ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ವರ್ಷ, ನವ ಭರವಸೆ: ಎರಡನೇ ವರ್ಷದ ಹೊಸ್ತಿಲಲ್ಲಿ ನೂತನ ವಿಜಯನಗರ ಜಿಲ್ಲೆ

Last Updated 1 ಜನವರಿ 2023, 11:13 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹೊಸ ಭರವಸೆಗಳೊಂದಿಗೆ ಜನ್ಮ ತಳೆದ ನೂತನ ವಿಜಯನಗರ ಜಿಲ್ಲೆಗೆ ಈಗ ಮತ್ತೊಂದು ನವ ವರ್ಷ. ಎರಡನೇ ವರ್ಷದ ಹೊಸ್ತಿಲಲ್ಲಿರುವ ಸಂಭ್ರಮವೂ ಹೌದು.

ಕೋವಿಡ್‌ ನಡುವೆ (2021ರ ಫೆ.8) ರಾಜ್ಯದ 31ನೇ ಜಿಲ್ಲೆಯಾಗಿ ಉದಯವಾದ ವಿಜಯನಗರ ಅಂಬೆಗಾಲಿಡುತ್ತಿರುವ ಕೂಸು. ಅನೇಕ ಭರವಸೆಗಳನ್ನು ಹೊತ್ತು ಹುಟ್ಟಿಕೊಂಡಿರುವ ಈ ಜಿಲ್ಲೆಗೆ ಹೊಸ ವರ್ಷದಲ್ಲಿ ಅಪಾರ ನಿರೀಕ್ಷೆಗಳಿರುವುದು ಸುಳ್ಳೇನೂ ಅಲ್ಲ.

ಅಖಂಡ ಬಳ್ಳಾರಿ ಜಿಲ್ಲೆ ಭೌಗೋಳಿಕವಾಗಿ ಬಹಳ ವಿಸ್ತಾರವಾಗಿತ್ತು. ಹೂವಿನಹಡಗಲಿ, ಹರಪನಹಳ್ಳಿ ಹಾಗೂ ಕೂಡ್ಲಿಗಿ ಅಂಚಿನ ಗ್ರಾಮಸ್ಥರಿಗೆ ಜಿಲ್ಲಾ ಕೇಂದ್ರ ಬಳ್ಳಾರಿ ದೂರದ ಮಾತಾಗಿತ್ತು. ಈಗ ಆ ಸಮಸ್ಯೆ ದೂರವಾಗಿದೆ. ಹೊಸ ಜಿಲ್ಲೆ ಉದಯವಾದ ನಂತರ ಆಡಳಿತಾತ್ಮಕವಾಗಿ ಜನ ಹತ್ತಿರವಾಗಿದ್ದಾರೆ. ಅವರು ಕ್ರಮಿಸುವ ದೂರ ಬಹಳಷ್ಟು ತಗ್ಗಿದೆ. ಆದರೆ, ಈ ಹಿಂದಿನಿಂದ ಅವರನ್ನು ಕಾಡುತ್ತಿದ್ದ ಸಮಸ್ಯೆಗಳು ದೂರವಾಗಿವೆಯೇ? ಈ ಪ್ರಶ್ನೆ ಹಾಕಿಕೊಂಡರೆ ನಿರಾಸೆಯೇ ಎದ್ದು ಕಾಣುತ್ತದೆ.

ಹೊಸಪೇಟೆಯ ಒಂದು ಭಾಗ ಹೊರತುಪಡಿಸಿದರೆ ಜಿಲ್ಲೆಯ ಬಹುತೇಕ ಭಾಗ ಮಳೆಯನ್ನೇ ಆಶ್ರಯಿಸಿದೆ. ಆದರೆ, ಕಳೆದೆರಡು ವರ್ಷಗಳಲ್ಲಿ ಈ ಸಮಸ್ಯೆಯ ಬಗ್ಗೆ ಗಂಭೀರ ಸ್ವರೂಪದ ಚರ್ಚೆಗಳಾಗಲಿ, ನೀತಿ ನಿರ್ಧಾರಗಳಾಗಿಲ್ಲ. ಹಾಗಂತ ಏನೂ ಆಗಿಲ್ಲ ಎಂದರ್ಥವಲ್ಲ. ಹೊಸಪೇಟೆಯ ಪಾಪಿನಾಯಕನಹಳ್ಳಿ ಸುತ್ತಮುತ್ತಲಿನ ಹಳ್ಳಿಗಳಿಗೆ ನೀರುಣಿಸಲು ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕೂಡ್ಲಿಗಿ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಕಾಮಗಾರಿಯೂ ಚುರುಕಾಗಿ ನಡೆಯುತ್ತಿದೆ. ಇವುಗಳೆಲ್ಲ ಒಂದು ಸೀಮಿತ ಪ್ರದೇಶಗಳಲ್ಲಷ್ಟೇ ಆಗಿದೆ. ಆದರೆ, ಇಡೀ ಜಿಲ್ಲೆಯನ್ನು ನೀರಾವರಿ ಪ್ರದೇಶವಾಗಿ ಪರಿವರ್ತಿಸುವ ಅವಕಾಶಗಳು ಜಿಲ್ಲೆಗೆ ಯಥೇಚ್ಛವಾಗಿವೆ. ಜಿಲ್ಲೆಯಲ್ಲೇ ತುಂಗಭದ್ರಾ ಜಲಾಶಯವಿದ್ದು, ನೀರು ಹರಿಸುವುದು ಕಷ್ಟದ ಕೆಲಸವೇನಲ್ಲ. ಆದರೆ, ಅದರ ಬಗ್ಗೆ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸುವ ಪ್ರಯತ್ನ ಮಾಡಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ಇನ್ನು, ಹೊಸ ಜಿಲ್ಲೆಯೆಂದರೆ ಅದರ ಅಭಿವೃದ್ಧಿ ಚಟುವಟಿಕೆಗಳು ಜಿಲ್ಲಾ ಕೇಂದ್ರ ಹೊಸಪೇಟೆಗೆ ಸೀಮಿತಗೊಳ್ಳಬಾರದು. ಜಿಲ್ಲಾ ಕಚೇರಿ ಸಂಕೀರ್ಣದ ಕಟ್ಟಡ ನವೀಕರಣ ಕಾಮಗಾರಿ ಕೊನೆಯ ಹಂತದಲ್ಲಿದೆ. ಬಹುತೇಕ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಸೇವೆಗೆ ನಿಯೋಜನೆಗೊಂಡಿದ್ದಾರೆ. ಪೂರ್ಣಪ್ರಮಾಣದಲ್ಲಿ ಇತರೆ ಜಿಲ್ಲೆಗಳಂತೆ ಅಂತಿಮ ಸ್ವರೂಪ ಪಡೆಯದಿದ್ದರೂ ಈ ಹಿಂದೆ ರಚನೆಯಾದ ಹೊಸ ಜಿಲ್ಲೆಗಳಿಗೆ ಹೋಲಿಸಿದರೆ ಶೀಘ್ರ ಗತಿಯಲ್ಲಿ ಮೇಲೆದ್ದಿದೆ ಎಂದು ಹೇಳಬಹುದು. ಪ್ರಮುಖ ರಸ್ತೆಗಳಿಗೆ ವಿಸ್ತರಣೆಯ ಭಾಗ್ಯ ಒಲಿದಿದೆ. ಎಸ್ಪಿ ಸೇರಿದಂತೆ ಇತರೆ ಹೊಸ ಕಟ್ಟಡಗಳ ನಿರ್ಮಾಣಕ್ಕೂ ಚಾಲನೆ ದೊರೆತಿದೆ. ಆದರೆ, ಇದೇ ರೀತಿಯ ಅಭಿವೃದ್ಧಿಯ ನೋಟ ಜಿಲ್ಲೆಯ ಇತರೆಡೆ ನೋಡಿದರೆ ನಿರಾಸೆ ಮೂಡುತ್ತದೆ.

ಈಗಲೂ ಜಿಲ್ಲಾ ಕೇಂದ್ರವೊಂದರಲ್ಲೇ 40 ಸಾವಿರಕ್ಕೂ ಅಧಿಕ ಜನ ನಿವೇಶನ ರಹಿತರಿದ್ದಾರೆ. ಸ್ಲಂಗಳು ಮೇಲ್ದರ್ಜೆಗೇರಿಲ್ಲ. ಪದವೀಧರರಿಗೆ ನೌಕರಿ ಇಲ್ಲ. ಪ್ರವಾಸಿ ಕೇಂದ್ರವಾದರೂ ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳಿಲ್ಲ. ಈಗಲೂ ಗುಳೇ ನಿಂತಿಲ್ಲ. ಪ್ರವಾಸೋದ್ಯಮಕ್ಕೆ ಹೇರಳ ಅವಕಾಶಗಳಿದ್ದರೂ ಅದಕ್ಕೆ ಪೂರಕವಾದ ಸೂಕ್ತ ಯೋಜನೆಗಳಿಲ್ಲ. ಅಭಿವೃದ್ಧಿಯೆಂದರೆ ಕಟ್ಟಡ, ಕಾಂಕ್ರೀಟ್‌ ರಸ್ತೆಗಳಲ್ಲ, ಉತ್ತಮ ಶಿಕ್ಷಣ, ವೈದ್ಯಕೀಯ ಸೌಲಭ್ಯ ಸೇರಿದಂತೆ ಸಮಗ್ರ ಅಭಿವೃದ್ಧಿಯೊಂದಿಗೆ ಜನರ ಬದುಕು ಹಸನಾಗುವುದು. ಇದು ಜನಪ್ರತಿನಿಧಿಗಳಾದವರಿಗೆ ಮನದಟ್ಟಾಗುವವರೆಗೆ ಸಮಗ್ರ ಅಭಿವೃದ್ಧಿ ದೂರದ ಮಾತು. ಆದರೆ, ಹೊಸ ವರ್ಷ ಅವರಿಗೆ ಅದನ್ನೆಲ್ಲ ಮಾಡುವ ಸಂಕಲ್ಪ ಶಕ್ತಿ ಕೊಟ್ಟು, ಪ್ರತಿಯೊಬ್ಬರೂ ಅಭಿವೃದ್ಧಿಯ ಪಾಲುದಾರರಾಗುವಂತೆ ಮಾಡುವ ದೂರದೃಷ್ಟಿ, ಆಲೋಚನಾ ಶಕ್ತಿ ಅವರಿಗೆ ಕೊಡಲಿ ಎನ್ನುವುದು ಸಾರ್ವಜನಿಕರ ಒತ್ತಾಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT