ಶನಿವಾರ, ಜನವರಿ 22, 2022
16 °C
ಹಣ ಕೊಡಲು ನಿರಾಕರಿಸಿದರೆ ಪ್ರಗತಿ ವರದಿಗೆ ಸಹಿ ಹಾಕಲು ನಕಾರ–ಆರೋಪ

ಮನೆಗೆಲಸಕ್ಕೆ ಸಂಶೋಧನಾ ವಿದ್ಯಾರ್ಥಿಗಳ ಬಳಕೆ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕೆಲ ಪ್ರಾಧ್ಯಾಪಕರು ಸಂಶೋಧನಾ ವಿದ್ಯಾರ್ಥಿಗಳನ್ನು ಅವರ ಮನೆಗೆಲಸಕ್ಕೆ ಬಳಸಿಕೊಳ್ಳುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಗೈಡ್‌ಗಳಾದವರು ವಿದ್ಯಾರ್ಥಿಗಳನ್ನು ಮನೆಗೆ ಕರೆಸಿಕೊಂಡು ತರಕಾರಿ, ಹಾಲು, ರೇಷನ್‌ ತರಿಸುವುದು ಸೇರಿದಂತೆ ಇತರೆ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಅಡುಗೆ ಕೂಡ ವಿದ್ಯಾರ್ಥಿಗಳಿಂದಲೇ ಮಾಡಿಸುತ್ತಾರೆ. ಗೈಡ್‌ಗಳ ವಾಹನಗಳ ದುರಸ್ತಿ, ಸರ್ವೀಸ್‌ ಮಾಡಿಸಿಕೊಂಡು ತರುವ ಕೆಲಸವೂ ವಿದ್ಯಾರ್ಥಿಗಳ ಹೆಗಲ ಮೇಲೆ ಹಾಕಿದ್ದಾರೆ. ಗೈಡ್‌ಗಳು ವಿಭಾಗಕ್ಕೆ ಕಾರಿನಲ್ಲಿ ಬಂದರೆ ತಕ್ಷಣವೇ ಅವರ ವಾಹನದ ಬಳಿ ಹೋಗಿ, ಅವರ ಎಲ್ಲ ಕಡತಗಳನ್ನು ತೆಗೆದುಕೊಂಡು ಒಳಗೆ ತೆಗೆದುಕೊಂಡು ಹೋಗಬೇಕು. ಮತ್ತೆ ಅವರು ನಿರ್ಗಮಿಸುವಾಗ ಎಲ್ಲ ಕಡತಗಳನ್ನು ಅವರ ವಾಹನದೊಳಗೆ ಒಯ್ದು ಇಡಬೇಕು.

ಒಂದು ವೇಳೆ ಅವರು ಹೇಳಿದಂತೆ ಕೇಳದಿದ್ದರೆ ಹಾಜರಾತಿ ಕೊಡಲು ಸತಾಯಿಸುತ್ತಾರೆ. ಸಣ್ಣಪುಟ್ಟ ಲೋಪದೋಷಗಳನ್ನು ತೋರಿಸಿ, ಸಂಶೋಧನೆ ಪೂರೈಸಲು ವಿಳಂಬ ಮಾಡುತ್ತಾರೆ ಎಂಬುದು ವಿದ್ಯಾರ್ಥಿಗಳ ಅಳಲು. ಇಷ್ಟೇ ಅಲ್ಲ, ಪ್ರತಿ ಆರು ತಿಂಗಳಿಗೊಮ್ಮೆ ಸಂಶೋಧನಾ ವಿದ್ಯಾರ್ಥಿಗಳ ಪ್ರಗತಿ ಪರಿಶೀಲನೆ ನಡೆಸುತ್ತಾರೆ. ಅದಕ್ಕಾಗಿ ಕೆಲವರು ಫೆಲೋಶಿಪ್‌ ಪಡೆಯುತ್ತಿರುವ ವಿದ್ಯಾರ್ಥಿಗಳಿಂದ ಹಣಕ್ಕೆ ಬೇಡಿಕೆ ಇಡುತ್ತಾರೆ. ಹಣ ಕೊಡಲು ನಿರಾಕರಿಸಿದರೆ ಪ್ರಗತಿ ವರದಿಗೆ ಸಹಿ ಹಾಕುವುದಿಲ್ಲ. ಒಂದು ವೇಳೆ ಹಾಕಿದರೂ ತೃಪ್ತಿಕರವಾಗಿಲ್ಲ ಎಂಬ ಟಿಪ್ಪಣಿ ಬರೆದು ಸಹಿ ಮಾಡುತ್ತಾರೆ. ಹೀಗಾದರೆ ವಿದ್ಯಾರ್ಥಿಗಳ ಸಂಶೋಧನಾ ನೋಂದಣಿ ರದ್ದಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದಕ್ಕೆ ಭಯಬಿದ್ದು ವಿದ್ಯಾರ್ಥಿಗಳು ಅವರ ಮರ್ಜಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ಗೋಳು ತೋಡಿಕೊಂಡರು.

ಪ್ರತಿಯೊಬ್ಬರ ಹಿನ್ನೆಲೆ ಅರಿತಿರುವ ಗೈಡ್‌ಗಳು, ಯಾರಾದರೂ ಕೃಷಿ ಕುಟುಂಬದ ವಿದ್ಯಾರ್ಥಿಗಳಿದ್ದರೆ ಅವರಿಂದ ಬೇಳೆ ಕಾಳಿಗೆ ಬೇಡಿಕೆ ಇಟ್ಟು ತರಿಸಿಕೊಳ್ಳುತ್ತಾರೆ. ಕುರಿ, ಕೋಳಿ ಸಾಕಾಣಿಕೆ ಮಾಡುವವರಿದ್ದರೆ ಅಂಥವರಿಂದ ಅವುಗಳಿಗಾಗಿಯೇ ಬೇಡಿಕೆ ಇಟ್ಟು ಒತ್ತಾಯಪೂರ್ವಕವಾಗಿ ತರಿಸುತ್ತಾರೆ. ಹೀಗೆ ಪ್ರತಿ ಆರು ತಿಂಗಳಿಗೊಮ್ಮೆ ನಡೆಯುವ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಆಯಾ ವಿದ್ಯಾರ್ಥಿಗಳಿಂದ ಏನಾದರೂ ತರಿಸಿಕೊಳ್ಳುವ ಪರಿಪಾಠ ಬೆಳೆಸಿಕೊಂಡಿದ್ದಾರೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಪ್ರಬಂಧ ಸಲ್ಲಿಕೆಯಾದ ನಂತರ ಇಬ್ಬರು ತಜ್ಞರಿಗೆ ಅದರ ಪ್ರತಿಗಳನ್ನು ಕಳಿಸಿಕೊಡಬೇಕು. ಅದಕ್ಕಾಗಿಯೂ ವಿದ್ಯಾರ್ಥಿಗಳಿಂದಲೇ ಹಣ ಪಡೆಯುತ್ತಾರೆ. ಹೀಗೆ ಪ್ರತಿಯೊಂದಕ್ಕೂ ವಿದ್ಯಾರ್ಥಿಗಳಿಂದ ಹಣ ಕೀಳುತ್ತಾರೆ. ಸಂಶೋಧನೆ ಮುಗಿಸಿಕೊಂಡು ಹೋಗುವವರೆಗೆ ವಿದ್ಯಾರ್ಥಿಗಳು ಪ್ರತಿ ಹಂತದಲ್ಲಿ ಹಣ ಕೊಡಬೇಕು. ಇಲ್ಲವಾದರೆ ಸಕಾಲಕ್ಕೆ ಪ್ರಬಂಧ ಪೂರ್ಣಗೊಳಿಸಲು ಬಿಡುವುದಿಲ್ಲ. ವಿಶ್ವವಿದ್ಯಾಲಯದಲ್ಲಿ ಇದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೂ, ಯಾರೊಬ್ಬರೂ ಅದರ ಬಗ್ಗೆ ಚಕಾರ ಎತ್ತುವುದಿಲ್ಲ ಎನ್ನುವುದು ವಿದ್ಯಾರ್ಥಿಗಳ ದೂರು.

‘ಸಂಶೋಧನಾ ವಿದ್ಯಾರ್ಥಿಗಳಿಂದ ಕೆಲವು ಗೈಡ್‌ಗಳು ಹಣ ಪಡೆಯುತ್ತಾರೆ. ಕೊಡುಗೆಗಳನ್ನೂ ಸ್ವೀಕರಿಸುತ್ತಾರೆ. ರೆಸ್ಟೊರೆಂಟ್‌ಗೆ ಕರೆದೊಯ್ದು ಊಟ, ಮದ್ಯಕ್ಕೆ ವ್ಯವಸ್ಥೆಯೂ ಮಾಡಿಸಿಕೊಳ್ಳುತ್ತಾರೆ. ಮನೆ ಕೆಲಸಕ್ಕೂ ಹಚ್ಚುತ್ತಾರೆ. ಇವೆಲ್ಲ ರೇಜಿಗೆ ಹುಟ್ಟಿಸುವ ವಿಷಯ. ಕೆಲವು ಪ್ರಾಧ್ಯಾಪಕರು ಮಾಡುತ್ತಿರುವ ಇಂತಹ ಕೆಲಸಗಳಿಂದ ಇಡೀ ಪ್ರಾಧ್ಯಾಪಕರಿಗೆ ಕೆಟ್ಟ ಹೆಸರು ಬರುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ವಿಶ್ವವಿದ್ಯಾಲಯದ ಅತಿ ಹಿರಿಯ ‍ಪ್ರಾಧ್ಯಾಪಕರೇ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು