ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

LS Polls | ಜನಜೀವನ ಮೇಲಿನ ದಾಳಿ ಹಿಮ್ಮೆಟ್ಟಿಸುವ ಸಂದೇಶ: ಸಿಪಿಎಂ ವಿಶ್ಲೇಷಣೆ

Published 6 ಜೂನ್ 2024, 9:02 IST
Last Updated 6 ಜೂನ್ 2024, 9:02 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಲೋಕಸಭಾ ಚುನಾವಣಾ ಫಲಿತಾಂಶ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಜನಜೀವನದ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸುವ ಸಂದೇಶವನ್ನು ಹೊತ್ತ ಜನತಾ ತೀರ್ಪಾಗಿದೆ ಎಂದು ಸಿಪಿಎಂ ವಿಶ್ಲೇಷಿಸಿದೆ.

ಇಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ್‌, ಸತತ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಹುಮತ ಪಡೆದು ದಶಕಗಳ ಕಾಲ ಜನವಿರೋದಿ ದುರಾಡಳಿತ ನಡೆಸಿದ್ದ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಿಗೆ ಹಿನ್ನಡೆ ಉಂಟುಮಾಡುವ ತೀರ್ಪನ್ನು ಜನತೆ ನೀಡಿದ್ದಾರೆ ಎಂದರು.

‘ಜನತಾ ತೀರ್ಪಿನಿಂದ ನರೇಂದ್ರ ಮೋದಿಯವರಿಗೆ ಮುಖಭಂಗವಾಗಿದೆ. ನಿರುದ್ಯೋಗ, ಬೆಲೆ ಏರಿಕೆ, ಕೃಷಿ ಸಂಕಷ್ಟ, ಪ್ರಜಾಪ್ರಭುತ್ವ, ಸಂವಿಧಾನದ ಮೇಲಿನ ದಾಳಿ ಹಾಗೂ ಕೋಮು ದ್ವೇಷದ ವಿರುದ್ದ ಜನರು ಒಟ್ಟಾಗಿ ಇಂಡಿಯಾ ಕೂಟದ ಜನತೆ ನಿಂತರು. ಪ್ರಚಾರದ ಸಂದರ್ಭದಲ್ಲಿ ಮೋದಿಯವರು ನೀತಿ ಸಂಹಿತೆಯನ್ನು ಉಲ್ಲಂಘಿಸಿ ಮಾಡಿದ ದ್ವೇಷ ಭಾಷಣದ ವಿರುದ್ದ ಚುನಾವಣಾ ಆಯೋಗ ಕ್ರಮ ಕೈಗೊಂಡಿದ್ದಲ್ಲಿ ಖಂಡಿತವಾಗಿ ಬಿಜೆಪಿ ಮತ್ತಷ್ಟು ಹಿನ್ನಡೆ ಅನುಭವಿಸುತ್ತಿತ್ತು’ ಎಂದು ಅವರು ವಿಶ್ಲೇಷಿಸಿದರು.

ಪಕ್ಷದ ಬಲವರ್ಧನೆ: ಈ ಬಾರಿ ಸಿಪಿಎಂ 4, ಸಿಪಿಐ ಹಾಗು ಸಿಪಿಐ(ಎಂ,ಎಲ್) ತಲಾ 2 ಸೇರಿ ಒಟ್ಟಾಗಿ ಎಡಪಕ್ಷಗಳು 8 ಸ್ಥಾನಗಳನ್ನು ಪಡೆದು ಹಿಂದಿಗಿಂತ ಉತ್ತಮ ಸ್ಥಿತಿ ಹೊಂದಿವೆ ಎಂದು ಅವರು ಪ್ರತಿಪಾದಿಸಿದರು. ಕೇರಳದಲ್ಲಿ ಈ ಬಾರಿ ಒಂದು ಸ್ಥಾನ ಗಳಿಸಿದೆ, ಕಳೆದ ಬಾರಿಯೂ ಒಂದು ಸ್ಥಾನ ಗಳಿಸಿತ್ತು. ಇತರ ರಾಜ್ಯಗಳಲ್ಲಿ ಪಕ್ಷ ಕೊಂಚ ಬಲ ಪಡೆದುಕೊಂಡಿದೆ. ಹೀಗಿದ್ದರೂ ಕೇರಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜನರು ಎಡಪಕ್ಷಕ್ಕೇ ಒಲವು ತೋರಿಸುತ್ತಿದ್ದಾರೆ ಎಂದು ಬಸವರಾಜ್‌ ಹೇಳಿದರು.

ರಾಜ್ಯದಲ್ಲಿ ಮೈತ್ರಿಗೆ ಹಿನ್ನಡೆ: ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಜನಾರ್ದನ ರೆಡ್ಡಿ ಜೊತೆ ಕೈ ಜೋಡಿಸಿಯೂ ಅತ್ಯುತ್ತಮ ಫಲಿತಾಂಶ ಬಂದಿಲ್ಲ. ಲಿಂಗಾಯತ, ಒಕ್ಕಲಿಗ ಜಾತಿ ಸಮೀಕರಣ ಮಾಡಿ, ಕೋಮುವಾದ ಅಪ್ಪಿಕೊಂಡಿದ್ದರೂ ಕಳೆದ ಬಾರಿಗಿಂತ ಕಡಿಮೆ ಕ್ಷೇತ್ರದಲ್ಲಿ ಗೆಲುವು ಸಾಧಿಸಲಾಗಿದೆ. ನರೇಂದ್ರ ಮೋದಿ ಮತ್ತು ದೇವೇಗೌಡರು ಪ್ರಚಾರ ನಡೆಸಿದರೂ ಮೈತ್ರಿ ಹೇಳಿಕೊಳ್ಳುವಂತಹ ಸಾಧನೆ ತೋರಿಸಿಲ್ಲ. ಒಟ್ಟಾರೆ ಕಳೆದ ಬಾರಿಗೆ ಹೋಲಿಸಿದರೆ ಶೇ 5 ಮತಗಳ ಹಿನ್ನಡೆ ಕಂಡಿದೆ ಎಂದು ಅವರು ತಿಳಿಸಿದರು.

ಸಿಪಿಎಂ ಮತ್ತಿತರ ಪ್ರಜಾಸತ್ತಾತ್ಮಕ ಶಕ್ತಿಗಳ ಕರೆಗೆ ಓಗೊಟ್ಟು ಬಿಜೆಪಿಯನ್ನು ಹಿಮ್ಮೆಟ್ಟಿಸಿ, ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಮುಂದಾದ ಜನತೆಯನ್ನು ಪಕ್ಷ ಅಭಿನಂದಿಸುತ್ತದೆ ಎಂದು ಅವರು ಹೇಳಿದರು.

ವಾಲ್ಮೀಕಿ ನಿಗಮದಲ್ಲಿ ಅಕ್ರಮ: ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದಲ್ಲಿ ಅಧಿಕಾರಿಗಳ ಜತೆಗೆ ಇನ್ನೂ ಹಲವು ಕಾಣದ ಕೈಗಳ ಕೈವಾಡ ಇದೆ. ಅತ್ಯಂತ ಕಡು ಬಡವರಿಗೆ ಸಿಗಬೇಕಾದ ಸರ್ಕಾರದ ಸೌಲಭ್ಯಗಳು ಅವರಿಗೆ ಸಿಗದೆ, ಅದಕ್ಕೆ ಮೀಸಲಾದ ಹಣ ಯಾರದೋ ಪಾಲಾಗುತ್ತಿದೆ. ಇದೇ ರೀತಿ ಇನ್ನೂ ಹಲವು ಅಭಿವೃದ್ಧಿ ನಿಗಮಗಳಲ್ಲಿ ಅಕ್ರಮಗಳು ನಡೆದಿರುವ ಶಂಕೆ ಇದೆ. ಹೀಗಾಗಿ ಸಿಐಡಿ, ಸಿಬಿಐ ತನಿಖೆಯ ಬದಲಿಗೆ ನ್ಯಾಯಾಂಗ ತನಿಖೆಯೇ ಆಗಬೇಕು, ಅದರಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ’ ಎಂದು ಬಸವರಾಜ್‌ ಪ್ರತಿಪಾದಿಸಿದರು.

ಗುತ್ತಿಗೆ ನೌಕರರ ಮೀಸಲಾತಿ ವಿಚಾರದಲ್ಲಿ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ ಅವರು, ಹೊರಗುತ್ತಿಗೆ, ಒಳಗುತ್ತಿಗೆ, ಸಿಎಂಡಿ ಕೆಟಗರಿಯ ನೌಕರರಿಗೆ ಮೀಸಲಾತಿಯ ಮೂಲಕ ಸಾಮಾಜಿಕ ನ್ಯಾಯ ಕೊಡುವುದಾಗಿ ಹೇಳಿರುವುದು ಸ್ವಾಗತಾರ್ಹ, ಆದರೆ ಕಾಯಮಾತಿಗೆ ಈ ಮೀಸಲಾತಿ ಆಧಾರವಲ್ಲ ಎಂದು ಹೇಳಿರುವುದು ತಪ್ಪು. ನಿಮಗೆ ನಿಜವಾಗಿಯೂ ಸಾಮಾಜಿಕ ನ್ಯಾಯ ನೀಡುವ ಮನಸ್ಸಿದ್ದರೆ ಎಲ್ಲ ಗುತ್ತಿಗೆ ಕಾರ್ಮಿಕರನ್ನು ಕಾಯಂ ಮಾಡಬೇಕು, ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿಗೆ ತರುವಂತೆ ಮಾಡಬೇಕು. ಇಲ್ಲವಾದರೆ ದುರ್ಬಲ ವರ್ಗದವರಿಗೆ ಅನ್ಯಾಯ ಮುಂದುವರಿಯುತ್ತಲೇ ಹೋಗುತ್ತದೆ ಎಂದರು.

ಸಾರ್ವಜನಿಕ ಹಾಗೂ ಖಾಸಗಿ ರಂಗದಲ್ಲಿ ಗುತ್ತಿಗೆ ಪದ್ಧತಿಯನ್ನು ಮತ್ತು ಖಾಯಮಾತಿಗೆ ಇರುವ ನಿರ್ಬಂಧಗಳನ್ನು ರದ್ದುಗೊಳಿಸಿ, ಅಲ್ಲಿ ಹುದ್ದೆಗಳನ್ನು ಭರ್ತಿ ಮಾಡಿ, ನಿಜ ಸಾಮಾಜಿಕ ನ್ಯಾಯಕ್ಕೆ ಆಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಆರ್.ಎಸ್.ಬಸವರಾಜ, ಬಿ.ಮಾಳಮ್ಮ, ಜಿಲ್ಲಾ ಸಮಿತಿ ಕಾರ್ಯದರ್ಶಿ ಆರ್.ಭಾಸ್ಕರ ರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT