ಎಲ್ಲೆಲ್ಲೂ ರಾರಾಜಿಸಿದ ಕನ್ನಡ ಧ್ವಜ; ಗಮನ ಸೆಳೆದ ಪುನೀತ್ ರಾಜಕುಮಾರ್ ಭಾವಚಿತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ 66ನೇ ಕನ್ನಡ ರಾಜ್ಯೋತ್ಸವವನ್ನು ಸಡಗರ, ಸಂಭ್ರಮದ ನಡುವೆ ಆಚರಿಸಲಾಯಿತು.
ವಿವಿಧ ಶಾಲಾ ಮಕ್ಕಳು ಕನ್ನಡ ಧ್ವಜ ಹಿಡಿದುಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಟ ಪುನೀತ್ ರಾಜಕುಮಾರ್ ಅವರ ಭಾವಚಿತ್ರದೊಂದಿಗೆ ಬಂದು ಗಮನ ಸೆಳೆದರು. ಭೂಮಿಕಾ ಮತ್ತು ಮೀರಾ ಅವರು ಹಾಡಿದ ಕನ್ನಡ ಗೀತೆಗಳಿಗೆ ಎಲ್ಲರೂ ಹೆಜ್ಜೆ ಹಾಕಿದರು.
ಸ್ಫೂರ್ತಿ ವೇದಿಕೆ ಹಾಗೂ ವಿಕಾಸ ಯುವಕ ಮಂಡಳಿಯವರು ಹಂಪಿಯಿಂದ ತಂದ ಜ್ಯೋತಿಯನ್ನು ಬರಮಾಡಿಕೊಂಡ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಅದನ್ನು ಕ್ರೀಡಾಂಗಣದಲ್ಲಿ ಬೆಳಗಿದರು. ಇದೇ ವೇಳೆ ಎರಡು ನಿಮಿಷ ಮೌನ ಆಚರಿಸಿ, ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
‘ನಾಡಿನ ಅಭಿವೃದ್ಧಿ’:
ಇದಕ್ಕೂ ಮುನ್ನ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವ ಆನಂದ್ ಸಿಂಗ್, ‘ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯ, ಭವ್ಯ ಪರಂಪರೆಯನ್ನು ರಕ್ಷಿಸಿ, ನಾಡಿನ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು’ ಎಂದರು.
‘ಆಧುನಿಕ ತಂತ್ರಜ್ಞಾನ ಇಂದು ಎಲ್ಲಾ ರಂಗಗಳನ್ನು ಪ್ರವೇಶಿಸಿದೆ. ಅದರ ಮಹಾನ್ ಶಕ್ತಿಯನ್ನು ನಾಡಿನ ಯುವ ಜನಾಂಗಕ್ಕೆ ಮುಟ್ಟಿಸಿ ಸಮಗ್ರ ಅಭಿವೃದ್ಧಿಗೆ ಪಣ ತೊಡಲಾಗುವುದು. ಎರಡು ಸಾವಿರ ವರ್ಷದ ಇತಿಹಾಸ ಇರುವ ಈ ನಮ್ಮ ಹೆಮ್ಮೆಯ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ಅದನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸೋಣ’ ಎಂದು ಹೇಳಿದರು.
‘ಸುವರ್ಣ ಯುಗವನ್ನು ಸೃಷ್ಟಿಸಿ ಈ ನಾಡಿನ ಕಲೆ, ಭಾಷೆ ಹಾಗೂ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ‘ಎಂದೂ ಮರೆಯದ’ ವಿಜಯನಗರ ಸಾಮ್ರಾಜ್ಯ ನಮ್ಮದು. ಆ ಹೆಸರಿನಲ್ಲಿಯೇ ನೂತನ ಜಿಲ್ಲೆ ಉದಯಗೊಂಡಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ’ ಎಂದರು.
ಹುಡಾ ಅಧ್ಯಕ್ಷ ಅಶೋಕ ಜೀರೆ, ಜಿಲ್ಲಾಧಿಕಾರಿ ಅನಿರುದ್ಧ್ ಪಿ. ಶ್ರವಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ ಕೆ., ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್ ಎಚ್. ವಿಶ್ವನಾಥ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಅನಗವಾಳ, ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ಇದ್ದರು.
ಸಾಧಕರಿಗೆ ಸನ್ಮಾನ
ಲೇಖಕ ರಂಗೋಪಂತ ನಾಗರಾಜರಾಯರು, ಪತ್ರಕರ್ತೆ ರೇಖಾ ಪ್ರಕಾಶ್, ರೈತರಾದ ಎಸ್.ವಿ. ಸಜ್ಜನ ಹುಲಕೆರೆ, ಬಸಯ್ಯ ಸ್ವಾಮಿ ಕಡ್ಡಿರಾಂಪುರ, ತೊಗಲುಗೊಂಬೆ ಕಲಾವಿದ ನಾರಾಯಣಪ್ಪ ಕಾರಿಗನೂರು, ಸಮಾಜ ಸೇವಕ ಮೀನುಗಾರ ಮರಿಸ್ವಾಮಿ, ವೈದ್ಯ ಡಾ. ನಾಗೇಂದ್ರ, ಆರೋಗ್ಯ ಕಾರ್ಯಕರ್ತೆಯರಾದ ಜಯಬಾಲಿ, ಬಿ.ಪಿ. ಸವಿತಾ, ಪಾರ್ವತಿ, ಮಾರುತಿ, ಆಶಾ ಕಾರ್ಯಕರ್ತೆಯರಾದ ಲಕ್ಷ್ಮಿ, ದ್ರಾಕ್ಷಾಯಿಣಿ ಅವರನ್ನು ಸತ್ಕರಿಸಲಾಯಿತು. 40 ಜನ ಪೌರಕಾರ್ಮಿಕರಿಗೆ ನಗರಸಭೆಯಿಂದ ಉಚಿತವಾಗಿ ಬೈಸಿಕಲ್ ವಿತರಿಸಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.