ಮಂಗಳವಾರ, ಮೇ 24, 2022
26 °C
ದುಬಾರಿ ಸಿಲಿಂಡರ್‌ನಿಂದ ಸೀಮೆ ಎಣ್ಣೆ ನೆನಪು; ಒಲೆ ಹೊತ್ತಿಸಲು, ವಿದ್ಯುತ್ ಕೈಕೊಟ್ಟಾಗ ಚಿಮಣಿ ಹಚ್ಚುವುದಕ್ಕೂ ಪರದಾಟ

ಸೀಮೆ ಎಣ್ಣೆ ಪೂರೈಕೆ ಸ್ಥಗಿತ; ಒಂದಲ್ಲ, ಹಲವು ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಜಿಲ್ಲೆಯ ಬಹುತೇಕ ಭಾಗಗಳಲ್ಲಿ ವರ್ಷದ ಹಿಂದೆಯೇ ಪಡಿತರ ಚೀಟಿ ಹೊಂದಿದವರಿಗೆ ಸೀಮೆ ಎಣ್ಣೆ ಕೊಡುವುದನ್ನು ನಿಲ್ಲಿಸಿರುವುದರಿಂದ ನಾನಾ ಸಮಸ್ಯೆಗಳಿಗೆ ಕಾರಣವಾಗಿದೆ.

ಹೆಚ್ಚಿನ ಗ್ರಾಮೀಣ ಭಾಗಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಈಗಲೂ ದೂರದ ಹಾಗೂ ಕಾಡಂಚಿನ ಹಳ್ಳಿಗಳಲ್ಲಿ ಈ ಸೌಲಭ್ಯ ಇಲ್ಲ. ಒಲೆ ಹೊತ್ತಿಸಲು, ಚಳಿಗಾಲದಲ್ಲಿ ಕಾವು ಪಡೆಯಲು ಸೀಮೆ ಎಣ್ಣೆ ಉಪಯೋಗಿಸುತ್ತಿದ್ದರು. ಅಷ್ಟೇ ಅಲ್ಲ, ಹಲವೆಡೆ ರಾತ್ರಿ ವೇಳೆ ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಇರುವುದಿಲ್ಲ. ಸೀಮೆ ಎಣ್ಣೆ ಮೂಲಕ ಉರಿಯುವ ಚಿಮಣಿ ಬಳಸುತ್ತಿದ್ದರು. ಈಗ ಅದಕ್ಕೂ ಪರದಾಟ ನಡೆಸುವ ಪರಿಸ್ಥಿತಿ ಇದೆ.

ಅನುಕೂಲಸ್ಥರು ದುಬಾರಿ ಬೆಲೆಯ ಬ್ಯಾಟರಿ, ರೀಚಾರ್ಜ್‌ ವಿದ್ಯುತ್‌ ಚಿಮಣಿ ಬಳಸುತ್ತಾರೆ. ಕೆಲವರು ಮೇಣದ ಬತ್ತಿಗಳ ಮೊರೆ ಹೋಗಿದ್ದಾರೆ. ಆದರೆ, ಇದು ಎಲ್ಲರಿಗೂ ಕೈಗೆಟಕುವುದಿಲ್ಲ. ಇಷ್ಟೇ ಅಲ್ಲ, ಅನೇಕ ಹಳ್ಳಿಗಳಲ್ಲಿ ಈಗಲೂ ಯಾರಾದರೂ ಮೃತಪಟ್ಟರೆ ಕಟ್ಟಿಗೆ, ಕುಳ್ಳುಗಳನ್ನು ಬಳಸುತ್ತಾರೆ. ಆ ಸಂದರ್ಭದಲ್ಲಿ ಸೀಮೆ ಎಣ್ಣೆ ಹೆಚ್ಚಾಗಿ ಬಳಸುತ್ತಾರೆ. ಈಗ ಅದು ಕೂಡ ಸಿಗುತ್ತಿಲ್ಲ. ಅನಿವಾರ್ಯವಾಗಿ ಕೆಲವರು ಪೆಟ್ರೋಲ್‌, ಹತ್ತಿ ಎಣ್ಣೆ ಬಳಸುತ್ತಿದ್ದಾರೆ. ಇದು ಅವರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

ಅನೇಕ ಮನೆಗಳಿಗೆ ಈಗ ಅಡುಗೆ ಅನಿಲ ಸಿಲಿಂಡರ್‌ ಬಂದಿದೆ. ಹೀಗಿದ್ದರೂ ಹೆಚ್ಚಿನವರ ಮನೆಗಳಲ್ಲಿ ಈಗಲೂ ಸ್ಟೌಗಳಿವೆ. ಸಿಲಿಂಡರ್‌ ಯಾವಾಗ ಮುಗಿಯುತ್ತದೆಯೋ ಗೊತ್ತಾಗುವುದಿಲ್ಲ. ಹೆಚ್ಚುವರಿ ಸಿಲಿಂಡರ್‌ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಸ್ಟೌ ಬಳಸುತ್ತಾರೆ. ಆದರೆ, ಪಡಿತರ ಅಂಗಡಿಗಳಲ್ಲಿ ಸೀಮೆ ಎಣ್ಣೆ ಕೊಡುವುದು ನಿಲ್ಲಿಸಿರುವುದರಿಂದ ಅಂತಹವರು ತೊಂದರೆ ಅನುಭವಿಸುತ್ತಿದ್ದಾರೆ. 

ಈ ಹಿಂದೆ ಗ್ರಾಮೀಣ ಭಾಗಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಆರಂಭದಲ್ಲಿ ಉಚಿತವಾಗಿ, ನಂತರ ಸಬ್ಸಿಡಿಯಲ್ಲಿ ಸಿಲಿಂಡರ್‌ ಕೊಡಲಾಗುತ್ತಿತ್ತು. ಈಗ ಅದಕ್ಕೆ ಸರ್ಕಾರ ಕೊಕ್ಕೆ ಹಾಕಿದೆ. ಪ್ರತಿ ಸಿಲಿಂಡರ್‌ ಬೆಲೆ ಸಾವಿರ ರೂಪಾಯಿ ಸನಿಹಕ್ಕೆ ತಲುಪಿದೆ. ಅನೇಕರು ಅದನ್ನು ಬಳಸುವುದು ಬಿಟ್ಟಿದ್ದಾರೆ. ಈಗ ಪುನಃ ಅವರು ಸೀಮೆ ಎಣ್ಣೆ ಮೊರೆ ಹೋಗಿದ್ದಾರೆ. ಪಡಿತರ ಅಂಗಡಿಗಳಲ್ಲಿ ಸಿಗದ ಕಾರಣ ಕಾಳಸಂತೆಯಲ್ಲಿ ಅದಕ್ಕಿಂತ ಹೆಚ್ಚಿನ ಬೆಲೆಗೆ ಖರೀದಿಸುತ್ತಿದ್ದಾರೆ. ಸರ್ಕಾರ ಪುನಃ ಪಡಿತರ ಅಂಗಡಿಗಳಲ್ಲಿ ಸೀಮೆ ಎಣ್ಣೆ ಕೊಡಬೇಕು ಎನ್ನುವುದು ಹಲವು ಗ್ರಾಮಸ್ಥರ ಕೂಗು.

ಪ್ರಜಾವಾಣಿ ತಂಡ: ಶಶಿಕಾಂತ ಎಸ್‌. ಶೆಂಬೆಳ್ಳಿ, ಸಿ. ಶಿವಾನಂದ, ವಿಶ್ವನಾಥ ಡಿ, ಎ.ಎಂ. ಸೋಮಶೇಖರಯ್ಯ, ಎಸ್‌.ಎಂ. ಗುರುಪ್ರಸಾದ್‌, ಕೆ. ಸೋಮಶೇಖರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು