ಹೊಸಪೇಟೆ (ವಿಜಯನಗರ): ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿ ಜಾರಿಗೊಳಿಸುವ ಸರ್ಕಾರದ ತೀರ್ಮಾನ ವಿರೋಧಿಸಿ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯದವರು ಶುಕ್ರವಾರ ಜಿಲ್ಲೆಯ ಹೂವಿನಹಡಗಲಿ ಪಟ್ಟಣ ಹಾಗೂ ಹರಪನಹಳ್ಳಿ ತಾಲ್ಲೂಕಿನ ಮಾಚಿಹಳ್ಳಿ ತಾಂಡಾದಲ್ಲಿ ಪ್ರತಿಭಟನೆ ನಡೆಸಿದರು.
ಹಡಗಲಿ ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಲ್ಲಿ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸಾವಿರಾರು ಜನರು ರಸ್ತೆ ಮಾರ್ಗ ಬಂದ್ ಮಾಡಿ ಪ್ರತಿಭಟಿಸಿದರು. ದೂಪದಹಳ್ಳಿ ಮರಿಯ್ಮಮದೇವಿ ಮಠದ ಶಿವಪ್ರಕಾಶ್ ಮಹಾರಾಜ್ ಮಾತನಾಡಿ, ‘ಒಳ ಮೀಸಲಾತಿ ನೆಪದಲ್ಲಿ ಸರ್ಕಾರ ಪರಿಶಿಷ್ಟರಲ್ಲಿ ಒಡಕು ಸೃಷ್ಟಿಸಿದೆ. ಸರ್ಕಾರ ಈ ತೀರ್ಮಾನ ಹಿಂಪಡೆಯದಿದ್ದರೆ ಎಲ್ಲ ಲಂಬಾಣಿ ತಾಂಡಾಗಳಲ್ಲಿ ಚುನಾವಣೆ ಬಹಿಷ್ಕರಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಮಾಚಿಹಳ್ಳಿ ತಾಂಡಾದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಸಚಿವರಾದ ಗೋವಿಂದ ಕಾರಜೋಳ, ಪ್ರಭು ಚೌಹಾಣ್, ಸಂಸದ ಉಮೇಶ ಜಾಧವ್ ಅವರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಲಂಬಾಣಿ ಸಮುದಾಯ ಪ್ರತಿಭಟನೆ (ಕಲಬುರಗಿ ವರದಿ): ಒಳಮೀಸಲಾತಿ ಹಂಚಿಕೆ ನಿರ್ಣಯ ಖಂಡಿಸಿ ಬಂಜಾರ, ಭೋವಿ, ಕೊರಚ, ಕೊರಮ ಮುಂತಾದ ಸಮುದಾಯದ ಜನರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಮೀಸ ಲಾತಿ ಸಂರಕ್ಷಣಾ ಸಮಿತಿ, ಗೋರಸೇನಾ ರಾಷ್ಟ್ರೀಯ ಸಂಘಟನೆ ಮತ್ತು ಭೋವಿ ಸಮಾಜದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಏಪ್ರಿಲ್ 4ರಂದು ಬಂಜಾರ ಸಂಘದ ಸಭೆ: ಅಖಿಲ ಭಾರತ ಬಂಜಾರ ಸೇವಾಸಂಘದ ಕಾರ್ಯಕಾರಣಿ ಸಮಿತಿ ಸಭೆ ಏ. 4ರಂದು ಕೊಪ್ಪಳದಲ್ಲಿ ಆಯೋಜಿ ಸಲಾಗಿದೆ’ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಭರತ ನಾಯ್ಕ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.