ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರು ನಿಷ್ಠೆಯಿಂದ ಕೆಲಸ ಮಾಡಬೇಕು: ನಿವೃತ್ತ ಡಿವೈಎಸ್ಪಿ ಕೆ. ಶಿವಾರೆಡ್ಡಿ

ವಿಜಯನಗರ ಜಿಲ್ಲಾ ಪೊಲೀಸ್ ಧ್ವಜ ದಿನಾಚರಣೆ 
Last Updated 2 ಏಪ್ರಿಲ್ 2023, 5:49 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲಾ ಪೊಲೀಸ್ ಧ್ವಜ ದಿನ ಹಾಗೂ ಪೊಲೀಸ್ ಕಲ್ಯಾಣ ದಿನ ನಗರದ ಡಾ. ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಚರಿಸಲಾಯಿತು. ಬಳಿಕ ಪೊಲೀಸರಿಂದ ಪಥ ಸಂಚಲನ ನಡೆಯಿತು. ಕಂಪ್ಲಿ ಗೃಹರಕ್ಷಕದ ದಳದ ಬ್ಯಾಂಡ್ ತಂಡದ ವಾದನ ಗಮನ ಸೆಳೆಯಿತು.

ಬಳ್ಳಾರಿ ವಲಯ ಕಚೇರಿಯ ನಿವೃತ್ತ ಡಿವೈಎಸ್ಪಿ ಕೆ. ಶಿವಾರೆಡ್ಡಿ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ತನಿಖೆ ಮತ್ತು ಪತ್ತೆಗಾಗಿ ಸೌಲಭ್ಯಗಳು ಹೆಚ್ಚುತ್ತಲೇ ಇದೆ. ಸೌಲಭ್ಯಗಳಿಗೆ ಅನುಗುಣವಾಗಿ ನಿಷ್ಠೆಯಿಂದ ಪೊಲೀಸರು ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಪೊಲೀಸ್ ಕಲ್ಯಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಹಂತ ಹಂತವಾಗಿ ಪೊಲೀಸ್ ಸಿಬ್ಬಂದಿಗೂ ಪಡಿತರ, ವಾರದ ರಜೆ, ಹಬ್ಬಕ್ಕೆ ಮುಂಗಡ ಸಂಬಳ ಸೇರಿದಂತೆ ಮುಂಬಡ್ತಿ ಹೆಚ್ಚಾದವು. ಅದೆ ರೀತಿ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಆಧುನಿಕ ಸೌಲಭ್ಯಗಳು ಹೆಚ್ಚಾದವು. ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳುವ ನಾವು ನಿಷ್ಠೆಯಿಂದ ಕೆಲಸ ನಿರ್ವಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಇಲಾಖೆ ಕರ್ತವ್ಯದ ವೇಳೆ ನಮ್ಮ ತಾಳ್ಮೆಯನ್ನು ಜನ ಪರೀಕ್ಷಿಸುತ್ತಾರೆ. ಪ್ರಾಮಾಣಿಕತೆ ಜೊತೆಗೆ ತಾಳ್ಮೆ ಸಹ ಇದ್ದಾಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗುತ್ತೇವೆ‌. ಕರ್ತವ್ಯವನ್ನು ಪ್ರೀತಿಸಿದಾಗ ನಾವು ಉನ್ನತ ಸ್ಥಾನಕ್ಕೆ ಹೋಗುತ್ತೇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ‌. ಎಲ್. ಅವರು ಮಾತನಾಡಿ, 1965 ಏ.2ರಂದು ರಾಜ್ಯ ಪೊಲೀಸ್ ಕಾಯ್ದೆ ಜಾರಿಯಾದ ಅಂಗವಾಗಿ ಅದೇ ದಿನ ಪೊಲೀಸ್ ಇಲಾಖೆಗೆ ಧ್ವಜವನ್ನು ನೀಡಲಾಗಿದೆ. ಹಾಗಾಗಿ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಕಲ್ಯಾಣ ದಿನ ಆಚರಿಸಲಾಗುತ್ತದೆ. ಈ ದಿನ ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ನಿವೃತ್ತ ನೌಕರರಿಗೆ ಸೌಲಭ್ಯ ಒದಗಿಸಲಾಗುತ್ತದೆ ಎಂದರು.

ಕಳೆದ ವರ್ಷ 2022ನೇ ಸಾಲಿನಲ್ಲಿ ಪೊಲೀಸ್ ಧ್ವಜ ಮಾರಾಟದಿಂದ ₹8.11 ಲಕ್ಷ ಸಂಗ್ರಹವಾಗಿದೆ. ಅದರಲ್ಲಿ ಶೇ.50 ಭಾಗ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ, ಉಳಿದ ಭಾಗ ಕೇಂದ್ರ ಕಲ್ಯಾಣ ನಿಧಿಗೆ ತಲುಪಿಸಲಾಗಿದೆ ಎಂದು ವಾರ್ಷಿಕ ವರದಿ ನೀಡಿದರು.

ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ವೈದ್ಯಕೀಯ ವೆಚ್ಚ ಪಾವತಿಗೆ ಮಂಜೂರಾತಿ ನೀಡಲಾಗಿದೆ. ನಿವೃತ್ತ ಅಧಿಕಾರಿಗಳ ಕ್ಷೇಮ ನಿಧಿಯ ಖಾತೆಗೆ ಹಣ ಜಮೆಯಾಗಿದೆ. ನಿವೃತ್ತಿ ಹೊಂದಿದ ಅಧಿಕಾರಿ ಮತ್ತು ಸಿಬ್ಬಂದಿ ಆರೋಗ್ಯ ಯೋಜನೆಯಡಿ ಸದಸ್ಯತ್ವ ಹೊಂದಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಳೆದ ಸಾಲಿನಲ್ಲಿ ನಿವೃತ್ತಿ ಹೊಂದಿದ 18 ಜನ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT