ಸೋಮವಾರ, ಅಕ್ಟೋಬರ್ 3, 2022
24 °C

ಸರ್ಕಾರಿ ಕಾರ್ಯಕ್ರಮದ ಪ್ರಶಸ್ತಿ ಪತ್ರದಲ್ಲಿ ಸಚಿವ ಆನಂದ್‌ ಸಿಂಗ್‌ ಮಗನ ಚಿತ್ರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಸರ್ಕಾರಿ ಕಾರ್ಯಕ್ರಮದ ಪ್ರಶಸ್ತಿ ಪತ್ರದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ಮಗ ಸಿದ್ದಾರ್ಥ ಸಿಂಗ್‌ ಅವರ ಭಾವಚಿತ್ರ ಹಾಗೂ ಅವರ ಹೆಸರು ಮುದ್ರಿಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.

ವಿಜಯನಗರ ಜಿಲ್ಲಾ ಪಂಚಾಯಿತಿ, ಹೊಸಪೇಟೆ ತಾಲ್ಲೂಕು ಪಂಚಾಯಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಆ. 5 ಮತ್ತು 6ರಂದು ತಾಲ್ಲೂಕಿನ ಪಾಪಿನಾಯಕನಹಳ್ಳಿಯಲ್ಲಿ 48ನೇ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕ್ರೀಡಾಕೂಟದ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ನೀಡಲಾಗಿದ್ದು, ಅದರಲ್ಲಿ ಸಿದ್ದಾರ್ಥ ಸಿಂಗ್‌ ಅವರ ಕೈಮುಗಿದಿರುವ ಚಿತ್ರ ಮುದ್ರಿಸಲಾಗಿದೆ. ಅದರ ಅಡಿಯಲ್ಲಿ, ಕೊಡುಗೆ: ಶ್ರೀ ಸಿದ್ದಾರ್ಥ ಸಿಂಗ್‌, ಯುವ ಮುಖಂಡರು ಹಾಗೂ ಸಮಾಜ ಸೇವಕರು, ವಿಜಯನಗರ ಕ್ಷೇತ್ರ, ಹೊಸಪೇಟೆ ಎಂದು ಬರೆಯಲಾಗಿದೆ.

‘ಸರ್ಕಾರಿ ಕಾರ್ಯಕ್ರಮದ ಪ್ರಶಸ್ತಿ ಪತ್ರದಲ್ಲಿ ಸಚಿವರ ಮಗನ ಭಾವಚಿತ್ರ ಹಾಕಿರುವ ಕ್ರಮ ಸರಿಯಲ್ಲ. ಸಂಬಂಧಿಸಿದವರು ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ನಗರಸಭೆ ಸದಸ್ಯ ಅಬ್ದುಲ್‌ ಖದೀರ್‌ ಆಗ್ರಹಿಸಿದ್ದಾರೆ.

ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು