ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ತೂರಿದ್ದಾರೆ ಕಲ್ಲು, ಬೀಳಲಿವೆಯೇ ಎರಡು ಹಣ್ಣು?

ತುಕಾರಾಂ ಪುತ್ರಿಯನ್ನು ‘ಲೋಕಾ’ ಸಮರಕ್ಕೆ ಇಳಿಸಲು ತೆರೆಮರೆಯ ಕಸರತ್ತು
Published 2 ಮಾರ್ಚ್ 2024, 5:10 IST
Last Updated 2 ಮಾರ್ಚ್ 2024, 5:10 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಅವರು ತಮ್ಮ ಜನ್ಮದಿನವನ್ನು ನಗರದಲ್ಲಿ ಮಂಗಳವಾರ ಆಚರಿಸುವ ಮೂಲಕ ಒಂದು ಕಲ್ಲನ್ನು ತೂರಿ ಎರಡು ಹಣ್ಣುಗಳನ್ನು ಬೀಳಿಸುವ ತಂತ್ರ ರೂಪಿಸಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿವೆ.

ಹೊಸಪೇಟೆ ವಿಧಾನಸಭಾ ಕ್ಷೇತ್ರದ ಸದ್ಯದ ಪರಿಸ್ಥಿತಿಯನ್ನು ಬಳಸಿಕೊಂಡು ಮುಂದಿನ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ವೇದಿಕೆ ಸಜ್ಜಗೊಳಿಸುವುದು ಹಾಗೂ ತಮ್ಮ ಆಪ್ತ ಈ.ತುಕಾರಾಂ ಅವರ ಪುತ್ರಿ ಸೌಪರ್ಣಿಕಾ ಅವರನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಮಾಡುವ ನಿಟ್ಟಿನಲ್ಲಿ ವರಿಷ್ಠರ ಮೇಲೆ ಒತ್ತಡ ತರುವ ತಂತ್ರ ರೂಪಿಸಿದಂತಿದೆ ಎಂದು ಅವರ ಆಪ್ತ ಮೂಲಗಳು ಅಭಿಪ್ರಾಯಪಟ್ಟಿವೆ.

ಬಳ್ಳಾರಿ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರ ಸಹೋದರ ವೆಂಕಟೇಶ್ ಪ್ರಸಾದ್‌ಗೆ ಟಿಕೆಟ್ ಸಿಕ್ಕಿ, ಅವರು ರಾಜಕೀಯ ಅಸ್ತಿತ್ವ ಪಡೆದುಕೊಂಡರೆ, ಮೀಸಲಾತಿ ಪುನರ್‌ವಿಂಗಡನೆಯಾಗಿ ರಾಜಕೀಯ ಹಿಡಿತ ನಾಗೇಂದ್ರ ಕುಟುಂಬದ ಕೈಯಲ್ಲಿ ಮಾತ್ರ ಉಳಿಯಬಹುದು. ಇದನ್ನು ತಪ್ಪಿಸಬೇಕು ಎಂಬ ಕಾರಣಕ್ಕೇ ಈಗಾಗಲೇ ಸಚಿವರಾಗಿರುವ ನಾಗೇಂದ್ರ ಕುಟುಂಬಕ್ಕೆ ಲೋಕಸಭಾ ಟಿಕೆಟ್ ಕೊಡುವುದು ಬೇಡ ಎಂದು ಹೈಕಮಾಂಡ್‌ಗೆ ಮತ್ತೆ ಮತ್ತೆ ಒತ್ತಾಯ ಮಾಡುತ್ತಿದ್ದಾರೆ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ.

ಒಂದು ವೇಳೆ ಶಾಸಕರು, ಸಚಿವರಿಗೆ ಟಿಕೆಟ್ ಕೊಡುವುದಾದರೆ ತುಕಾರಾಂ ಅವರ ಪುತ್ರಿಗೇ ಕೊಡಲಿ ಎಂದು ಬಯಸಿರುವ ಸಂತೋಷ್ ಲಾಡ್, ಉಭಯ ಜಿಲ್ಲೆಗಳ ಶಾಸಕರನ್ನು, ಅವರ ಬೆಂಬಲಿಗರನ್ನು ತಮ್ಮ ಜನ್ಮದಿನಕ್ಕೆ ಕರೆತರುವ ಪ್ರಯತ್ನ ಮಾಡಿದರು ಎನ್ನಲಾಗುತ್ತಿದೆ.

ಪರಿಸ್ಥಿತಿಯ ಲಾಭ ಪಡೆಯುವ ಯತ್ನ: ಸಂತೋಷ್‌ ಲಾಡ್ ಈ ಹಿಂದೆ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು. ಸಂಡೂರಿನಲ್ಲಿ ಗೆದ್ದು ಬೀಗಿದವರು. ಕ್ಷೇತ್ರ ಮರುವಿಂಗಡಣೆ ಆಗುವ ಮೊದಲು ಹೊಸಪೇಟೆಯ 16 ಹಳ್ಳಿಗಳು ಸಂಡೂರಿನ ಭಾಗವಾಗಿದ್ದವು. ಮೀಸಲಾತಿ ಬದಲಾದ ಬಳಿಕ ಅವರು ಕಲಘಟಗಿಗೆ ಹೋದುದು ಅನಿವಾರ್ಯ ಕಾರಣಗಳಿಂದ. ಜನಾರ್ದನ ರೆಡ್ಡಿ ಸಹೋದರರ ಪ್ರಬಲ ಹೊಡೆತ ತಾಳಲಾರದೆ ಅವರು ಧಾರವಾಡದತ್ತ ತೆರಳಿದ್ದರು.

ಆನಂದ್ ಸಿಂಗ್ ಅವರನ್ನೂ ಕಾಂಗ್ರೆಸ್‌ಗೆ ಬರುವಂತೆ ಮಾಡಿದ್ದರಲ್ಲಿ ಲಾಡ್ ಪ್ರಯತ್ನ ದೊಡ್ಡದೇ ಇತ್ತು. ಕಳೆದ ಚುನಾವಣೆಯಲ್ಲಿ ಸಿದ್ಧಾರ್ಥ ಸಿಂಗ್ 35 ಸಾವಿರಕ್ಕೂ ಅಧಿಕ ಮತಗಳ ಅಂತರಿಂದ ಸೋತಿರುವುದು ಹಾಗೂ ಹಾಲಿ ಶಾಸಕ ಎಚ್‌.ಆರ್.ಗವಿಯಪ್ಪ ಅವರು ಜನರೊಂದಿಗೆ ಬೆರೆಯದೆ ಇರುವುದರ ಲಾಭ ಪಡೆದು, ಈ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಅವರ ತಂತ್ರವಾಗಿರುವಂತೆ ಕಾಣುತ್ತಿದೆ ಎಂದು ಮೂಲಗಳು ಹೇಳಿವೆ.

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ತಮ್ಮ ಜನ್ಮದಿನಕ್ಕೂ ದೊಡ್ಡ ಸಂಖ್ಯೆಯಲ್ಲಿ ಜನರು ಬಂದಿದ್ದಾರೆ, ತಮ್ಮ ಮಾತು ಇಲ್ಲಿ ನಡೆಯುತ್ತಿದೆ, ತಾವು ಹೇಳಿದ ಅಭ್ಯರ್ಥಿಗೆ ಟಿಕೆಟ್ ಕೊಡಿ ಎಂಬ ಸಂದೇಶವನ್ನು ಸೂಚ್ಯವಾಗಿ ಅವರು ವರಿಷ್ಠರಿಗೆ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸೌಪರ್ಣಿಕಾ
ಸೌಪರ್ಣಿಕಾ

ಪಕ್ಷೇತರ ಅಭ್ಯರ್ಥಿ ಕಣಕ್ಕೆ?

ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಪ್ರಬಲ ಲಿಂಗಾಯತ ಸಮುದಾಯ ಹಾಗೂ ಇತರ ಕೆಲವು ಜಾತಿಗಳ ಮತಗಳು ಬಿಜೆಪಿಯತ್ತ ಹೋಗುವುದನ್ನು ತಪ್ಪಿಸಲು ಹಾಗೂ ‘ಅಹಿಂದ’ ಮತಗಳನ್ನು ಕ್ರೋಡೀಕರಿಸಲು ಬಿಜೆಪಿಯಲ್ಲಿ ಟಿಕೆಟ್ ದೊರೆಯದೆ ಬಂಡಾಯ ಏಳುವ ಅಭ್ಯರ್ಥಿಯೊಬ್ಬರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸುವ ಯೋಜನೆ ಮಾಡಲಾಗುತ್ತಿದೆ. ಈ ಮೂಲಕ ಮತ ವಿಭಜನೆಯ ತಂತ್ರವನ್ನು ಸಂತೋಷ್ ಲಾಡ್ ಹೆಣೆಯುತ್ತಿದ್ದಾರೆ. ಅದರ ಭಾಗವಾಗಿಯೇ ಎರಡೂ ಸಮುದಾಯಗಳನ್ನು ಖುಷಿಪಡಿಸುವ ಸಲುವಾಗಿ ಬಸವಣ್ಣ ಮತ್ತು ಅಂಬೇಡ್ಕರ್‌ ಕುರಿತ ಹಾಡುಗಳ ರಚನೆ ಬಿಡುಗಡೆ ಕಾರ್ಯಕ್ರಮ ನಡೆಸಿರಬೇಕು ಎಂಬ ಚರ್ಚೆ ಇದೀಗ ಹೊಸಪೇಟೆ ಭಾಗದಲ್ಲಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT