಕವನಗಳು ಬೆಳಕು ಚೆಲ್ಲಬೇಕು. ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಧ್ವನಿ ಎತ್ತುತ್ತಿರುವ ಪತ್ರಕರ್ತರು, ಹೋರಾಟಗಾರರು, ಯುವಕರ ದನಿ ಅಡಗಿಸುವ ಕೃತ್ಯ ನಡೆಯುತ್ತಿದೆ. ಇನ್ನೊಂದೆಡೆ ಸಂವಿಧಾನ ಉಲ್ಲಂಘಿಸುತ್ತಿರುವ ರಾಜಕಾರಣಿಗಳು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಅದರ ಬಗ್ಗೆ ನಮ್ಮ ಬರಹಗಾರರು ಮೌನ ವಹಿಸಿರುವುದು ದುರಂತ’ ಎಂದು ಹೇಳಿದರು.

‘ಬರಹಗಾರರ ಕವನದಲ್ಲಿ ವಸ್ತು, ಭಾಷೆ, ಗತ್ತು, ಗಮ್ಮತ್ತು, ಸಮಕಾಲೀನ ವಸ್ತು ಇರಬೇಕು. ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಕವನಗಳು ಹೆಚ್ಚೆಚ್ಚೂ ಬರಬೇಕು. ಜೈಲಿಗೆ ಹೋದರೂ ಪರವಾಗಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಅಂದಿನ ಬರಹಗಾರರಲ್ಲಿದ್ದ ಕೆಚ್ಚು ಈಗಿನ ಲೇಖಕರಲ್ಲಿ ಬರಬೇಕು’ ಎಂದು ತಿಳಿಸಿದರು.

ಲೇಖಕರಾದ ನೂರ್ ಜಹಾನ್-ಗಡಿನಾಡ ಸೈನಿಕನಿಗೆ, ಪರಶುರಾಮ-ಗೃಹರಕ್ಷಕರು, ಎಚ್. ಸೌಭಾಗ್ಯಲಕ್ಷ್ಮಿ -ಅಗ್ನಿಪಥದ ಅಗ್ನಿವೀರರು, ಉಮಾಮಹೇಶ್ವರ-ವಿಕಾಸದ ದಾರಿ-ವಿಕಾಸದ ಹಾದಿ, ಟಿ.ಯಮುನಪ್ಪ-ಕಾರ್ಗಿಲ್ ವಿಜಯೋತ್ಸವ, ಸಂಗಮೇಶ ಗಣಿ-ಬಾಪೂಜಿ ಮತ್ತೊಮ್ಮೆ ಹುಟ್ಟಿ ಬಾ, ವೆಂಕಟೇಶ ಬಡಿಗೇರ್-ಬಿಕ್ಕಿ ಬಿಕ್ಕಿ ಅತ್ತಳು ನನ್ನವ್ವ, ಅಂಜಲಿ ಬೆಳಗಲ್-ದೇಶವಾಸಿ, ಗೋವಿಂದಪ್ಪ–ಮುಗ್ಧತತೆಯ ಬ್ರೈನ್ ವಾಶ್, ನಾಗರಾಜ್ ಘಂಟಿ-ಎನ್ನ ಹುಟ್ಟು, ಬಸಂತ್ ಡಿ.-ಹೊತ್ತಿನ ನಾಟಕವಷ್ಟೇ, ವಿಶಾಲ್ ಮ್ಯಾಸರ-ಯುದ್ಧವೆಂದರೆ ಹೀಗೆ, ಡಾ.ಎಸ್‌.ಡಿ. ಸುಲೋಚನಾ -ವಂದನೆ ನಿಮಗೆ ಅಭಿನಂದನೆ, ಪ್ರಹ್ಲಾದ್ ರಾವ್-ವಿಜಯೋತ್ಸವ, ಉದೇದಪ್ಪ-ನಮ್ಮ ಯೋಧರು, ಕವಿತಾ ನಾಯ್ಡು-ನಾನು ಎಂದೆಂದಿಗೂ ಚಿರರುಣಿ, ಜಾತಪ್ಪ-ಕಾಲಹರಣ ಶೀರ್ಷಿಕೆಯಡಿ ಕವನ ವಾಚಿಸಿದರು. ಬಹುತೇಕ ಕವಿತೆಗಳು ದೇಶಭಕ್ತಿ, ಬಡತನ, ಬೆಲೆ ಏರಿಕೆ, ಶೋಷಣೆ ಮೇಲೆ ಬೆಳಕು ಚೆಲ್ಲಿದವು.

ಲೇಖಕರಾದ ಬಿ.ಜಿ. ಕನಕೇಶಮೂರ್ತಿ, ಎಸ್‌.ಎಂ. ಗಿರೀಶ್‌, ದಯಾನಂದ ಕಿನ್ನಾಳ್‌ ಇದ್ದರು. ಮಾಜಿ ಯೋಧರಾದ ಗುಂಡೂರಾವ್‌ ದೇಸಾಯಿ, ಮಂಜುನಾಥ್‌, ಕೃಷ್ಣಮೂರ್ತಿ, ಶ್ರೀನಿವಾಸುಲು, ಸುಬ್ಬಣ್ಣ ಬಿ., ವೆಂಕಟೇಶ್‌, ನೀಲಪ್ಪ ಕೆಂಪಣ್ಣನವರ್‌, ಬಿ. ಶಿವಪ್ಪ, ಎಚ್‌. ಮಲ್ಲಿಕಾರ್ಜುನ, ಬೂದಿಹಾಳ್‌ ನಾಗರಾಜ್‌ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT