ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆಯಲ್ಲಿ ರೈಲು ಹತ್ತಿ ಪ್ರಚೋದನಕಾರಿ ಹೇಳಿಕೆ: ಪ್ರತಿಭಟನೆ

ಅಯೋಧ್ಯೆಯಿಂದ ಮೈಸೂರಿನತ್ತ ತೆರಳುತ್ತಿದ್ದ ರೈಲು
Published 22 ಫೆಬ್ರುವರಿ 2024, 18:30 IST
Last Updated 22 ಫೆಬ್ರುವರಿ 2024, 18:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಅಯೋಧ್ಯೆಯಿಂದ ಮೈಸೂರಿನತ್ತ ತೆರಳುತ್ತಿದ್ದ ರೈಲಿನ ಬೋಗಿಯೊಂದಕ್ಕೆ ಹತ್ತಿದ ಅಪರಿಚಿತರು ಕೆಲವೊಂದು ಪ್ರಚೋದನಕಾರಿ ಮಾತು ಆಡಿದ್ದರಿಂದ ಸಿಟ್ಟಿಗೆದ್ದ ರೈಲಿನೊಳಗಿದ್ದ ರಾಮಭಕ್ತರು ಹಾಗೂ ನಿಲ್ದಾಣದಲ್ಲಿದ್ದ ಮಂದಿ ಗದ್ದಲ ಎಬ್ಬಿಸಿ, ರೈಲನ್ನು ಒಂದೂವರೆ ಗಂಟೆ ಕಾಲ ತಡೆದ ಘಟನೆ ಗುರುವಾರ ರಾತ್ರಿ ಇಲ್ಲಿನ ರೈಲು ನಿಲ್ದಾಣದಲ್ಲಿ ನಡೆದಿದೆ.

ಪ್ರಚೋದನಕಾರಿಯಾಗಿ ಮಾತನಾಡಿದ ವ್ಯಕ್ತಿಗಳನ್ನು ರೈಲಿನೊಳಗಿದ್ದವರು ಹಿಡಿದು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಅವರನ್ನು ಬಂಧಿಸದೆ ಬಿಟ್ಟು ಕಳುಹಿಸಲಾಗಿದೆ ಎಂದು ಆರೋಪ ಕೇಳಿಬಂದ ಕಾರಣ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತಾಯಿತು.

ವಿಷಯ ಬಹಳ ಬೇಗನೆ ನಗರದ ಬಿಜೆಪಿ ಮುಖಂಡರಿಗೆ ತಲುಪಿತು. ನೂರಾರು ಸಂಖ್ಯೆಯಲ್ಲಿ ಬಿಜೆಪಿ ಮತ್ತು ಹಿಂದೂಪರ ಕಾರ್ಯಕರ್ತರೂ ರೈಲು ನಿಲ್ದಾಣದಲ್ಲಿ ಜಮಾಯಿಸಿದರು. ಈ ಹಂತದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.  ಕೂಡಲೇ ಸ್ಥಳಕ್ಕೆ ಧಾವಿಸಿದ ಎಸ್‌ಪಿ ಶ್ರೀಹರಿಬಾಬು ಬಿ.ಎಲ್‌. ಮತ್ತು ಹಲವು ಠಾಣೆಗಳ ಪೊಲೀಸರು ಸಮಾಧಾನಪಡಿಸುವ ಕೆಲಸ ಮಾಡಿದರು. ಬಿಜೆಪಿ ನಾಯಕರು ಸಹ ಉದ್ರಿಕ್ತರನ್ನು ಸಮಾಧಾನಪಡಿಸುವ ಕೆಲಸ ಮಾಡಿದರು.

ಹುಬ್ಬಳ್ಳಿ, ಗದಗ, ಕೊಪ್ಪಳ ಮೂಲಕ ರಾತ್ರಿ 8.40ಕ್ಕೆ ನಿಲ್ದಾಣಕ್ಕೆ ಬಂದಿದ್ದ ಈ ಅಯೋಧ್ಯಾ ವಿಶೇಷ ರೈಲು 10 ಗಂಟೆ ಸುಮಾರಿಗೆ ಬಳ್ಳಾರಿಯತ್ತ ತೆರಳಿತು. ರೈಲಿನೊಳಗಿದ್ದ ಹಾಗೂ ನಿಲ್ದಾಣದೊಳಗಿದ್ದ ಮಂದಿ ‘ಜೈ ಶ್ರೀರಾಮ್‌’ ಘೋಷಣೆ ಕೂಗಿದರು.

ಮೂವರು ಹತ್ತಿರುವ ಶಂಕೆ: ರೈಲಿನ ಎರಡನೇ ಬೋಗಿಗೆ ಮೂವರು ಅಪರಿಚಿತರು ಹತ್ತಿದ್ದರು. ಆಗ ಅಲ್ಲಿ ರಾಮಭಕ್ತರಿಂದ ಭಜನೆ ನಡೆಯುತ್ತಿತ್ತು. ಇದನ್ನು ಕೇಳಿ ಸಹಿಸಲಾಗದ ಈ ಮೂವರು ಪ್ರಚೋದನಕಾರಿಯಾಗಿ ಮಾತನಾಡಿದರು ಎಂದು ಹೇಳಲಾಗುತ್ತಿದೆ.

‘ಇನ್ನೂ ಎಫ್‌ಐಆರ್ ದಾಖಲಾಗಿಲ್ಲ. ಈ ಹಂತದಲ್ಲಿ ನಾನು ಏನೂ ಹೇಳುವ ಸ್ಥಿತಿಯಲ್ಲಿಲ್ಲ. ಪರಿಸ್ಥಿತಿ ಸದ್ಯ ಶಾಂತವಾಗಿದೆ. ರೈಲು ನಿಲ್ದಾಣದ 50 ಮೀಟರ್ ವ್ಯಾಪ್ತಿಯಲ್ಲಿ ರೈಲ್ವೆ ಪೊಲೀಸರ ವ್ಯಾಪ್ತಿಯಾಗುತ್ತದೆ. ನಾವು ಏನಿದ್ದರೂ ಹೊರಗಿನಿಂದ ರಕ್ಷಣೆ ನೀಡಬೇಕಷ್ಟೆ. ನಾವು ಸಾಕಷ್ಟು ರಕ್ಷಣಾ ವ್ಯವಸ್ಥೆ ಕೈಗೊಂಡಿದ್ದೇವೆ. ರೈಲಿನಲ್ಲಿ 10 ಮಂದಿ ರೈಲ್ವೆ ಸುರಕ್ಷತಾ ಪಡೆಯ ಸಿಬ್ಬಂದಿ ತೆರಳಿದ್ದಾರೆ. ಯಾವುದೇ ಆತಂಕಪಡುವ ಅಗತ್ಯ ಇಲ್ಲ’ ಎಂದು ಎಸ್‌ಪಿ ಶ್ರೀಹರಿಬಾಬು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ರೈಲು ನಿಲ್ದಾಣದ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸುವ ಕೆಲಸ ತಕ್ಷಣ ಆರಂಭವಾಗಿದೆ. ಶಾಂತಿ ಭಂಗಕ್ಕೆ ಯತ್ನಿಸಿದವರನ್ನು ಶೀಘ್ರ ಬಂಧಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT