ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಕ್ತಿ ಯೋಜನೆ: ಮಹಿಳೆಯರಿಂದಲೇ 124 ಕೋಟಿ ವರಮಾನ

Published 11 ಜೂನ್ 2024, 6:36 IST
Last Updated 11 ಜೂನ್ 2024, 6:36 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆ ‘ಶಕ್ತಿ’ ಜಾರಿಗೆ ಬಂದು ಒಂದು ವರ್ಷ ಪೂರ್ಣಗೊಂಡಿದ್ದು, ಜಿಲ್ಲೆಯಲ್ಲಿ 3,37,11,051 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ ಹಾಗೂ ಅವರಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ (ಕೆಕೆಆರ್‌ಟಿಸಿ) ₹124,25,06,900 ವರಮಾನ ಬಂದಿದೆ.

‘ಶಕ್ತಿ’ ಯೋಜನೆ ನಷ್ಟದಲ್ಲಿದ್ದ ಕೆಕೆಆರ್‌ಟಿಸಿ ನಿಗಮವನ್ನು ಅನಾಮತ್ತಾಗಿ ಮೇಲಕ್ಕೆತ್ತಿ ಲಾಭದ ಹಳಿಗೆ ತಂದು ನಿಲ್ಲಿಸಿದ್ದು, ಹೊಸಪೇಟೆ ವಿಭಾಗಕ್ಕೆ ₹30 ಕೋಟಿ ಲಾಭವನ್ನು ತಂದುಕೊಟ್ಟಿದೆ. ಸುಮಾರು ಒಂದೂವರೆ ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ನಿವೃತ್ತಿ ವೇತನ ಪಾವತಿಸುವುದೂ ನಿಗಮಕ್ಕೆ ಸಾಧ್ಯವಾಗಿದೆ.

‘ಕಳೆದ ಒಂದು ವರ್ಷದಲ್ಲಿ ಹೊಸಪೇಟೆ ವಿಭಾಗದಲ್ಲಿ 6.14 ಕೋಟಿ ಪ್ರಯಾಣಿಕರು ಕೆಕೆಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಈ ಪೈಕಿ ಟಿಕೆಟ್‌ ರಹಿತ ಮಹಿಳಾ ಪ್ರಯಾಣಿಕರ ಸಂಖ್ಯೆ 3.37 ಕೋಟಿ (ಶೇ 54.87) ಹಾಗೂ ಟಿಕೆಟ್‌ ನೀಡಿ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆ 2.77 ಕೋಟಿ (ಶೇ 45.13). ಮಹಿಳಾ ಪ್ರಯಾಣಿಕರಿಂದ ಬಂದ ವರಮಾನ ₹124.25 ಕೋಟಿ (ಶೇ 51.60) ಹಾಗೂ ಟಿಕೆಟ್‌ ಪ್ರಯಾಣಿಕರ ವರಮಾನ ₹116.55 ಕೋಟಿ (ಶೇ 48.40)’ ಎಂದು ಕೆಕೆಆರ್‌ಟಿಸಿ ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿ (ಡಿ.ಸಿ) ವಿ.ಎಸ್.ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಶಕ್ತಿ ಕುಂದುತ್ತಿರುವ ಲಕ್ಷಣ: ಶಕ್ತಿ ಯೋಜನೆಯಡಿ 3 ಕೋಟಿಗೂ ಮಿಕ್ಕಿ ಮಹಿಳೆಯರು ಸುಮಾರು 11 ತಿಂಗಳು ಭರ್ಜರಿಯಾಗಿಯೇ ತಿರುಗಾಡಿದ್ದು, ಕಳೆದ ಮೇ ತಿಂಗಳಲ್ಲಿ ಅವರ ಪ್ರಯಾಣದ ಪ್ರಮಾಣ ಕಡಿಮೆಯಾಗಿದೆ. ಮೇ ತಿಂಗಳಲ್ಲಿ ಮಹಿಳಾ ಪ್ರಯಾಣಿಕರಿಂದ ₹12.01 ಕೋಟಿ ವರಮಾನ ಬಂದಿದ್ದರೆ, ಟಿಕೆಟ್‌ ಪ್ರಯಾಣಿಕರಿಂದ ₹12.23 ಕೋಟಿ ವರಮಾನ ಬಂದಿದೆ.

ಕಳೆದ ಏಪ್ರಿಲ್‌ ತಿಂಗಳಲ್ಲಿ ‘ಶಕ್ತಿ’ ಪ್ರಯಾಣಿಕರಿಂದ ಸಂಸ್ಥೆಗೆ ₹12.14 ಕೋಟಿ ವರಮಾನ ಬಂದಿದೆ. ಇದು ಒಂದು ವರ್ಷದಲ್ಲಿ ಗಳಿಸಿದ ಗರಿಷ್ಠ ವರಮಾನದ ಮಾಸವಾಗಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ₹11.12 ಕೋಟಿ ವರಮಾನ ಸಂಗ್ರಹವಾಗಿತ್ತು. 

ಟ್ರಿಪ್‌ ಪ್ರಮಾಣ ಜಾಸ್ತಿ: ‘ಶಕ್ತಿ ಯೋಜನೆ ಜಾರಿಗೆ ಬಂದ ನಂತರ  ಜಿಲ್ಲೆಯಲ್ಲಿ  92 ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಮೊದಲು ದಿನಕ್ಕೆ 1.40 ಲಕ್ಷ ಕಿ.ಮೀ.ನಷ್ಟಿದ್ದ ಟ್ರಿಪ್‌ ಪ್ರಮಾಣವನ್ನು 1.64 ಲಕ್ಷ ಕಿ.ಮೀ.ಗೆ ಹೆಚ್ಚಿಸಲಾಗಿದೆ. ಹೀಗಾಗಿ ಇರುವ ಬಸ್‌ಗಳಲ್ಲೇ ಹಾಗೂ ಇರುವ ಚಾಲಕರು, ಕಂಡಕ್ಟರ್‌ ಅವರಿಂದಲೇ ಅಧಿಕ ಸೇವೆ ನೀಡುವ ವ್ಯವಸ್ಥೆ ಮಾಡಲಾಗಿದೆ’ ಎಂದು ಜಗದೀಶ್‌ ಮಾಹಿತಿ ನೀಡಿದರು.

ಹೊಸಪೇಟೆ–ಹಗರಿಬೊಮ್ಮನಹಳ್ಳಿ ನಡುವೆ ಹೆಚ್ಚುವರಿಯಾಗಿ 4 ಬಸ್‌ಗಳನ್ನು ಓಡಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಎದುರಾಗಿದ್ದ ಪ್ರಯಾಣಿಕರ ಬವಣೆಯನ್ನು ಬಹುತೇಕ ನೀಗಿಸಲಾಗಿದೆ ಎಂದು ಅವರು ಹೇಳಿದರು.

25 ಹೊಸ ಬಸ್‌: ‘ಡೆಲ್ಟ್‌’ ಯೋಜನೆಯಡಿಯಲ್ಲಿ ಹೊಸಪೇಟೆಗೆ ಈ ವರ್ಷಾಂತ್ಯದ ವೇಳೆಗೆ 25 ಹೊಸ ಬಸ್‌ಗಳು ಸೇರ್ಪಡೆಯಾಗಲಿವೆ. ಇದಕ್ಕೆ ಅನುದಾನದ ಕೊರತೆ ಸದ್ಯ ಕಾಡುತ್ತಿದ್ದು, ಶಾಸಕರನ್ನು ಸಂಪರ್ಕಿಸಲಾಗಿದೆ. ಶಾಸಕರ ನೆರವು, ಕೆಕೆಆರ್‌ಡಿಬಿ ಹಾಗೂ ಇತರ ಯಾವುದಾದರೂ ಯೋಜನೆಗಳ ಅಡಿಯಲ್ಲಿ ಈ ಬಸ್‌ ಖರೀದಿಗೆ ಅಗತ್ಯವಾದ ಮೊತ್ತದ ಅರ್ಧದಷ್ಟನ್ನು ನಿಗಮ ಪಾವತಿಸಬೇಕಿದ್ದು, ಉಳಿದ ಮೊತ್ತವನ್ನು ಕೇಂದ್ರ ಸರ್ಕಾರ ಭರಿಸುತ್ತದೆ ಎಂದು ಕೆಕೆಆರ್‌ಟಿಸಿ ಮೂಲಗಳು ತಿಳಿಸಿವೆ.

ಹೊಸಪೇಟೆ ಬಸ್‌ ನಿಲ್ದಾಣ
ಹೊಸಪೇಟೆ ಬಸ್‌ ನಿಲ್ದಾಣ

ಹಳೆ ಬಸ್‌ಗಳಿಗೆ ‘ಪ್ಯಾನಿಕ್ ಬಟನ್‌

ಮೀನಾಮೇಷ ನೂತನವಾಗಿ ಅಳವಡಿಸಲಾದ ಎಲ್ಲಾ 92 ಬಸ್‌ಗಳಲ್ಲಿ ‘ಪ್ಯಾನಿಕ್‌ ಬಟನ್‌’ ವ್ಯವಸ್ಥೆ ಅಳವಡಿಸಲಾಗಿದೆ. ಹಳೆಯ ಬಸ್‌ಗಳಲ್ಲಿ ಸಹ ಮುಂದಿನ ಸೆಪ್ಟೆಂಬರ್ ಅಂತ್ಯದೊಳಗೆ ಅಳವಡಿಸುವುದಕ್ಕೆ ಸಾರಿಗೆ ಇಲಾಖೆಯಿಂದ ಸೂಚನೆ ಬಂದಿದೆ. ಶೀಘ್ರ ಈ ಕೆಲಸ ಮಾಡುವಂತೆ ಆರ್‌ಟಿಒಗಳಿಂದ ಒತ್ತಡವೂ ಬರುತ್ತಿದೆ. ಆದರೆ ಅದಕ್ಕೆ ಹೆಚ್ಚುವರಿ ಬಜೆಟ್‌ನ ಅಗತ್ಯವಿದ್ದು ಇದೇ ಕಾರಣಕ್ಕೆ ಸಾರಿಗೆ ನಿಗಮ ಹಳೆಯ ಬಸ್‌ಗಳಲ್ಲಿ ಅದನ್ನು ಅಳವಡಿಸುವುದಕ್ಕೆ ಮೀನಮೇಷ ಎಣಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಶಕ್ತಿ ಯೋಜನೆಯಿಂದ ಕೆಕೆಆರ್‌ಟಿಸಿಗೆ ಬಹಳಷ್ಟು ಪ್ರಯೋಜನ ಆಗಿದೆ ಬಸ್‌ಗಳ ಸಂಖ್ಯೆಯ ಜತೆಗೆ ಹೆಚ್ಚುವರಿ ಟ್ರಿಪ್‌ ಮಾಡಿಸುವ ಮೂಲಕ ಪ್ರಯಾಣಿಕ ಕಷ್ಟ ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ.
–ವಿ.ಎಸ್‌.ಜಗದೀಶ್‌, ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

ಅಗತ್ಯ ಇದ್ದಲ್ಲಿಗೆ ಸಿಟಿ ಬಸ್‌

‘ಹೊಸಪೇಟೆ ನಗರ ಮತ್ತು ಸುತ್ತಮುತ್ತ ಅಗತ್ಯ ಇದ್ದ ಕಡೆಗೆ ಸಿಟಿ ಬಸ್‌ ಓಡಿಸಲು ನಿಗಮ ಕ್ರಮ ಕೈಗೊಳ್ಳಲಿದೆ. ಆದರ್ಶ ಶಾಲೆ ಇರುವ ಜಂಬುನಾಥಹಳ್ಳಿಗೆ ಇದೀಗ ಸಿಟಿ ಬಸ್‌ ಓಡಿಸಲಾಗುತ್ತಿದೆ. ಅಮರಾವತಿಯಲ್ಲಿ ನಿರ್ಮಾಣವಾಗಿರುವ ನೂತನ ಕಾಲೇಜು ಕಟ್ಟಡದಲ್ಲಿ ಕಳೆದ ವಾರದಿಂದ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಆರಂಭವಾಗಿದೆ. ನೂರಾರು ವಿದ್ಯಾರ್ಥಿನಿಯರು ನಡೆದೇ ಹೋಗಬೇಕಿದ್ದು ಪ್ರೌಢಶಾಲೆ ಮತ್ತು  ಕಾಲೇಜಿನಿಂದ ಬೇಡಿಕೆ ಬಂದರೆ ಅಲ್ಲಿಗೂ ಸಿಟಿ ಬಸ್‌ ವ್ಯವಸ್ಥೆ ಮಾಡಲಾಗುವುದು’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT