ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕತ್ತೆ ಹಾಲಿನ ವ್ಯವಹಾರ: 'ಜೆನ್ನಿಮಿಲ್ಕ್‌' ಕಂಪನಿ ವಿರುದ್ಧ 60ಕ್ಕೂ ಅಧಿಕ ದೂರು

ಕಂಪನಿಯ ಎಂ.ಡಿಯಿಂದಲೂ ತೆಲುಗಿನಲ್ಲಿ ಪತ್ರ–ತನಗೆ ನಷ್ಟವಾಗಿದೆ ಎಂದು ಉಲ್ಲೇಖ
Published : 20 ಸೆಪ್ಟೆಂಬರ್ 2024, 11:23 IST
Last Updated : 20 ಸೆಪ್ಟೆಂಬರ್ 2024, 11:23 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ರೈತರಿಗೆ ಕತ್ತೆ ನೀಡಿ ಅವರಿಂದ ಹಾಲು ಖರೀದಿಸುವ ವ್ಯವಹಾರ ನಡೆಸುತ್ತಿದ್ದ ‘ಜೆನ್ನಿ ಮಿಲ್ಕ್’ ಕಂಪನಿ ವಿರುದ್ಧ 60ಕ್ಕೂ ಅಧಿಕ ಮಂದಿ ಇಲ್ಲಿನ ನಗರ ಠಾಣೆಯಲ್ಲಿ ದೂರು ನೀಡಿದ್ದು, ಇನ್ನೂ ಹಲವರು ರಾಜ್ಯದ ಬೇರೆ ಬೇರೆ ಕಡೆಗಳಿಂದ ಇಲ್ಲಿಗೆ ಬಂದು ದೂರು ನೀಡುತ್ತಿದ್ದಾರೆ. ಮುಖ್ಯ ಆರೋಪಿಯೂ ಆಗಿರುವ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನೂತಲಪತಿ ಮುರಳಿ ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

‘ರಾಜ್ಯದ ವಿವಿಧೆಡೆ 100ರಿಂದ 120 ಮಂದಿ ಮೋಸ ಹೋಗಿರುವ ಶಂಕೆ ಇದೆ. ಒಟ್ಟಾರೆ 300 ಮಂದಿ ಈ ವ್ಯವಹಾರದಲ್ಲಿ ಹಣ ತೊಡಗಿಸಿರುವ ಮಾಹಿತಿ ಇದೆ. ಇನ್ಸ್‌ಪೆಕ್ಟರ್ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಮುರಳಿ ಅವರು ವಿದೇಶಕ್ಕೆ ಹೋಗಿದ್ದಾರೆ ಎಂಬ ವದಂತಿ ಇದ್ದರೂ ಅದರ ಸತ್ಯಾಸತ್ಯತೆ ತಿಳಿಯಬೇಕಿದೆ. ವಿಮಾನನಿಲ್ದಾಣಗಳೂ ಸೇರಿದಂತೆ ಎಲ್ಲೆಡೆ ಮುರಳಿ, ಮ್ಯಾನೇಜರ್ ಶಂಕರ್ ರೆಡ್ಡಿ ಮತ್ತು ಇತರ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್‌.ತಿಳಿಸಿದ್ದಾರೆ.

‘ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ನಗರ ಠಾಣೆಯಲ್ಲಿ ಹೊಸಪೇಟೆಯ ಮಲ್ಲೇಶಪ್ಪ ಎಂಬುವವರು ಕಂಪನಿಯ ವಿರುದ್ಧ ದೂರು ನೀಡಿದರು. ಅದರ ಆಧಾರದಲ್ಲಿ ಕಂಪನಿಯ ಎಂ.ಡಿ, ಮ್ಯಾನೇಜರ್‌ ಮತ್ತು ಇತರ ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹೊಸಪೇಟೆ ಸುತ್ತಮುತ್ತ ಮತ್ತು ರಾಜ್ಯದ ಏಳಕ್ಕೂ ಅಧಿಕ ಜಿಲ್ಲೆಗಳಿಂದ ಜನರು ಠಾಣೆಗೆ ಬಂದಿದ್ದು, ಈಗಾಗಲೇ 60ಕ್ಕೂ ಅಧಿಕ ಜನರಿಂದ ದೂರು ಸ್ವೀಕರಿಸಲಾಗಿದೆ. ಎರಡು ಪ್ರತ್ಯೇಕ ಕೌಂಟರ್‌ಗಳನ್ನು ತೆರೆದು ದೂರು ಸ್ವೀಕರಿಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ಮೋಸ ಹೋಗಿರುವ ಕುರಿತು ಇನ್ನಷ್ಟು ಜನರು ದೂರು ನೀಡಲು ಬರುತ್ತಿದ್ದಾರೆ. ಹೆಚ್ಚಿನ ತನಿಖೆ ಅಗತ್ಯವಿರುವುದರಿಂದ ಮತ್ತೊಂದು ವಿಶೇಷ ತಂಡ ರಚಿಸಲಾಗುವುದು ಎಂದು ಅವರು ಹೇಳಿದರು.

ಹೊಸಪೇಟೆ ನಗರ ಪೊಲೀಸ್ ಠಾಣೆಯಲ್ಲಿ ‘ಜೆನ್ನಿ ಮಿಲ್ಕ್‌’ ಕಂಪನಿ ವಿರುದ್ಧ ದೂರು ನೀಡಲು ಶುಕ್ರವಾರ ಸರದಿಯಲ್ಲಿ ನಿಂತಿದ್ದ ಜನರು

ಹೊಸಪೇಟೆ ನಗರ ಪೊಲೀಸ್ ಠಾಣೆಯಲ್ಲಿ ‘ಜೆನ್ನಿ ಮಿಲ್ಕ್‌’ ಕಂಪನಿ ವಿರುದ್ಧ ದೂರು ನೀಡಲು ಶುಕ್ರವಾರ ಸರದಿಯಲ್ಲಿ ನಿಂತಿದ್ದ ಜನರು

ಈ ಮಧ್ಯೆ, ಕಂಪನಿಯ ಎಂ.ಡಿ ನೂತಲಪತಿ ಮುರಳಿ ಅವರು ತಮ್ಮ ಗ್ರಾಹಕರಿಗೆ ಮೂರು ಪುಟಗಳ ಪತ್ರವನ್ನು ವಾಟ್ಸ್‌ಆ್ಯಪ್‌ ಮೂಲಕ ರವಾನಿಸಿದ್ದು, ತಾವು ಗ್ರಾಹಕರಿಗೆ ಮೋಸ ಮಾಡಿಲ್ಲ, ನಿರಂತರ ಹಣ ಸಂದಾಯ ಮಾಡಲಾಗುತ್ತಿತ್ತು. ಸೆ.17ರಂದು ಹೊಸಪೇಟೆಯಲ್ಲಿನ ಕಚೇರಿ ಮುಚ್ಚಿದ್ದರಿಂದಲೇ ಇದೀಗ ಗ್ರಾಹಕರಿಂದ ದೂರ ಹೋಗುವಂತಾಗಿದೆ ಎಂದು ಹೇಳಿಕೊಂಡಿದ್ದಾರೆ.

‘ನಾನು ನನ್ನ ಗ್ರಾಹಕರಿಗೆ ಈಗಾಗಲೇ ₹ 4 ಕೋಟಿ ಕೊಟ್ಟಿದ್ದೇನೆ. ಕಚೇರಿ ತೆರೆಯುವುದು, ಮೂಲಸೌಲಭ್ಯಕ್ಕಾಗಿ ಸಾಕಷ್ಟು ಖರ್ಚು ಮಾಡಿದ್ದೇನೆ. ನನ್ನ ಕಂಪನಿಯ ಮ್ಯಾನೇಜರ್ ಶಂಕರ್ ರೆಡ್ಡಿ ನನಗೆ ಮೋಸ ಮಾಡಿದ್ದಾರೆ. ಹಾಲಿನಲ್ಲಿ ನೀರು ಬೆರೆಸಿ ತಂದು ಕೊಟ್ಟಿದ್ದರೂ ಅದನ್ನು ಸರಿಯಾಗಿ ಗಮನಿಸದೆ ಹಾಲು ತಿರಸ್ಕೃತಗೊಳ್ಳುವಂತೆ ಮಾಡಿದ್ದಾರೆ. ಅದರಿಂದ ನನಗೆ ಭಾರಿ ನಷ್ಟವಾಗಿದೆ. ಹೊಸಪೇಟೆಯ ಇಬ್ಬರು ನನ್ನಿಂದ ಹಣ ಪಡೆದಿದ್ದಾರೆ, ಮೂವರು ಸರ್ಕಾರಿ ಅಧಿಕಾರಿಗಳೂ ಹಣ ಪಡೆದಿದ್ದಾರೆ. ನಾನು ಮತ್ತು ನನ್ನ ಕುಟುಂಬದ ಎಲ್ಲಾ ಬಂಡವಾಳವನ್ನೂ ಇದೇ ಕಂಪನಿಯಲ್ಲಿ ತೊಡಗಿಸಿದ್ದೆವು. ನಮಗೆ ಬಹಳ ನಷ್ಟವಾಗಿದೆ. ನಾವೀಗ ದುಬೈಗೆ ಹೋಗ್ತಿದ್ದೇವೆ’ ಎಂದು ಪತ್ರದಲ್ಲಿ ನಮೂದಿಸಿದ್ದಾರೆ.

ಹಿನ್ನೆಲೆ: ಸುಮಾರು ಆರು ತಿಂಗಳಿಂದ ಕಾರ್ಯಾಚರಿಸುತ್ತಿದ್ದ ಕಂಪನಿಯ ವ್ಯವಹಾರದ ಬಗ್ಗೆ ಸಂಶಯ ವ್ಯಕ್ತಪಡಿಸಿ ಕೆಲವು ದಿನಗಳ ಹಿಂದೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿತ್ತು. ಅದರ ಬಳಿಕವೂ ಕಂಪನಿಯ ವ್ಯವಹಾರ ಮುಂದುವರಿದೇ ಇತ್ತು. ಕಂಪನಿಯ ಬಗ್ಗೆ ಸಂಶಯ ಬಲವಾದ ಕಾರಣ ಸೆ.17ರಂದು ಜಿಲ್ಲಾ ಯೋಜನಾ ಕೋಶದ ಯೋಜನಾ ನಿರ್ದೇಶಕ ಮನೋಹರ್‌ ಮತ್ತು ನಗರಸಭೆ ಅಧಿಕಾರಿಗಳು ಕಚೇರಿಗೆ ತೆರಳಿ ವ್ಯಾಪಾರ ಪರವಾನಗಿ ಇಲ್ಲದೆ ಕಚೇರಿ ಆರಂಭಿಸಿದ್ದನ್ನು ಪತ್ತೆಹಚ್ಚಿದ್ದರು ಹಾಗೂ ಅದೇ ಕಾರಣಕ್ಕೆ ಕಚೇರಿ ಮುಚ್ಚಿಸಿದ್ದರು. ಆದರೆ ಇಷ್ಟರಲ್ಲಾಗಲೇ ಸುಮಾರು 300 ರಷ್ಟು ಮಂದಿ ಕತ್ತೆಗಾಗಿ ಸುಮಾರು ₹10 ಕೋಟಿಯನ್ನು ಕಂಪನಿಗೆ ಪಾವತಿಸಿದ್ದರು. ಈ ಪೈಕಿ ಸುಮಾರು 200 ಮಂದಿಗೆ ಕತ್ತೆ ಲಭಿಸಿದ್ದು, 100ಕ್ಕೂ ಅಧಿಕ ಮಂದಿಗೆ ಕತ್ತೆ ಸಿಗುವುದು ಬಾಕಿ ಇದೆ. ಕೆಲವರಿಗೆ ಹಾಲು ಮಾರಾಟ ಮಾಡಿ ₹ 50 ಸಾವಿರಕ್ಕೂ ಅಧಿಕ ಹಣ ಸಿಕ್ಕಿದೆ.

‘ಅಮ್ಮನಿಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕಿತ್ತು, ಈಗ ದುಡ್ಡಿಲ್ಲ’
‘ಕತ್ತೆ ವ್ಯವಹಾರದ ಬಗ್ಗೆ ಬಣ್ಣದ ಮಾತುಗಳಿಂದ ಮರುಳಾಗಿ ನಾನು ಆರು ಕತ್ತೆಗಳಿಗಾಗಿ ₹6 ಲಕ್ಷ ಕೊಟ್ಟಿದ್ದೇನೆ. ನನ್ನನ್ನು ಹೊಸಪೇಟೆಯ ಡೀಲರ್‌ ಎಂದು ಮಾಡಲು ಮತ್ತೆ ₹4 ಲಕ್ಷ ಕೊಟ್ಟೆ. ಇದೆಲ್ಲ ನಾನು ಸಾಲ ಮಾಡಿ ಒಟ್ಟುಗೂಡಿಸಿದೆ ದುಡ್ಡು. ನನಗೆ ಈಗ ಕಂಪನಿ ಕೈಕೊಟ್ಟುಬಿಟ್ಟಿದೆ. ನನ್ನ ಅಮ್ಮನಿಗೆ ಶಸ್ತ್ರಚಿಕಿತ್ಸೆ ಆಗಬೇಕಿದೆ. ನನ್ನಲ್ಲಿ ದುಡ್ಡಿಲ್ಲ. ನನ್ನಂತೆ ಇತರರಿಗೆ ಇಂತಹ ಅನ್ಯಾಯ ಆಗಬಾರದು ಎಂಬುದೇ ನನ್ನ ಪ್ರಾರ್ಥನೆ’ ಎಂದು ಹೊಸಪೇಟೆ ತಾಲ್ಲೂಕಿನ ವಡ್ಡರಹಳ್ಳಿಯ ವಸಂತ ಅವರು ‘ಪ್ರಜಾವಾಣಿ’ ಜತೆಗೆ ತಮ್ಮ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT