ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹಿತ್ಯದಿಂದ ಸಂಚಲನ ಸೃಷ್ಟಿಸಿದವರು ಸಿದ್ಧಲಿಂಗಯ್ಯ’

Last Updated 15 ಜೂನ್ 2021, 8:28 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿ ವಿಜಯನಗರ ಬುದ್ಧವಿಹಾರ ನಿರ್ಮಾಣ ಟ್ರಸ್ಟ್‌ನಿಂದ ಸೋಮವಾರ ಸಂಜೆ ನಗರದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಇತ್ತೀಚೆಗೆ ನಿಧನರಾದ ಕವಿ ಸಿದ್ಧಲಿಂಗಯ್ಯನವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಬಿ.ಜಿ. ಕನಕೇಶಮೂರ್ತಿ ಮಾತನಾಡಿ, ‘ಕುವೆಂಪು ನಂತರ ಸಾಹಿತ್ಯ ಲೋಕದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿ, ಯುವಪೀಳಿಗೆಯನ್ನು ನಿದ್ದೆಯಿಂದ ಹೊರಗೆ ತಂದವರು ಸಿದ್ಧಲಿಂಗಯ್ಯನವರು. ಸಿದ್ಧಲಿಂಗಯ್ಯನವರ ಬರಹದಿಂದ ಸಾಹಿತ್ಯದಲ್ಲಿ ದೊಡ್ಡ ಪಲ್ಲಟವಾಯಿತು’ ಎಂದು ಹೇಳಿದರು.

‘ಇಕ್ರಲಾ, ಹೊಡಿರಲಾ ಸೇರಿದಂತೆ ಅವರ ಇತರೆ ಪದ್ಯ, ಕ್ರಾಂತಿಗೀತೆಗಳು ಹೋರಾಟಗಾರರಲ್ಲಿ ಹೊಸ ಹುಮ್ಮಸ್ಸು, ಚೈತನ್ಯ ಮೂಡಿಸಿದವು. ಅವರ ಪ್ರತಿಯೊಂದು ಕಾವ್ಯಗಳಲ್ಲಿ ತಳಸಮುದಾಯದವರ ನೋವು ಇಣುಕುತ್ತದೆ. ಹೋರಾಟಕ್ಕೆ ಹುರಿದುಂಬಿಸುತ್ತದೆ’ ಎಂದರು.

ಟ್ರಸ್ಟ್‌ ಅಧ್ಯಕ್ಷ ಎನ್‌. ಚಿನ್ನಸ್ವಾಮಿ ಸೋಸಲೆ ಮಾತನಾಡಿ, ‘ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರಿಂದ ಸಾಮಾಜಿಕ ಕ್ರಾಂತಿಯಾದರೆ, 21ನೇ ಶತಮಾನದಲ್ಲಿ ಅದಕ್ಕೆ ಮುನ್ನುಡಿ ಬರೆದವರು ಡಾ.ಬಿ. ಆರ್‌. ಅಂಬೇಡ್ಕರ್‌. ಅಂತಹ ಕ್ರಾಂತಿಯಲ್ಲಿ ಹೊರಹೊಮ್ಮಿದವರ ಪೈಕಿ ಸಿದ್ಧಲಿಂಗಯ್ಯನವರು ಕೂಡ ಒಬ್ಬರು’ ಎಂದು ಹೇಳಿದರು.

‘ಸಿದ್ಧಲಿಂಗಯ್ಯನವರಿಗೆ ಸಿಕ್ಕ ಅವಕಾಶಗಳಿಂದಲೇ ಪರಿಶಿಷ್ಟರ ಕಲ್ಯಾಣಕ್ಕೆ ಶ್ರಮಿಸಿದರು. ಅದರ ಮೂಲಕ ತಳಸಮುದಾಯದವರಲ್ಲಿ ಬದಲಾವಣೆಗೆ ಶ್ರಮಿಸಿದರು’ ಎಂದರು.

ಹಿರಿಯ ಪತ್ರಕರ್ತ ಶಶಿಕಾಂತ ಎಸ್‌. ಶೆಂಬೆಳ್ಳಿ ಮಾತನಾಡಿ, ‘ಸಿದ್ಧಲಿಂಗಯ್ಯನವರನ್ನು ದಲಿತ ಕವಿ ಎಂದು ಕರೆಯುವುದರ ಮೂಲಕ ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ತರವಲ್ಲ. ಅವರ ಸಾಹಿತ್ಯದಿಂದ ಸಮಾಜದಲ್ಲಿ ದೊಡ್ಡ ಪಲ್ಲಟಗಳಾಗಿವೆ. ಅವರು ಸಮಾಜದ, ಜಗದ ಕವಿ’ ಎಂದು ಹೇಳಿದರು.

ಟ್ರಸ್ಟ್‌ ಕಾರ್ಯದರ್ಶಿ ಸೋಮಶೇಖರ್‌ ಬಣ್ಣದಮನೆ, ಕವಯತ್ರಿ ಅಂಜಲಿ ಬೆಳಗಲ್‌, ಸಿದ್ಧಲಿಂಗಯ್ಯನವರ ಶಿಷ್ಯೆ ನಾಗವೇಣಿ ಸೋಸಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT