ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಭದ್ರಾ ಗೇಟ್‌ ಕೊಚ್ಚಿ ಹೋದ ಪ್ರಕರಣ: ತನಿಖೆಗೆ ತಂಡ ರಚನೆ

ಎ.ಕೆ.ಬಜಾಜ್‌ ನೇತೃತ್ವದ ತಂಡ– ವರದಿ ನೀಡಲು 15 ದಿನದ ಗಡುವು
Published 5 ಸೆಪ್ಟೆಂಬರ್ 2024, 16:32 IST
Last Updated 5 ಸೆಪ್ಟೆಂಬರ್ 2024, 16:32 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್ ಕಳೆದ ಆಗಸ್ಟ್ 10ರಂದು ರಾತ್ರಿ ನೀರಲ್ಲಿ ಕೊಚ್ಚಿಹೋಗಲು ಕಾರಣ ಏನು ಎಂಬುದನ್ನು ಪತ್ತೆ ಮಾಡಲು ಕೇಂದ್ರೀಯ ನೀರಾವರಿ ಸಮಿತಿಯ (ಸಿಡಬ್ಲ್ಯುಸಿ) ಮಾಜಿ ಅಧ್ಯಕ್ಷ ಎ.ಕೆ.ಬಜಾಜ್‌ ನೇತೃತ್ವದ ತಾಂತ್ರಿಕ ತಜ್ಞರ ತನಿಖಾ ತಂಡ ರಚಿಸಲಾಗಿದೆ.

‘ಅಣೆಕಟ್ಟು ಗೇಟ್ ತಜ್ಞರಾದ ಹರ್ಕೇಶ್ ಕುಮಾರ್‌, ತಾರಾಪುರಂ ಸುಧಾಕರ್, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸರ್ಕಾರಗಳ ತಾಂತ್ರಿಕ ಸಲಹಾ ಸಮಿತಿಯ ಪ್ರತಿನಿಧಿಗಳು ಈ ತಂಡದಲ್ಲಿ ಸದಸ್ಯರಾಗಿರುತ್ತಾರೆ. 15 ದಿನದಲ್ಲಿ ತನಿಖಾ ವರದಿ ಸಲ್ಲಿಸಲು ಸೂಚಿಸಲಾಗಿದೆ’ ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ತಿಳಿಸಿದ್ದಾರೆ.

ಏನೆಲ್ಲ ತನಿಖೆ?:

ಚೈನ್‌ ಲಿಂಕ್‌ನ ಬಲದೊಂದಿಗೆ ಲಂಬವಾಗಿ ನಿಂತಿದ್ದ ಕ್ರಸ್ಟ್‌ಗೇಟ್ ಕಳಚಿಕೊಳ್ಳಲು ನಿಜವಾಗಿ ಕಾರಣವೇನು? ಮಳೆಗಾಲಕ್ಕೆ ಮೊದಲು ಮತ್ತು ನಂತರ ಗೇಟ್‌ ಮತ್ತು ಚೈನ್‌ಲಿಂಕ್‌ಗಳನ್ನು ಆಗಾಗ್ಗೆ ಪರೀಕ್ಷಿಸಲಾಗುತ್ತಿತ್ತೇ ಎಂಬ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಈ ತಂಡ ಮಾಡಲಿದೆ.

ಕ್ರಸ್ಟ್‌ಗೇಟ್‌ಗಳ ಆಯಸ್ಸು, ಕೊನೆಯ ಬಾರಿಗೆ ಮಾಡಿದ ದುರಸ್ತಿ, ಗೇಟ್‌ ಬದಲಿಸಿದ್ದರೆ ಯಾವಾಗ ಎಂಬುದನ್ನು ಅರಿತು ತಂಡ, ತುರ್ತು ಸಂದರ್ಭದಲ್ಲಿ ಬದಲಿ ಗೇಟ್ ಯಾಕೆ ಸಿದ್ಧಪಡಿಸಿರಲಿಲ್ಲ ಎಂಬುದನ್ನು ಪರಿಶೀಲಿಸಲಿದೆ.

ಇತರ ಅಣೆಕಟ್ಟೆಗಳಲ್ಲಿ ಸ್ಟಾಪ್‌ಲಾಗ್‌ ಗೇಟ್‌ ಇದ್ದರೂ, ತುಂಗಭದ್ರಾ ಅಣೆಕಟ್ಟೆಯಲ್ಲಿ ಅದು ಇಲ್ಲ, ಇದುವರೆಗೆ ಯಾಕೆ ಅದನ್ನು ಅಳವಡಿಸಿಲ್ಲ ಎಂಬುದನ್ನು ಅಂದಾಜಿಸಲಿರುವ ತಂಡ, ಈಗಿರುವ ಗೇಟ್‌ಗಳನ್ನು ಬಲಪಡಿಸಲು ಹಾಗೂ ಕ್ರಸ್ಟ್‌ಗೇಟ್‌ಗಳು ಮತ್ತೆ ಕೊಚ್ಚಿಕೊಂಡು ಹೋಗದಂತೆ ನೋಡಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸು ಮಾಡಲಿದೆ. 

ಉಳಿದ 32 ಕ್ರಸ್ಟ್‌ಗೇಟ್‌ಗಳ ಸದ್ಯದ ಸ್ಥಿತಿಗತಿಗಳನ್ನು ಅಂದಾಜಿಸಲಿರುವ ತಂಡ, ಸುರಕ್ಷತೆಯ ದೃಷ್ಟಿಯಿಂದ ಜಲಾಶಯದಲ್ಲಿ ಎಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಿಸಿ ಇಡಬಹುದು ಎಂಬ ಬಗ್ಗೆ ಶಿಫಾರಸು ಮಾಡಲಿದೆ.

70 ವರ್ಷಗಳ ತುಂಗಭದ್ರಾ ಅಣೆಕಟ್ಟೆಯ ಇತಿಹಾಸದಲ್ಲಿ ಒಮ್ಮೆಯೂ ಗೇಟ್‌ ಕೊಚ್ಚಿಹೋದ ದುರಂತ ಸಂಭವಿಸಿರಲಿಲ್ಲ. ಅಣೆಕಟ್ಟು ನಿರ್ಮಿಸುವಾಗ ಅಳವಡಿಸಿದ್ದ ಕ್ರಸ್ಟ್‌ಗೇಟ್‌ಗಳನ್ನು ನಿರ್ವಹಿಸುತ್ತಿದ್ದುದು ಬಿಟ್ಟರೆ ಒಂದು ಗೇಟನ್ನೂ ಬದಲಿಸಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT