ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಬಂಧಕಾಜ್ಞೆ ಆರ್ಡರ್‌ ಉಲ್ಲಂಘಿಸಿ ಕಟ್ಟಡ ನಿರ್ಮಾಣ: ಜ್ಯೋತಿ ಪ್ರಕಾಶ ಆರೋಪ

ಸಂದೀಪ್‌ ಸಿಂಗ್‌ ಒತ್ತಡಕ್ಕೆ ದೂರು ಸ್ವೀಕರಿಸದ ಪೊಲೀಸರು;
Last Updated 30 ನವೆಂಬರ್ 2022, 13:11 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಸ್ಥಳೀಯ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯಪ್ರತಿಬಂಧಕಾಜ್ಞೆ (ಇಂಜಂಕ್ಷನ್)ಆರ್ಡರ್‌ ಕೊಟ್ಟರೂ ಅದನ್ನು ಉಲ್ಲಂಘಿಸಿ ನಗರದ ವಡಕರಾಯ ದೇವಸ್ಥಾನ ಸಮೀಪದ ಸರ್ವೇ ನಂಬರ್‌ 272ರಲ್ಲಿ ನನಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗುತ್ತಿದೆ’ ಎಂದು ದೂರುದಾರ ಮಹಿಳೆ ಜ್ಯೋತಿ ಪ್ರಕಾಶ ಆರೋಪಿಸಿದ್ದಾರೆ.

ನನಗೆ ಸೇರಿದ 70/24 ಅಡಿ ಜಾಗದಲ್ಲಿ ನನ್ನ ತಾಯಿ ಹೆಸರಿನಲ್ಲಿದ್ದ ಆಸ್ತಿ ಅವರ ನಿಧನ ನಂತರ ನನಗೆ ಬಂದಿದೆ. ಇದರಲ್ಲಿ ನಾಲ್ಕು ಶೀಟಿನ ಹಾಗೂ ಒಂದು ಆರ್‌.ಸಿ.ಸಿ. ಮನೆ ಇದೆ. 15/22 ಖಾಲಿ ಜಾಗದಲ್ಲಿ ಬೇಸ್‌ಮೆಂಟ್‌ ವರೆಗೆ ನಿರ್ಮಿಸಿದ್ದೆ. ಅದರ ಮೇಲೆ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪಾವನಿ ಪವನ್‌ಕುಮಾರ್‌ ಎಂಬುವರು ಕಟ್ಟಡ ಕಟ್ಟುತ್ತಿದ್ದಾರೆ. ಸಚಿವರ ಅಳಿಯ ಸಂದೀಪ್‌ ಸಿಂಗ್‌, ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ಕೊಟ್ಟರೆ ಸ್ವೀಕರಿಸುತ್ತಿಲ್ಲ. ನನ್ನ ಮೇಲೆ ದೌರ್ಜನ್ಯ ನಡೆಸಲು ಯತ್ನಿಸುತ್ತಿದ್ದಾರೆ. ಹೆದರಿಸುತ್ತಿದ್ದಾರೆ. ನ. 23ರಂದು ನ್ಯಾಯಾಲಯ ಇಂಜೆಕ್ಷನ್‌ ಆರ್ಡರ್‌ ಕೊಟ್ಟರೂ ಕಟ್ಟಡ ನಿರ್ಮಾಣ ಅಡೆತಡೆಯಿಲ್ಲದೇ ನಡೆಯುತ್ತಿದೆ ಎಂದು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನನ್ನ ಬಳಿ ನನ್ನ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳಿವೆ. ಒಂದುವೇಳೆ ಅವರ ಬಳಿ ದಾಖಲೆಗಳಿದ್ದರೆ ತೋರಿಸಲಿ. ಪೊಲೀಸರು ನನ್ನ ದೂರು ಸ್ವೀಕರಿಸದ ಕಾರಣ ಅಂಚೆ ಮೂಲಕ ದೂರು ಕಳುಹಿಸಿರುವೆ. ಒಂದೂವರೆ ತಿಂಗಳಾದರೂ ಪೊಲೀಸರಿಂದ ನ್ಯಾಯ ಸಿಕ್ಕಿಲ್ಲ. ಅವರು ಸಂದೀಪ್‌ ಸಿಂಗ್‌ ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ. ಪಾವನಿ ಪವನ್‌ಕುಮಾರ್‌ ಪರ ನಿಂತಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ದೂರು ಕೊಡುವೆ ಎಂದರು.

ಮಹಿಳಾ ಪೊಲೀಸರು ಬಂದು ನನ್ನನ್ನು ಕರೆದೊಯ್ದು ವಿಚಾರಿಸಬೇಕು. ಆದರೆ, ಪುರುಷ ಪೊಲೀಸರು ಬಂದು ವಿಚಾರಿಸುತ್ತಾರೆ. ನೀವು ಎಸ್ಸಿನಾ, ಎಸ್ಟಿನಾ ಎಂದು ಸಂದೀಪ್ ಸಿಂಗ್ ಕರೆದು ಕೇಳುತ್ತಾರೆ. ನನ್ನ ಆಸ್ತಿ ನನಗೆ ಉಳಿಸಿಕೊಡಬೇಕು. ನ್ಯಾಯ ಸಿಗುವವರೆಗೆ ಕಾನೂನು ಹೋರಾಟ ನಡೆಸುತ್ತೇನೆ ಎಂದು ಹೇಳಿದರು.

ನೇತ್ರಾ ಪಾಟೀಲ, ಮಂಜುಳಾ, ನಾಗರತ್ನ, ಮೀನಾಕ್ಷಿ, ಉಮಾ ಇದ್ದರು.

‘ಡಿಸಿ, ಎಸ್ಪಿ ಕಚೇರಿ ಯಾಕಿರಬೇಕು?’

‘ಹೊಸಪೇಟೆಯಲ್ಲಿ ಎಲ್ಲವೂ ಸಚಿವ ಆನಂದ್‌ ಸಿಂಗ್‌ ಅವರ ಅಳಿಯ ಸಂದೀಪ್ ಸಿಂಗ್‌ ರಾಜಿ ಪಂಚಾಯಿತಿ ಮಾಡುವುದಾದರೆ ಡಿಸಿ, ಎಸ್ಪಿ ಕಚೇರಿ, ಪೊಲೀಸ್‌ ಸ್ಟೇಶನ್‌ ಯಾಕಿರಬೇಕು? ಸ್ಟೇಶನ್ ಮಟ್ಟದಲ್ಲಿ ನ್ಯಾಯವೇಕೆ ಸಿಗುತ್ತಿಲ್ಲ. ಎಲ್ಲದಕ್ಕೂ ಎಸ್ಪಿ ಕಚೇರಿಗೆ ಹೋಗಿ ದೂರು ಕೊಡಬೇಕಾ?’ ಎಂದು ಸಾಮಾಜಿಕ ಕಾರ್ಯಕರ್ತ ಕೆ.ಬಿ. ಹಿರೇಮಠ ಪ್ರಶ್ನಿಸಿದರು.

ಮಹಿಳಾ ಕಾಂಗ್ರೆಸ್‌ ತಾಲ್ಲೂಕು ಅಧ್ಯಕ್ಷೆ ಯೋಗಲಕ್ಷ್ಮಿ ಮಾತನಾಡಿ, ಪೊಲೀಸರು ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ. ಸಂದೀಪ್ ಸಿಂಗ್ ಕಾನೂನಿಗಿಂತ ದೊಡ್ಡವರಿಗಿಲ್ಲ‌. ಅವರಲ್ಲಿ ಮಾನವೀಯತೆ ಇದ್ದರೆ ಇಬ್ಬರೂ ಮಹಿಳೆಯರನ್ನು ಸೇರಿಸಿ ಸರಿ ಇದ್ದವರಿಗೆ ನ್ಯಾಯ ಕೊಡಿಸಬೇಕು. ನ್ಯಾಯ ಸಿಗುವವರೆಗೆ ಕಾಂಗ್ರೆಸ್ ಮಹಿಳಾ ಘಟಕ ಜ್ಯೋತಿ ಪ್ರಕಾಶ ಅವರ ಬೆನ್ನಿಗೆ ನಿಲ್ಲಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT