ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದ್‌ ಸಿಂಗ್‌ ಶಾಲೆ, ಆಸ್ಪತ್ರೆಗೆ ಹಣ ವ್ಯಯಿಸಲಿ: ಪೃಥ್ವಿ ರೆಡ್ಡಿ ಸಲಹೆ

Last Updated 12 ಜನವರಿ 2022, 14:17 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಜನಪ್ರತಿನಿಧಿಗಳನ್ನು ಖರೀದಿಸುವುದು ಬಿಟ್ಟು ಆ ಹಣವನ್ನು ಕ್ಷೇತ್ರದ ಶಾಲೆ, ಆಸ್ಪತ್ರೆಗೆ ವ್ಯಯಿಸಬೇಕು‘ ಎಂದು ‘ಆಮ್‌ ಆದ್ಮಿ’ ಪಕ್ಷದ (ಎಎಪಿ) ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಸಲಹೆ ಮಾಡಿದರು.

‘ಆನಂದ್‌ ಸಿಂಗ್‌ ಹಣ ಬಲ, ತೋಳ್ಬಲದ ಮೂಲಕ ನಗರಸಭೆ ಖರೀದಿ ಮಾಡುವುದಾದರೆ ಚುನಾವಣೆ ನಡೆಸುವುದು ಬೇಕಿಲ್ಲ. ಚುನಾವಣೆ ಬದಲು ಹರಾಜು ನಡೆಸಬೇಕು. ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿ 701 ಮತ ಪಡೆದರೆ, ಬಿಜೆಪಿ ಅಭ್ಯರ್ಥಿ 61 ಮತಗಳನ್ನು ಪಡೆದಿದ್ದಾರೆ. ಜನ ಬಿಜೆಪಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ವಾಮ ಮಾರ್ಗದ ಮೂಲಕ ನಮ್ಮ ಪಕ್ಷದ ಅಭ್ಯರ್ಥಿಯನ್ನು ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಅದಕ್ಕಾಗಿ ನಡೆದ ಹಣದ ವ್ಯವಹಾರ ಎಷ್ಟು ಎನ್ನುವುದನ್ನು ಇಷ್ಟರಲ್ಲೇ ಬಹಿರಂಗಪಡಿಸಲಾಗುವುದು‘ ಎಂದು ಬುಧವಾರ ಸಂಜೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘22ನೇ ವಾರ್ಡಿನಿಂದ ಎಎಪಿಯಿಂದ ಗೆದ್ದಿರುವ ಶೇಕ್ಷಾವಲಿ, ಆಟೊ ಚಾಲಕರು. ಅಂತಹವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎನ್ನುವುದು ಯಾರೂ ನಂಬುವುದಿಲ್ಲ. ಆದರೆ, ಎಎಪಿ ಅವರ ಮೇಲೆ ನಂಬಿಕೆಯಿಟ್ಟು ಕಣಕ್ಕಿಳಿಸಿ ಗೆಲ್ಲಿಸಿತ್ತು. ಆದರೆ, ಅವರು ಬಿಜೆಪಿಗೆ ಹೋಗಿ ಜನರಿಗೆ ದ್ರೋಹ ಬಗೆದಿದ್ದಾರೆ’ ಎಂದರು.

‘ಆನಂದ್‌ ಸಿಂಗ್‌ ನಾಲ್ಕು ಸಲ ಗೆದ್ದು ಶಾಸಕರಾದವರು. ಸ್ವಚ್ಛ, ಪ್ರಾಮಾಣಿಕ ರಾಜಕೀಯ ಏನೆಂಬುದು ಅವರಿಗೆ ಗೊತ್ತಿಲ್ಲದಿದ್ದರೆ ದೆಹಲಿಗೆ ಕರೆದೊಯ್ದು ತೋರಿಸುತ್ತೇವೆ. ಆ ಮೂಲಕವಾದರೂ ಅವರು ರಾಜಕೀಯ ಕಲಿತುಕೊಳ್ಳಲಿ. ನಮ್ಮ ಅಭ್ಯರ್ಥಿ ಎಎಪಿ ಪಕ್ಷದ ಚಿಹ್ನೆಯಡಿ ಗೆದ್ದು, ಬಿಜೆಪಿಗೆ ಹೋಗಿ ವಾರ್ಡಿನ ಜನರಿಗೆ ಮೋಸ ಮಾಡಿದ್ದಾರೆ. ಇದರ ವಿರುದ್ಧ ಕೋರ್ಟ್‌ಗೆ ಹೋಗಲ್ಲ. ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ’ ಎಂದು ಹೇಳಿದರು.

ಮಾಜಿಶಾಸಕ, ಎಎಪಿ ಮುಖಂಡ ಎಚ್‌.ಡಿ. ಬಸವರಾಜ ಮಾತನಾಡಿ, ‘ಹೊಸಪೇಟೆ ನಗರಸಭೆ ಚುನಾವಣೆಯಲ್ಲಿ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಆದರೆ, ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ‘ವಿಜಯನಗರ ರಿಪಬ್ಲಿಕ್‌’ ಮಾಡುವ ಕಾರ್ಯಸೂಚಿ ಹಿಂದಿನ ಗುಟ್ಟೇನು? ಜನರ ತೀರ್ಪನ್ನು ಆನಂದ್‌ ಸಿಂಗ್‌ ಗೌರವಿಸಬೇಕಿತ್ತು. ಸಿಂಗ್‌ ಜನಪರ ಕೆಲಸ ಮಾಡಿದ್ದರೆ ಚುನಾವಣೆಯಲ್ಲಿ ಅವರ ಪಕ್ಷ ಸೋಲುತ್ತಿರಲಿಲ್ಲ’ ಎಂದರು.

ಮುಖಂಡರಾದ ಜಗದೀಶ, ನಜೀರ್‌, ನಂಜಪ್ಪ ಕಾಳೇಗೌಡ, ವಿಜಯ್‌ ಶರ್ಮಾ, ಮೋಹನ್‌ ದಾಸರಿ, ಮಂಜುನಾಥ ಸ್ವಾಮಿ, ಅಕ್ರಂ ಇದ್ದರು.

ಗುಪ್ತದಳ ಸಿಬ್ಬಂದಿ ತರಾಟೆಗೆ
ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಹಿಂಬದಿಯಲ್ಲಿ ಕುಳಿತಿದ್ದ ಗುಪ್ತದಳದ ಸಿಬ್ಬಂದಿ ವೀರಣ್ಣ ಅವರನ್ನು ನೋಡಿದ ಕೂಡಲೇ ಸಿಟ್ಟಿಗಾದ ಎಎಪಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ಮಾಜಿಶಾಸಕ ಎಚ್‌.ಡಿ. ಬಸವರಾಜ, ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
‘ಹೊಸಪೇಟೆಯಲ್ಲಿ ಪ್ರಜಾಪ್ರಭುತ್ವ, ನೈತಿಕತೆ ಕೊಲೆ ನಡೆದಿದೆ. ಆ ಕೊಲೆ ನಡೆದಾಗ ಪೊಲೀಸರು ಇರಲಿಲ್ಲ. ಇಂದು ಪಕ್ಷದಿಂದ ಪ್ರತಿಭಟನೆ ನಡೆಸಿದರೆ ತಡೆಯಲು ಬರುತ್ತೀರಿ. ಮಾಧ್ಯಮಗೋಷ್ಠಿಯಲ್ಲಿ ಕುಳಿತು ನಮ್ಮ ಮಾತು ರೆಕಾರ್ಡ್‌ ಮಾಡುತ್ತೀರಿ. ಇದರ ವಿರುದ್ಧ ಪೊಲೀಸ್‌ ಮಹಾನಿರ್ದೇಶಕರಿಗೆ ದೂರು ಸಲ್ಲಿಸಲಾಗುವುದು. ಇಲ್ಲಿ ಬಂದು ಕೂರಲು ನಿಮಗ್ಯಾರು ಹೇಳಿದ್ದು?’ ಎಂದು ಸಿಟ್ಟಾದರು. ಬಳಿಕ ವೀರಣ್ಣ ಅಲ್ಲಿಂದ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT