ಎಂ.ಜಿ.ಬಾಲಕೃಷ್ಣ
ಹೊಸಪೇಟೆ (ವಿಜಯನಗರ): ಬೀದಿನಾಯಿ ಕಡಿತದ ಸುದ್ದಿ ಆಗೊಮ್ಮೆ, ಈಗೊಮ್ಮೆ ವರದಿಯಾಗುತ್ತಿದೆ ಎಂದು ಜನಸಾಮಾನ್ಯರು ನಂಬಿರಬಹುದು. ಅದು ಸುಳ್ಳು, ಆಗಾಗ ಅದು ನಡೆಯುತ್ತಲೇ ಇದೆ. ಸುದ್ದಿಯಾಗುವುದು ಮಾತ್ರ ಕಡಿಮೆ. ವಿಜಯನಗರ ಜಿಲ್ಲೆಯಲ್ಲಿ ಕಳೆದ ಹತ್ತು ತಿಂಗಳಲ್ಲಿ ಬರೋಬ್ಬರಿ 8,813 ನಾಯಿ ಕಚ್ಚಿದ ಪ್ರಕರಣಗಳು ನಡೆದಿವೆ!
ಕಳೆದ ಫೆಬ್ರುವರಿಯಲ್ಲಿ ಹೊಸಪೇಟೆಯ ಚಿತ್ತವಾಡಗಿಯಲ್ಲಿ ಮಗುವೊಂದಕ್ಕೆ ಬೀದಿ ನಾಯಿ ಕಚ್ಚಿ ಮಗುವಿಗೆ ಗಂಭೀರ ಗಾಯವಾಗಿತ್ತು. ಬಳ್ಳಾರಿಯಲ್ಲಿ ಚಿಕಿತ್ಸೆ ಕೊಡಿಸಬೇಕಾಯಿತು. ಆಗ ನಗರಸಭೆ ₹ 20 ಸಾವಿರ ಪರಿಹಾರವನ್ನೂ ಕೊಟ್ಟಿತ್ತು. ಆ ಸಮಯದಲ್ಲೇ ಇನ್ನೂ ಮೂರ್ನಾಲ್ಕು ಗಂಭೀರ ಸ್ವರೂಪದ ನಾಯಿ ಕಡಿತ ಪ್ರಕರಣಗಳು ಹೊಸಪೇಟೆಯಲ್ಲಿ ಮೇಲಿಂದ ಮೇಲೆ ನಡೆದಿದ್ದವು.
‘ಹೊಸಪೇಟೆಯಲ್ಸಿ ಸದ್ಯ 6 ಸಾವಿರ ಬೀದಿ ನಾಯಿಗಳು ಇರುವ ಅಂದಾಜಿದೆ. ಕಳೆದ ಡಿಸೆಂಬರ್– ಮಾರ್ಚ್ ನಡುವೆ ಒಂದು ಸಾವಿರ ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮುಂಬೈಯ ಕಂಪನಿಯೊಂದು ಪ್ರತಿ ನಾಯಿಗೆ ₹1,591 ದರದಲ್ಲಿ ಈ ಶಸ್ತ್ರಚಿಕಿತ್ಸೆ, ಪೂರ್ವ ಮತ್ತು ಬಳಿಕದ ಆರೈಕೆ ಮಾಡಿತ್ತು‘ ಎಂದು ನಗರಸಭೆ ಆಯುಕ್ತ ಮನೋಹರ್ ನಾಗರಾಜ್ ತಿಳಿಸಿದರು.
ಯಾವುದೇ ನಾಯಿ ಕಚ್ಚಿದರೂ ಕಡಗಣಿಸಬೇಡಿ. ರೇಬಿಸ್ ಚುಚ್ಚುಮದ್ದು ತೆಗೆದುಕೊಳ್ಳಲೇಬೇಕು. ಅದಕ್ಕೆ ಎಲ್ಲೂ ಕೊರತೆ ಇಲ್ಲ.ಡಾ.ಷಣ್ಮುಖ ನಾಯಕ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ
‘ಮಾಂಸ ಎಲ್ಲೆಂದರಲ್ಲಿ ಎಸೆಯದಂತೆ ಚಿಕನ್, ಮಟನ್ ಸ್ಟಾಲ್ ಮಾಲೀಕರಿಗೆ ನೋಟಿಸ್ ನೀಡಿದ್ದೇವೆ. ಪ್ರತಿ ದಿನ ಸಂಜೆ ಪ್ರಾಣಿ ತ್ಯಾಜ್ಯ ಸಂಗ್ರಹಕ್ಕಾಗಿಯೇ ವಾಹನ ನಗರದಲ್ಲಿ ಸುತ್ತಾಡುವ ವ್ಯವಸ್ಥೆ ಮಾಡಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.
ರೇಬಿಸ್ ಚುಚ್ಚುಮದ್ದಿಗೆ ಕೊರತೆ ಇಲ್ಲ
‘ಜಿಲ್ಲೆಯಲ್ಲಿ ಆ್ಯಂಟಿ ರೇಬಿಸ್ ಇಮಿನೊ ಗೋಬ್ಲಿನ್ ಚುಚ್ಚುಮದ್ದಿಗೆ ಕೊರತೆ ಇಲ್ಲ. ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಗಳಲ್ಲಿ ಇದು ಲಭ್ಯ ಇದೆ. ರೇಬಿಸ್ ಲಸಿಕೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಇವೆ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಷಣ್ಮುಖ ನಾಯಕ್ ತಿಳಿಸಿದರು.
ಬೀದಿನಾಯಿ ಹಾವಳಿ ತಪ್ಪಿಸಲು ನಿರಂತರ ಪ್ರಯತ್ನ ನಿಶ್ಚಿತ. ಈ ವರ್ಷ 1500 ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸುವ ಗುರಿ ಇದೆ.ಮನೋಹರ್ ನಾಗರಾಜ್, ಆಯುಕ್ತ ಹೊಸಪೇಟೆ ನಗರಸಭೆ
ಹೊಸಪೇಟೆ ನಗರದ ಎಲ್ಲೆಡೆ ಬೀದಿ ನಾಯಿಗಳು ಕಾಣಿಸುತ್ತಿವೆ. ಗಂಭೀರ ಸ್ವರೂಪದ ಕಡಿತದ ವರದಿಗಳು ಬರದೆ ಇರುವ ಕಾರಣ ಬೀದಿ ನಾಯಿಗಳೂ ಸದ್ಯ ಮುಖ್ಯ ವಾಹಿನಿಯಿಂದ ದೂರವಾಗಿವೆ. ವೈಜ್ಞಾನಿಕವಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ವರ್ಷದಿಂದ ವರ್ಷಕ್ಕೆ ಬೀದಿ ನಾಯಿಗಳ ಸಂಖ್ಯೆಯನ್ನು ಕುಗ್ಗಿಸುವ ಕೆಲಸ ನಿರಂತರ ನಡೆಯಬೇಕು ಎಂಬುದು ಜನರ ಆಗ್ರಹವಾಗಿದೆ.
ಗಂಡು ನಾಯಿಗಳಿಗೆ ಆದ್ಯತೆ ಕೊಡಿ
‘ಹೆಣ್ಣು ನಾಯಿಗಳಿಗೆ ಸಂತಾನಶಕ್ತಿಹರಣ ಮಾಡುವುದಕ್ಕೆ ನಿರ್ದಿಷ್ಟ ಸಮಯ ಇರುತ್ತದೆ. ಆದರೆ ಗಂಡು ನಾಯಿಗಳಿಗೆ ವರ್ಷದುದ್ದಕ್ಕೂ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಬಹುದು. ಹೆಣ್ಣು ನಾಯಿಗಳಿಗೆ 15 ದಿನ ಆರೈಕೆ ಮಾಡಿದರೆ ಗಂಡು ನಾಯಿಗಳಿಗೆ ನಾಲ್ಕು ದಿನದ ಆರೈಕೆ ಸಾಕು. ಆದರೆ ಇಂತಹ ಆರೈಕೆಯನ್ನು ನಿರ್ಲಕ್ಷಿಸಿದರೆ ಗ್ಯಾಂಗ್ರಿನ್ ಆಗುವ ಅಪಾಯ ಇರುತ್ತದೆ. ನಗರಸಭೆಯವರು ನಾಯಿಗಳ ಬೀದಿ ನಾಯಿಗಳ ಆರೈಕೆ ಪೋಷಣೆ ಶಸ್ತ್ರಚಿಕಿತ್ಸೆ ಸೌಲಭ್ಯಕ್ಕಾಗಿಯೇ ಎರಡು ಎಕರೆ ಜಾಗ ಮೀಸಲಿಡಬೇಕು. ಒಟ್ಟಾರೆ ಬೀದಿನಾಯಿ ಸಂತಾನ ನಿಯಂತ್ರಿಸುವ ಕಾರ್ಯಕ್ರಮಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಸಿಗುವಂತಾಗಬೇಕು’ ಎಂದು ಪ್ರಾಣಿ ಸಂರಕ್ಷಕರೂ ಆಗಿರುವ ಯುವ ಸೇವಾ ಶಕ್ತಿ ಸಂಘಟನೆಯ ಸಂಸ್ಥಾಪಕ ಶ್ರೀಧರ ನಾಯ್ಡು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.