ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯಲ್ಲಿ 19ನೇ ಗೇಟ್ ಇದ್ದ ಕಡೆ, ತಾತ್ಕಾಲಿಕ ಗೇಟ್ ಅಳವಡಿಸಿ 6 ದಿನ ಕಳೆದಿದ್ದು, 12 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಅಣೆಕಟ್ಟೆ ನೀರಿನ ಮಟ್ಟ ಸದ್ಯ 1,627.01 ಅಡಿ (ಗರಿಷ್ಠ 1,633 ಅಡಿ) ಇದೆ. ಗರಿಷ್ಠ 105.78 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 83.24 ಟಿಎಂಸಿ ಅಡಿ ನೀರಿದೆ.
ಕಾಲುವೆಗಳಲ್ಲಿ ಸರಾಸರಿ 9 ಸಾವಿರ ಕ್ಯುಸೆಕ್ ನೀರು ಹರಿಯುತ್ತಿದ್ದು, ಒಳಹರಿವಿನ ಪ್ರಮಾಣ ಸದ್ಯ ಸರಾಸರಿ 37,489 ಕ್ಯುಸೆಕ್ ಇದೆ. 4 ದಿನಗಳಲ್ಲಿ 90 ಟಿಎಂಸಿ ಅಡಿ ನೀರು ಸಂಗ್ರಹವಾಗುವ ನಿರೀಕ್ಷೆ ಇದೆ.
ಇದರಿಂದ ಮೊದಲ ಬೆಳೆಗೆ ನೀರು ಪೂರ್ಣಪ್ರಮಾಣದಲ್ಲಿ ಸಿಗಲಿದೆ. ಕುಡಿಯುವ ನೀರು, ಉದ್ಯಮಗಳಿಗೂ ನೀರು ಖಾತ್ರಿಯಾಗಲಿದೆ. ಈ ಬಾರಿ ಹಿಂಗಾರು ಮಳೆ ಉತ್ತಮವಾಗಿ ಸುರಿದರೆ, ಮತ್ತೆ 50 ರಿಂದ 60 ಟಿಎಂಸಿ ಅಡಿ ನೀರು ಸಂಗ್ರಹವಾಗಿ ಎರಡನೇ ಬೆಳೆಗೂ ನೀರು ಲಭಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.