ಹೊಸಪೇಟೆ (ವಿಜಯನಗರ): ರಾಜ್ಯ ಸರ್ಕಾರ 1.86 ಲಕ್ಷ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕು, ಹಳೆಯ ಪಿಂಚಣಿ ಪದ್ಧತಿಯನ್ನು ಮತ್ತೆ ಜಾರಿಗೆ ತರಬೇಕು ಎಂಬ ಪ್ರಮುಖ ಬೇಡಿಕೆ ಸಹಿತ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಇಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಪ್ರತಿಭಟನೆ ನಡೆಸಿತು.
ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಕರೆಯ ಮೇರೆಗೆ ‘ರಾಷ್ಟ್ರೀಯ ಪ್ರತಿಭಟನಾ ದಿನಾಚರಣೆ’ಯ ಭಾಗವಾಗಿ ಈ ಪ್ರತಿಭಟನೆ ನಡೆಸಲಾಗಿದೆ ಎಂದು ಒಕ್ಕೂಟದ ರಾಜ್ಯ ಉಪಾಧ್ಯಕ್ಷ ರಂಗನಾಥ ಹವಾಲ್ದಾರ್ ಹೇಳಿದರು.
ಮುಖಂಡರಾದ ಬಿ.ತಾಯಪ್ಪನಾಯಕ, ಎಂ.ಜಂಬಯ್ಯನಾಯಕ ಮಾತನಾಡಿದರು. ಉಷಾರಾಣಿ, ಸುನಿತಾ ಅಣ್ವೇಕರ್, ಶ್ರೀಧರ್, ನಾಗೇಶ್, ಪರಮೇಶ್ವರ, ಅಂದಾನ ಗೌಡರು, ಕೆ.ಲಿಂಗಪ್ಪ, ಕೆ.ಚಂದ್ರಪ್ಪ ಇತರರು ಇದ್ದರು.
ಪ್ರತಿಭಟನೆಯನ್ನು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಪಿಂಚಣಿದಾರರ ಒಕ್ಕೂಟ, ಸರ್ಕಾರಿ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘ, ರಾಜ್ಯ ಸರ್ಕಾರಿ ಇಲಾಖೆಗಳ ಹೊರಗುತ್ತಿಗೆ ನೌಕರರ ಒಕ್ಕೂಟ, ಸರ್ಕಾರಿ ಆಸ್ಪತ್ರೆ ಹೊರಗುತ್ತಿಗೆ ನೌಕರರ ಸಂಘ, ಗ್ರಾಮ ಆಡಳಿತ ಅಧಿಕಾರಿಗಳ ಸಂಘ, ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ,ಕಂದಾಯ ಇಲಾಖೆ ನೌಕರರ ಸಂಘಗಳು ಬೆಂಬಲಿಸಿದವು.
ಮುಖ್ಯಮಂತ್ರಿಯವರಿಗೆ ಬರೆದ ಮನವಿಪತ್ರವನ್ನ ತಹಶೀಲ್ದಾರ್ ಅವರ ಮೂಲಕ ಕಳಿಸಲಾಯಿತು.