ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್ಸೆಸ್ಸೆಲ್ಸಿ: ವಿಜಯನಗರ ಜಿಲ್ಲೆಯ ಫಲಿತಾಂಶ ಕುಸಿತಕ್ಕೆ ಎಲ್ಲೆಡೆಯಿಂದ ಕಳವಳ

Published : 12 ಮೇ 2024, 4:23 IST
Last Updated : 12 ಮೇ 2024, 4:23 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ವಿಜಯನಗರ ಜಿಲ್ಲೆಯ ದಿಢೀರ್ ಕುಸಿತ ಶಿಕ್ಷಣ ತಜ್ಞರನ್ನು, ಪೋಷಕರನ್ನು ಕಳವಳಕ್ಕೆ ಈಡುಮಾಡಿದ್ದು, ವೆಬ್‌ಕಾಸ್ಟಿಂಗ್‌ನಿಂದಾಗಿ ನಿಷ್ಠೆಯಿಂದ ಓದಿದವರಿಗೆ ‘ನ್ಯಾಯ’ ಸಿಕ್ಕಿದೆ ಎಂಬ ಮಾತೇ ಕೇಳಿಬರುತ್ತಿದೆ.

ಶಿಕ್ಷಕರಿಗೆ ಇತರ ಕೆಲಸಗಳನ್ನು ವಹಿಸುವುದರಿಂದ ಬೋಧನೆಯತ್ತ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾತು ಶಿಕ್ಷಕರ ವಲಯದಿಂದ ಕೇಳಿಬರುತ್ತಿದ್ದು, ದಕ್ಷಿಣ ಕನ್ನಡ, ಉಡುಪಿ ಭಾಗದ ಶಿಕ್ಷಕರಿಗೂ ಇದೇ ರೀತಿಯ ಕೆಲಸಗಳು ಇವೆ, ಅಲ್ಲಿ ಹೇಗೆ ಫಲಿತಾಂಶ ಉತ್ತಮವಾಗಿರುತ್ತದೆ ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.

ಫಲಿತಾಂಶ ಸುಧಾರಣೆಗೆ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗಿತ್ತು, ಮುಂದಿನ ವರ್ಷ ಇನ್ನಷ್ಟು ಎಚ್ಚರಿಕೆಯಿಂದ ಈ ಪ್ರಯತ್ನ ಮಾಡಲಿದ್ದೇವೆ ಎಂದು ಡಿಡಿಪಿಐ ಯುವರಾಜ್‌ ನಾಯ್ಕ್ ಅವರು ಹೇಳಿದ್ದಾರೆ. ಆದರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ. ಅವರು ಫಲಿತಾಂಶದಿಂದ ಕುಗ್ಗಿ ಹೋಗಿದ್ದಾರೆ.

‘ಕಳೆದ ವರ್ಷ ನಾವು 10ನೇ ಸ್ಥಾನದಲ್ಲಿದ್ದೆವು. ಒಂದು ಸ್ಥಾನ ಮೇಲಕ್ಕೆ ಹೋಗಬೇಕಿತ್ತು ಹೊರತು ಕುಸಿತ ಕಾಣಬಾರದಾಗಿತ್ತು. 17 ಸ್ಥಾನ ಕುಸಿದುದು ಆಘಾತಕಾರಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಿಲ್ಲೆ ಅಗ್ರಸ್ಥಾನದಲ್ಲಿದೆ ಎಂಬ ಸಮಾಧಾನ ಇದ್ದರೂ, ಒಟ್ಟಾರೆ ರಾಜ್ಯದಲ್ಲಿ ಜಿಲ್ಲೆಯ ಸ್ಥಿತಿ ಉತ್ತಮವಾಗಿಯೇನೂ ಇಲ್ಲ. ಇದು ಆತ್ಮಾವಲೋಕನ ಮಾಡಿಕೊಳ್ಳಲೇಬೇಕಾದ ಸಂಗತಿ’ ಎಂದು ಅವರು ಹೇಳಿದರು.

ಮಾರ್ಮಿಕ ನುಡಿ: ‘ಶಿಕ್ಷಕರು ಬಿಲ್ಲು, ಬೆಲ್ಲಿನ ಗುಂಗಿನಿಂದ ಹೊರಬರಲಿ, ಎಲ್ಲವೂ ಸರಿ ಹೋಗುತ್ತದೆ, ಸುಧಾರಣೆಯೂ ಕಾಣುತ್ತದೆ. ಶಿಕ್ಷಕರಿಗೆ ಬದ್ಧತೆ ಇಲ್ಲದೆ ಹೋದರೆ, ಅವರು ಭ್ರಷ್ಟರಾದರೆ ಇಡೀ ಒಂದು ತಲೆಮಾರಿಗೆ ಅವರು ಕೆಟ್ಟ ಪರಿಣಾಮವನ್ನು ಬೀರಿದಂತಾಗುತ್ತದೆ’ ಎಂದು ನಗರದ ನಿವೃತ್ತ ಶಿಕ್ಷಕ ಮ.ಬ.ಸೋಮಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ವೆಬ್‌ಕಾಸ್ಟಿಂಗ್‌ನಿಂದ ಫಲಿತಾಂಶ ಕುಸಿತವಾಯಿತು ಎಂದು ಹೇಳುವುದು ಮೂರ್ಖತನ. ಹೀಗೆ ಹೇಳಿದ್ದೇ ಆದರೆ ಈ ಹಿಂದೆ ಸಾಮೂಹಿಕ ನಕಲು ನಡೆಯುತ್ತಿತ್ತು ಮತ್ತು ಶಾಲೆಗಳ ಘನತೆಯನ್ನು ಉಳಿಸುವುದಕ್ಕಾಗಿ ಶಿಕ್ಷಕರೇ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದರು ಎಂದು ಒಪ್ಪಿಕೊಂಡಂತಾಗುತ್ತದೆ. ಅದು ವಾಸ್ತವವೇ ಆಗಿದ್ದರೂ ಅದನ್ನು ಬಹಿರಂಗವಾಗಿ ಹೇಳಲಾಗದು. ಇನ್ನು ಮುಂದಾದರೂ ವ್ಯವಸ್ಥೆ ಸುಧಾರಣೆಯಾಗುವುದು ಮುಖ್ಯ’ ಎಂದು ಅವರು ಅಭಿಪ್ರಾಯಪಟ್ಟರು.

‘ವಿದ್ಯಾರ್ಥಿಗಳು ಶಾಲೆಗೆ ಹಾಜರಾಗದಿದ್ದರೂ ಹಾಜರು ಪುಸ್ತಕದಲ್ಲಿ ‘ಹಾಜರು’ ಎಂದು ನಮೂದಿಸಲಾಗುತ್ತಿದೆ. ಬಿಸಿಯೂಟದ ರೇಷನ್ ಕಡಿಮೆ ಆಗಬಾರದು ಎಂಬ ಕಾರಣಕ್ಕೆ ಈ ದಂಧೆ ನಡೆಯುತ್ತಿದೆ. ಇದು ಸಹ ಫಲಿತಾಂಶ ಕುಸಿಯಲು ಕಾರಣ’ ಎಂದು ಅವರು ಹೇಳಿದರು.

‘ಜಿಲ್ಲೆಯ ಶೈಕ್ಷಣಿಕ ಸುಧಾರಣೆಗೆ ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಗಂಭೀರ ಚಿಂತನೆ ಆಗಲೇಬೇಕು. ಶಿಕ್ಷಕ, ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಈ ಭಾಗದ ಪ್ರತಿನಿಧಿಗಳು ಮುಂದಿನ ದಿನಗಳಲ್ಲಿ ಕಾಲಕಾಲಕ್ಕೆ ಸಭೆಗಳಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ವಸ್ತುಸ್ಥಿತಿ ತಿಳಿಸುವ ಕೆಲಸ ಆಗಬೇಕು. ಅಧಿಕಾರಿಗಳ ಮಾತು ಕೇಳುತ್ತಲೇ ಹೋದಾಗ ಇಂತಹ ಸಮಸ್ಯೆಗಳು ಕೊನೆಯ ಹಂತದಲ್ಲಷ್ಟೇ ಕಾಣಿಸಿಕೊಂಡು ಇಡೀ ಜಿಲ್ಲೆಯೇ ತಲೆ ತಗ್ಗಿಸುವ ಸ್ಥಿತಿ ಬರುತ್ತದೆ’ ಎಂದು ಶಿಕ್ಷಣ ತಜ್ಞ ಪಿ.ರವೀಂದ್ರ ಹೇಳಿದರು.

ಶಿಕ್ಷಕರಿಗೂ ಭಯ

‘ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಹೇಳಿಕೊಟ್ಟು ವೆಬ್‌ಕಾಸ್ಟಿಂಗ್ ಮೂಲಕ ಸಿಕ್ಕಿಬಿದ್ದು ಹತ್ತಾರು ಶಿಕ್ಷಕರು ಅಮಾನತುಗೊಂಡಿದ್ದಾರೆ. ಈ ವಿಷಯ ಜಿಲ್ಲೆಯ ಶಿಕ್ಷಕರಿಗೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಹೀಗಾಗಿ ಈ ಬಾರಿ ಶಿಕ್ಷಕರೇ ನೆರವಾಗುವ ಪ್ರಮಾಣ ಕಡಿಮೆಯಾದಂತಿದೆ. ವಿದ್ಯಾರ್ಥಿಗಳಿಗೂ ಅಷ್ಟೇ ಸಿ.ಸಿ.ಟಿ.ವಿ.ಕ್ಯಾಮೆರಾ ಇದ್ದ ಕಾರಣ ನಕಲು ಮಾಡಲು ಭಯಬಿದ್ದರು. ಇದೆಲ್ಲದರ ಫಲವಾಗಿ ಫಲಿತಾಂಶದಲ್ಲಿ ಕುಸಿತವಾಗಿದೆ. ಇದೇ ವ್ಯವಸ್ಥೆ ಮುಂದುವರಿದರೆ ನಾಲ್ಕೈದು ವರ್ಷಗಳಲ್ಲಿ ವಿಜಯನಗರ ಜಿಲ್ಲೆಯಲ್ಲೂ ಶಿಕ್ಷಣ ವ್ಯವಸ್ಥೆ ಬಹಳಷ್ಟು ಸುಧಾರಣೆ ಆಗುವುದು ಖಂಡಿತ’ ಎಂದು ಹೆಸರು ಹೇಳಲು ಬಯಸದ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಶೀಘ್ರದಲ್ಲೇ ಎಲ್ಲಾ ಸರ್ಕಾರಿ ಹೈಸ್ಕೂಲ್‌ಗಳ ಮುಖ್ಯ ಶಿಕ್ಷಕರ ಸಭೆ ಕರೆಯಲಾಗುವುದು ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರ ಸಭೆ ನಡೆಸುವ ಚಿಂತನೆಯೂ ಇದೆ
ಸದಾಶಿವ ಪ್ರಭು ಬಿ., ಜಿಲ್ಲಾ ಪಂಚಾಯಿತಿ ಸಿಇಒ
ದಕ್ಷಿಣ ಕನ್ನಡ ಉಡುಪಿ ಭಾಗದ ಶಿಕ್ಷಣ ವ್ಯವಸ್ಥೆ ಚೆನ್ನಾಗಿದೆ. ಈ ಭಾಗದ ಅದೆಷ್ಟೋ ಮಂದಿ ಅಲ್ಲಿ ಶಿಕ್ಷಕರಾಗಿದ್ದಾರೆ ಹೊಂದಿಕೊಂಡಿದ್ದಾರೆ. ಅದರ ಲಾಭ ನಮಗೆ ಸಿಕ್ಕಿಲ್ಲ.
ಮ.ಬ.ಸೋಮಣ್ಣ, ನಿವೃತ್ತ ಶಿಕ್ಷಕ
ಸದಾಶಿವ ಪ್ರಭು ಬಿ.
ಸದಾಶಿವ ಪ್ರಭು ಬಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT