ಭಾನುವಾರ, ಸೆಪ್ಟೆಂಬರ್ 19, 2021
26 °C

‘ಕೌಶಲ ಕಲಿಕೆಗೆ ಟ್ಯಾಬ್ ಸಹಕಾರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ(ವಿಜಯನಗರ): ‘ಆಧುನಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕೌಶಲ ಅಗತ್ಯ. ಅದರ ಕಲಿಕೆಗೆ ಟ್ಯಾಬ್ ಸಹಕಾರಿಯಾಗಿದೆ. ಹೀಗಾಗಿಯೇ ಸರ್ಕಾರ ವಿದ್ಯಾರ್ಥಿಗಳಿಗೆ ಟ್ಯಾಬ್‌ ವಿತರಿಸುತ್ತಿದೆ’ ಎಂದು ಶಂಕರ್ ಆನಂದ್ ಸಿಂಗ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ.ಜಿ. ಕನಕೇಶಮೂರ್ತಿ ತಿಳಿಸಿದರು.

ಬುಧವಾರ ನಗರದಲ್ಲಿ ಕಾಲೇಜಿನಲ್ಲಿ ಸಾಂಕೇತಿಕವಾಗಿ ಹತ್ತು ವಿದ್ಯಾರ್ಥಿಗಳಿಗೆ ಟ್ಯಾಬ್‌ ವಿತರಿಸುವ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕಳೆದ ವರ್ಷ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ವಿತರಿಸಲಾಗಿತ್ತು, ಪ್ರಸಕ್ತ ಸಾಲಿನ ಪ್ರಥಮ ವರ್ಷದ 862 ಜನ ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಿಸಲಾಗುತ್ತದೆ. ಟ್ಯಾಬ್ ಪಡೆದುಕೊಳ್ಳುವ ಫಲಾನುಭವಿ ವಿದ್ಯಾರ್ಥಿಗಳು ಜಾಗರೂಕತೆಯಿಂದ ಬಳಸಿಕೊಳ್ಳಿ, ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಂಡರೆ ಸೈಬರ್ ಅಪರಾಧ ಆಗುತ್ತದೆ’ ಎಂದು ಎಚ್ಚರಿಸಿದರು.

‘ಶೈಕ್ಷಣಿಕ ಉದ್ದೇಶಕ್ಕಾಗಿ ಟ್ಯಾಬ್‌ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಟ್ಯಾಬ್‌ ಮಾತ್ರವಲ್ಲದೇ ಜಿಲ್ಲಾ ಖನಿಜ ನಿಧಿಯಿಂದ ಕಾಲೇಜಿನಲ್ಲಿ 12 ಸ್ಮಾರ್ಟ್ ಹಾಗೂ 3 ಡಿಜಿಟಲ್ ತರಗತಿಗಳನ್ನು ಆರಂಭಿಸಲಾಗಿದೆ. ಕಲಬುರ್ಗಿ ವಿಭಾಗದಲ್ಲಿ ಡಿಜಿಟಲ್ ತರಗತಿ ಹೊಂದಿದ ಮೊದಲ ಕಾಲೇಜು ಎಂಬ ಹೆಗ್ಗಳಿಕೆ ನಮ್ಮದಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಪರಿಶ್ರಮ ಇದೆ’ ಎಂದರು.

ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ್ ಜೀರೆ, ‘ಶಿಕ್ಷಣ ವ್ಯವಸ್ಥೆ ಅಧುನಿಕ ತಂತ್ರಜ್ಞಾನದೊಂದಿಗೆ ಮುಂದುವರಿಯುತ್ತಿದೆ. ವಿದ್ಯಾರ್ಥಿಗಳು ಇದರ ಸೂಕ್ತ ಪ್ರಯೋಜನ ಪಡೆಯಬೇಕು. ನೂತನ ಶಿಕ್ಷಣ ನೀತಿ ಜಾರಿಯಾಗಲಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯಾಗಲಿದೆ’ ಎಂದು ತಿಳಿಸಿದರು.

ಯುವ ಮುಖಂಡ ಸಂದೀಪ್ ಸಿಂಗ್, ಪ್ರಾಧ್ಯಾಪಕರಾದ ನಟರಾಜ್ ಪಾಟೀಲ, ಬಸವರಾಜ್, ಗಡಿಗೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು