ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ಚಿರತೆಗಳ ಉಪಟಳಕ್ಕೆ ನಲುಗಿದ ವಾಜಪೇಯಿ ಉದ್ಯಾನದ ಜಿಂಕೆಗಳು

ಚಿರತೆ ದಾಳಿ ತಡೆಗೆ ಹಲವು ಕ್ರಮ
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದೊಳಗಿನ ಜಿಂಕೆಗಳ ಮೇಲೆ ಪದೇ ಪದೇ ದಾಳಿ ನಡೆಸುತ್ತಿರುವ ಚಿರತೆಗಳ ಉಪಟಳ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ವಾಜಪೇಯಿ ಉದ್ಯಾನದಲ್ಲಿ ಜಿಂಕೆ ವನ, ಹುಲಿ ಹಾಗೂ ಸಿಂಹ ಸಫಾರಿ ಮತ್ತು ಮೃಗಾಲಯ ಹೀಗೆ ಮೂರು ವಲಯಗಳಿವೆ. ಆದರೆ, ಜಿಂಕೆ ವನದ ಮೇಲೆ ಚಿರತೆಗಳ ಕೆಂಗಣ್ಣು ಬಿದ್ದಿದ್ದು ಮೇಲಿಂದ ಮೇಲೆ ಅಲ್ಲಿ ದಾಳಿ ನಡೆಸಿ, ಬೇಟೆಯಾಡುತ್ತಿವೆ. ಜಿಂಕೆ, ಕೃಷ್ಣಮೃಗ ಹಾಗೂ ಹೈನಾಗಳಿದ್ದು, ಸತತ ಚಿರತೆ ದಾಳಿಗೆ ಅವುಗಳಲ್ಲಿ ಭಯ ಮೂಡಿದೆ. ಚಿರತೆ ದಾಳಿ ನಿಯಂತ್ರಿಸಲು ಉದ್ಯಾನದಿಂದ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಚಿರತೆಗಳ ಚಲನವಲನ ಎಲ್ಲಿ ಹೆಚ್ಚಾಗಿದೆಯೋ ಅಂತಹ ಕಡೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮೂರು ಬೋನುಗಳನ್ನು ಇಡಲಾಗಿದೆ. ಫೆನ್ಸಿಂಗ್‌ಗೆ ಹೊಂದಿಕೊಂಡಂತೆ ಇದ್ದ ಕೆಲವು ಮರಗಳ ಕಾಂಡಗಳನ್ನು ಕತ್ತರಿಸಲಾಗಿದೆ. ಚಿರತೆಗಳನ್ನು ‘ಟ್ರ್ಯಾಂಕ್ವಾಲೈಸ್‌’ (ಮೂರ್ಛೆಗೊಳ್ಳುವ ಚುಚ್ಚುಮದ್ದು) ಮಾಡಲು ನಿರ್ಧರಿಸಲಾಗಿದೆ. ಅದಕ್ಕೆ ಸಿದ್ಧತೆಯೂ ನಡೆಸಲಾಗಿದೆ. ಅದಕ್ಕೆಂದೆ ಇಬ್ಬರು ಪರಿಣತರನ್ನು ಕರೆಸಲಾಗಿದೆ ಎಂದು ಗೊತ್ತಾಗಿದೆ. ಆದರೆ, ಇದನ್ನು ಕೊನೆಯ ಆಯ್ಕೆಯಾಗಿ ಇಟ್ಟುಕೊಳ್ಳಲಾಗಿದೆ.

‘ಟ್ರ್ಯಾಂಕ್ವಾಲೈಸ್‌’ ಬಹಳ ಕಷ್ಟದ ಕೆಲಸ. ಸೊಂಟದ ಭಾಗಕ್ಕೆ ಹೊಡೆಯಬೇಕು. ಬೇರೆ ಭಾಗಕ್ಕೆ ಬಿದ್ದರೆ ಅವುಗಳ ಜೀವಕ್ಕೆ ಕುತ್ತು ಬರಬಹುದು. ಕಳೆದ ಒಂದು ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಜಿಂಕೆಗಳ ಮೇಲೆ ಚಿರತೆಗಳು ದಾಳಿ ನಡೆಸಿ, ಕೊಂದಿವೆ ಎನ್ನುವುದು ಉದ್ಯಾನದ ಅಂದಾಜು. ಆದರೆ, ಇದಕ್ಕಿಂತ ದೊಡ್ಡ ಸಂಖ್ಯೆಯಲ್ಲಿ ಅವುಗಳು ಸಾವನ್ನಪ್ಪಿವೆ ಎಂದು ಗೊತ್ತಾಗಿದೆ. ಈ ಕಾರಣಕ್ಕಾಗಿಯೇ ಉದ್ಯಾನದ ಆಡಳಿತವು ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದು ಬಂದಿದೆ.

‘ಒಟ್ಟು ಮೂರು ಚಿರತೆಗಳು ಜಿಂಕೆಗಳ ಮೇಲೆ ದಾಳಿ ನಡೆಸುತ್ತಿದ್ದವು. ಕೆಲವು ತಿಂಗಳ ಹಿಂದೆ ಒಂದು ಚಿರತೆಯನ್ನು ಹಿಡಿದು ಬೇರೆಡೆ ಬಿಡಲಾಗಿದೆ. ಇನ್ನೆರಡು ಚಿರತೆಗಳ ಕಾಟ ನಿಯಂತ್ರಿಸಲು ಕ್ರಮ ಜರುಗಿಸಲಾಗಿದೆ’ ಎಂದು ಉದ್ಯಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್. ಕಿರಣ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT