ಬುಧವಾರ, ಸೆಪ್ಟೆಂಬರ್ 29, 2021
20 °C

ಕಾಂಗ್ರೆಸ್‌ ಒಡಕಿಗೆ ಯತ್ನ: ಸಿರಾಜ್‌ ಶೇಖ್ ವಿರುದ್ಧ ನಿಯಾಜಿ ಬೆಂಬಲಿಗರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ನಗರದಲ್ಲಿ ಕಾಂಗ್ರೆಸ್‌ ಕಚೇರಿ ಇದ್ದರೂ ಕೆಪಿಸಿಸಿ ವಕ್ತಾರ ಸಿರಾಜ್‌ ಶೇಖ್‌ ಅವರು ಇನ್ನೊಂದು ಕಚೇರಿ ಆರಂಭಿಸುತ್ತಿದ್ದಾರೆ ಎಂದು ಆರೋಪಿಸಿರುವ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ ಅವರ ಬೆಂಬಲಿಗರು, ಪಕ್ಷದಲ್ಲಿ ಒಡಕು ಮೂಡಿಸಲು ಅವರು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಮುಖಂಡ, ನಿಯಾಜಿ ಬೆಂಬಲಿಗರಾದ ಹಾನಗಲ್‌ ಕಣಿಮೆಹಳ್ಳಿ ವೆಂಕೋಬಣ್ಣ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಿರಾಜ್‌ ಶೇಖ್‌ ಅವರು ಕೂಡ್ಲಿಗಿ ತಾಲ್ಲೂಕಿನವರು. ಆ ಊರಲ್ಲಿ ಏನು ಬೇಕಾದರೂ ಮಾಡಲಿ. ಅವರಿಗೆ ಹೊಸಪೇಟೆಯಲ್ಲೇನು ಕೆಲಸ? ಪಕ್ಷದ ಕಾರ್ಯಕ್ರಮಕ್ಕೆ ಬಂದು ಹೋಗಲಿ. ಈಗಾಗಲೇ ನಗರದಲ್ಲಿ ಕಾಂಗ್ರೆಸ್‌ ಪಕ್ಷದ ಕಚೇರಿ ಇದೆ. ಹೀಗಿರುವಾಗ ಮತ್ತೊಂದು ಕಚೇರಿ ಆರಂಭಿಸುವ ಅಗತ್ಯವಾದರೂ ಏನಿದೆ? ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ಇಮಾಮ್‌ ನಿಯಾಜಿ ಅವರು ಪಕ್ಷಕ್ಕೆ ನಿಷ್ಠರಾಗಿ ಹಲವು ವರ್ಷಗಳಿಂದ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ವಿಜಯನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅವರು ಹೆಸರು ಮುಂಚೂಣಿಯಲ್ಲಿದೆ. ಇದನ್ನು ಸಹಿಸಿಕೊಳ್ಳದೆ ಸಿರಾಜ್‌ ಶೇಖ್‌ ಕುತಂತ್ರ ಮಾಡುತ್ತಿದ್ದಾರೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷರಿಗೆ ದೂರು ಕೊಡಲಾಗುವುದು. ನಿಯಾಜಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಪಕ್ಷ ಸಂಘಟನೆಗೆ ಅನುಕೂಲವಾಗುತ್ತದೆ ಎಂಬ ವಿಷಯವನ್ನೂ ಮನವರಿಕೆ ಮಾಡಿಕೊಡಲಾಗುವುದು’ ಎಂದು ಹೇಳಿದರು.

ಪಕ್ಷದ ಇನ್ನೊಬ್ಬ ಮುಖಂಡ ಬಾಲಾ ಸಾಬ್‌ ಮಾತನಾಡಿ, ‘ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಸ್ಥಾನ ಹೊಸಪೇಟೆಯವರಿಗೆ ಕೊಡಬೇಕು. ಈಗಾಗಲೇ ಸ್ಥಳೀಯರಿಗೆ ಸಾಕಷ್ಟು ಅನ್ಯಾಯವಾಗಿದೆ. ಈಗ ಅದನ್ನು ಸರಿಪಡಿಸುವ ಸಮಯ ಬಂದೊದಗಿದೆ. ಎಲ್ಲಾ ಸಮಾಜದವರನ್ನು ಒಟ್ಟಿಗೆ ಕರೆದೊಯ್ಯುವ ಗುಣ ನಿಯಾಜಿ ಅವರಲ್ಲಿದೆ. ಅವರನ್ನೇ ಅಧ್ಯಕ್ಷರಾಗಿ ಮಾಡಿದರೆ ಚುರುಕಿನಿಂದ ಪಕ್ಷ ಸಂಘಟನೆ ಆಗುತ್ತದೆ’ ಎಂದು ತಿಳಿಸಿದರು.

ಮುಖಂಡರಾದ ವಿನೋದ ಕುಮಾರ್‌, ಎಚ್‌.ಕೆ. ಮಂಜುನಾಥ, ಸೈಯದ್‌ ಬುಡೇನ್‌, ರಾಜು ಗುಜ್ಜಲ್‌, ಕೆ. ಗೌಸ್‌, ಹೊನ್ನೂರು ಸಾಬ್‌, ಮಡ್ಡಿ ಹನುಮಂತಪ್ಪ, ಕೃಷ್ಣ, ಕೆ. ಪ್ರಶಾಂತ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು