ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯನಗರ | ಮಾದಕ ವಸ್ತು ಸೇವನೆ: 67 ಪ್ರಕರಣ ಪತ್ತೆ

ಡಾ.ಎಲ್‌.ಆರ್.ಶಂಕರ್ ನಾಯ್ಕ್ ಮಾಹಿತಿ
Published 26 ಜೂನ್ 2024, 16:12 IST
Last Updated 26 ಜೂನ್ 2024, 16:12 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಜಿಲ್ಲೆಯಲ್ಲಿ ಈ ವರ್ಷ ಮಾದಕ ವಸ್ತು ಸೇವನೆಯ ಒಟ್ಟು 67 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಕರಣ ಹೆಚ್ಚಳವಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಲ್‌.ಆರ್.ಶಂಕರ್ ನಾಯ್ಕ್ ಹೇಳಿದರು.

ಬುಧವಾರ ಇಲ್ಲಿ ನಡೆದ ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಣೆ ವಿರೋಧಿ ದಿನ ಪ್ರಯುಕ್ತ ಜಾಥಾಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

‘ಮಾದಕ ವಸ್ತುಗಳ ಸೇವನೆಯನ್ನು ಕಡಿಮೆಗೊಳಿಸಿ ಸಮಾಜದಲ್ಲಿ ಸ್ವಾಸ್ಥ್ಯ ನೆಲೆಸುವಂತೆ ಮಾಡುವುದೇ ಈ ಜಾಥಾದ ಉದ್ದೇಶ. ಮುಖ್ಯವಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಇದರ ಚಟ ಹತ್ತಿಸಿಕೊಳ್ಳದಂತೆ ಎಚ್ಚರ ವಹಿಸಬೇಕಿದೆ’ ಎಂದರು.

ಪ್ರತಿಜ್ಞಾವಿಧಿ ಬೋಧನೆ: ಎಸ್‌ಪಿ ಶ್ರೀಹರಿಬಾಬು ಬಿ.ಎಲ್‌. ಅವರು ಜಾಥಾದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾದಕ ವಸ್ತು ಸೇವನೆ ವಿರುದ್ಧ ಪ್ರತಿಜ್ಞಾವಿಧಿ ಬೋಧಿಸಿದರು.

ಬಳಿಕ ಮಾತನಾಡಿ, ‘ಮಾದಕ ಪದಾರ್ಥಗಳ ಸೇವನೆಯಿಂದ ಆಗುವ ದೈಹಿಕ ಮತ್ತು ಮಾನಸಿಕ ತೊಂದರೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಪೊಲೀಸ್‌, ಅಬಕಾರಿ, ಆರೋಗ್ಯ ಇಲಾಖೆಗಳು ನಡೆಸುತ್ತಿವೆ. ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ’ ಎಂದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಾನಸ ಅಕ್ಕ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡಮನಿ ಎಂ.ಪಿ ಇದ್ದರು. ಜಿಲ್ಲಾ ಕುಷ್ಠರೋಗ ನಿರ್ಮಾಲನಾಧಿಕಾರಿ ಡಾ.ರಾಧಿಕಾ ಕೆ. ಮಾತನಾಡಿದರು.

ಪುನೀತ್ ರಾಜ್‌ಕುಮಾರ್ ವೃತ್ತದಿಂದ ಆರಂಭವಾದ ಜಾಥಾ, ರಾಮಾ ಟಾಕೀಸ್, ವಾಲ್ಮೀಕಿ ವೃತ್ತದ ಮೂಲಕ 100 ಹಾಸಿಗೆ ಆಸ್ಪತ್ರೆ ಮುಂಭಾಗದಿಂದ ಸಾಗಿ ಜಿಲ್ಲಾ ಕ್ರೀಡಾಂಗಣಕ್ಕೆ ಬಂದು ತಲುಪಿತು. ಜಾಥಾದ ಉದ್ದಕ್ಕೂ ಮಾದಕ ವಸ್ತು ವಿರುದ್ಧ ಘೋಷಣೆ ಕೂಗಲಾಯಿತು. ಟೆಲಿಮನಸ್ ಉಚಿತ ಸಹಾಯವಾಣಿ ಸಂಖ್ಯೆ 14416 ಸಂಪರ್ಕಿಸುವಂತೆ ಸಲಹೆ ನೀಡಲಾಯಿತು. ನಗರದ ವಿವಿಧ ಅರೆವೈದ್ಯಕೀಯ ಕಾಲೇಜುಗಳು ಹಾಗೂ ಇತರ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಎನ್‌ಸಿಸಿ, ಎನ್‌ಎಸ್ಎಸ್‌,  ಪೊಲೀಸ್‌, ಅಬಕಾರಿ, ಆರೋಗ್ಯ ಇಲಾಖೆಗಳ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT