ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಸಾರಾಂಗ: ಅನುದಾನ ಕೊರತೆಯಿಂದ ಅರ್ಧಕ್ಕೆ ನಿಂತ ಕಟ್ಟಡ ಕಾಮಗಾರಿ

Published 9 ಡಿಸೆಂಬರ್ 2023, 5:51 IST
Last Updated 9 ಡಿಸೆಂಬರ್ 2023, 5:51 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕನ್ನಡ ನಾಡು ನುಡಿ, ಭಾಷೆ, ಸಂಸ್ಕೃತಿ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳ ಸಂಶೋಧನೆ ಹಾಗೂ ಪ್ರಸರಣದಲ್ಲಿ ನಿರತವಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಆತ್ಮವೇ ಪ್ರಸಾರಾಂಗ. ಆದರೆ ಅದಕ್ಕೊಂದು ಶಾಶ್ವತ ನೆಲೆ ಒದಗಿಸುವುದು ಇನ್ನೂ ಸಾಧ್ಯವಾಗಿಲ್ಲ.

ಪುಸ್ತಕ ಪ್ರಕಟಣೆ ದೊಡ್ಡ ಯಜ್ಞ ಇದ್ದಂತೆ. ಬೃಹತ್‌ ಗೋದಾಮು ಬೇಕು, ಪುಸ್ತಕ ಪ್ರದರ್ಶನಕ್ಕೆ ಸ್ಥಳ ಬೇಕು, ಕಚೇರಿ ಕೊಠಡಿ, ಸಭಾಂಗಣ, ನಿರ್ದೇಶಕರಿಗೆ ಕೊಠಡಿ, ಉಪನಿರ್ದೇಶಕರಿಗೆ ಕೊಠಡಿ.. ಸಾಕಷ್ಟು ಜಾಗ ಅಗತ್ಯವಿರುವ ಕಾರ್ಯ ಇದು. ಇದೇ ಉದ್ದೇಶದಿಂದ ₹3 ಕೋಟಿ ವೆಚ್ಚದಲ್ಲಿ ನೂತನ ಪ್ರಸಾರಾಂಗ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡರೂ, ಅನುದಾನದ ಕೊರತೆಯಿಂದಾಗಿ ಅದು ಪೂರ್ಣಗೊಳ್ಳುವುದು ಸಾಧ್ಯವಾಗಿಲ್ಲ.‌‌‌

‘ವಿದ್ಯಾರಣ್ಯ’ ಕ್ಯಾಂಪಸ್‌ನಲ್ಲಿನ ಪ್ರಸಾರಾಂಗ ಕಟ್ಟಡದ ಕಾಮಗಾರಿ ಶೇ 50ರಷ್ಟು ಪೂರ್ಣಗೊಂಡಿದೆ. 1,260 ಚದರ ಮೀಟರ್‌ ವಿಸ್ತೀರ್ಣದ ಈ ಕಟ್ಟಡದ ಕಾಮಗಾರಿಗಾಗಿ ಶೇ 40ರಷ್ಟು ದುಡ್ಡು ಪಾವತಿಯಾಗಿದೆ.

ಪ್ರಸಾರಾಂಗದಿಂದ ಇದುವರೆಗೆ 1,600ಕ್ಕೂ ಅಧಿಕ ಗ್ರಂಥಗಳನ್ನು ಪ್ರಕಟಿಸಲಾಗಿದೆ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವಿಶ್ವಕೋಶಗಳನ್ನು ಹೊರತರಲಾಗಿದೆ. ಕರ್ನಾಟಕ ಚರಿತ್ರೆಯ ಹಲವು ಸಂಪುಟಗಳು ಪ್ರಕಟಗೊಂಡಿವೆ. ರಾಜ್ಯದಲ್ಲಿರುವ ಸಂಪದ್ಭರಿತವಾದ ಶಾಸನಗಳನ್ನು ಸಂಗ್ರಹಿಸಿ, ಶಾಸನ ಸಂಪುಟಗಳನ್ನು ಹೊರತರಲಾಗಿದೆ. 20 ಸಂಪುಟಗಳಲ್ಲಿ ಜೈನ ಸಾಹಿತ್ಯವನ್ನು ಸಂಪಾದಿಸಿ ಪ್ರಕಟಿಸಲಾಗಿದೆ. ವೈದ್ಯ ವಿಶ್ವಕೋಶ ಭಾರತೀಯ ಭಾಷೆಗಳಲ್ಲಿಯೇ ವರ್ಣಚಿತ್ರಗಳೊಂದಿಗೆ ಸಮಗ್ರ ಮಾಹಿತಿ ಒಳಗೊಂಡ ಅಪರೂಪದ ಮೊದಲ ವೈದ್ಯಕೀಯ ಕೃತಿ ಎಂಬ ಹೆಗ್ಗಳಿಕೆ ಗಳಿಸಿಕೊಂಡಿದೆ. ಇಂತಹ ಹೆಗ್ಗಳಿಕೆಯ ಸಂಸ್ಥೆಗೆ ಮಾತ್ರ 32 ವರ್ಷಗಳ ಬಳಿಕವೂ ಸುಸಜ್ಜಿತ ಕಟ್ಟಡ ನಿರ್ಮಿಸುವುದು ಸಾಧ್ಯವಾಗಿಲ್ಲ.

‘ಈಗ ಇಕ್ಕಟ್ಟಿನ ಸ್ಥಳದಲ್ಲಿ ಪ್ರಸಾರಾಂಗ ಕಾರ್ಯನಿರ್ವಹಿಸುತ್ತಿದೆ. ಜಾಗದ ಕೊರತೆಯಾಗಿದ್ದರೂ ಗುಣಮಟ್ಟಕ್ಕೆ ಕೊರತೆ ಇಲ್ಲದಂತೆ ಇದುವರೆಗೂ ಪುಸ್ತಕ ಪ್ರಕಟಣೆಯನ್ನು ಮಾಡುತ್ತ ಬಂದಿದೆ. ಹೊಸ ಕಟ್ಟಡದ ಕಾಮಗಾರಿ ಪೂರ್ಣಗೊಳಿಸುವ ಅಗತ್ಯವನ್ನು ಸರ್ಕಾರಕ್ಕೆ ಮನವರಿಕೆ ಮಾಡಲಾಗಿದೆ. ಶೀಘ್ರ ಅನುದಾನ ಬಿಡುಗಡೆ ಆಗುವ ವಿಶ್ವಾಸ ಇವೆ’ ಎಂದು ಕುಲಪತಿ ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಕಟಣೆಗೆ ಹಲವು ದಾರಿಗಳ ಹುಡುಕಾಟ

ಪ್ರಸಾರಾಂಗಕ್ಕೆ ಭರ್ಜರಿ ಕೆಲಸ ಇದ್ದರಷ್ಟೇ ಇಷ್ಟು ದೊಡ್ಡ ಕಟ್ಟಡ ನಿರ್ಮಿಸುವುದಕ್ಕೂ ಅರ್ಥವಿದೆ. ಹೀಗಾಗಿ ಹಲವು ಬಗೆಯಲ್ಲಿ ಪುಸ್ತಕಗಳ ಪ್ರಕಟಣೆಗೆ ದಾರಿಗಳನ್ನು ಹುಡುಕುವ ಪ್ರಯತ್ನ ಸಾಗಿದೆ.

‘ಹಲವು ಜಿಲ್ಲೆಗಳ ಶಾಸನಗಳ ಕೋಶವನ್ನು ಈ ಮೊದಲು ಪ್ರಕಟಿಸಲಾಗಿತ್ತು. ಅವುಗಳ ಪ್ರತಿಗಳು ಖಾಲಿಯಾಗಿವೆ. ಮರುಮುದ್ರಣಕ್ಕೆ ಆಯಾ ಜಿಲ್ಲಾಡಳಿತಗಳು ಸುಮಾರು ತಲಾ ₹10 ಲಕ್ಷದಷ್ಟು ಅನುದಾನ ನೀಡಬೇಕು ಎಂಬ ನಿಟ್ಟಿನಲ್ಲಿ ಪ್ರಸ್ತಾವ ಸಲ್ಲಿಸಲಾಗಿದೆ. ಸದ್ಯ ಪ್ರಸಾರಾಂಗದಲ್ಲಿ ವಿವಿಧ ಪ್ರಕಟಣೆಗಳ 350 ವಿಷಯಗಳ ಪುಸ್ತಕಗಳು ಮಾರಾಟಕ್ಕೆ ಲಭ್ಯ ಇವೆ. ಕೆಕೆಆರ್‌ಡಿಬಿ ಅಡಿಯಲ್ಲಿ 240 ಕಾಲೇಜುಗಳು ಬರುತ್ತವೆ. ಅಲ್ಲಿಗೆ ಪುಸ್ತಕಗಳನ್ನು ಪೂರೈಸಲು ಪ್ರಸಾರಾಂಗದ ಎಲ್ಲ ಪ್ರಕಟಣೆಗಳ ತಲಾ 200 ಪ್ರತಿಗಳನ್ನು ಕೊಂಡುಕೊಳ್ಳಲು ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಸಮ್ಮತಿ ದೊರೆತರೆ ₹60 ಲಕ್ಷದಷ್ಟು ವರಮಾನ ಸಿಗಬಹುದು’ ಎಂದು ಕುಲಪತಿ ಪರಮಶಿವಮೂರ್ತಿ ಮಾಹಿತಿ ನೀಡಿದರು.

‘ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ಸಾವಿರಕ್ಕೂ ಅಧಿಕ ಪಿಎಚ್‌.ಡಿ ಪ್ರಬಂಧಗಳಿದ್ದು, ಅವುಗಳಲ್ಲಿ ಆಯ್ದ 300 ಪ್ರಬಂಧಗಳನ್ನು ಪ್ರಕಟಿಸಲು ಪ್ರಸಾರಾಂಗ ಸಿದ್ಧವಿದೆ, ಇದಕ್ಕೆ ತಗಲುವ ವೆಚ್ಚವನ್ನು (ಸುಮಾರು ₹3 ಕೋಟಿ) ಸಮಾಜ ಕಲ್ಯಾಣ ಇಲಾಖೆಯಿಂದ ಒದಗಿಸುವವಂತೆ ಸಚಿವರಿಗೆ ಪತ್ರ ಬರೆಯಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT