ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಭದ್ರಾ ಅವಘಡ: ಏತ ನೀರಾವರಿ ನಂಬಿದ ರೈತರಿಗೆ ಆತಂಕ

ಕ್ರಸ್ಟ್‌ಗೇಟ್ ನೀರಲ್ಲಿ ಕೊಚ್ಚಿ ಹೋದುದರ ಪರಿಣಾಮ
Published : 15 ಆಗಸ್ಟ್ 2024, 7:22 IST
Last Updated : 15 ಆಗಸ್ಟ್ 2024, 7:22 IST
ಫಾಲೋ ಮಾಡಿ
Comments

ಮರಿಯಮ್ಮನಹಳ್ಳಿ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‍ನ ಅವಘಡದಿಂದಾಗಿ ಹಿನ್ನೀರು ಬಳಸಿಕೊಂಡು ನಿರ್ಮಿಸಿದ ಏತನೀರಾವರಿ ಯೋಜನೆಯ ನೀರನ್ನೇ ನಂಬಿದ ನೂರಾರು ರೈತರಲ್ಲಿ ಈಗ ಆತಂಕ ಮನೆ ಮಾಡಿದೆ.

ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ನದಿಗೆ ಹರಿದು ಹೋಗುತ್ತಿರುವುದರಿಂದ, ವ್ಯಾಸನಕೆರೆ, ಡಣಾಯಕನಕೆರೆ ಹಾಗೂ ನಂದಿಬಂಡಿ ಏತನೀರಾವರಿ ಯೋಜನೆಯ ವ್ಯಾಪ್ತಿಯ ರೈತರು ಚಿಂತೆಗೀಡಾಗಿದ್ದಾರೆ.

ತುಂಗಭದ್ರಾ ಅಣೆಕಟ್ಟೆಯ ನೀರಿನ ಮಟ್ಟ 1,620 ಅಡಿ ತಲುಪಿದಾಗ ಈ ಏತ ನೀರಾವರಿ ಯೋಜನೆಗಳ ಬಾವಿಗೆ ನೀರು ಹರಿದು ಬರುತ್ತದೆ. ಏಳೆಂಟು ತಿಂಗಳು ಜಮೀನಿಗೆ ನೀರು ಹರಿಯುವುದರಿಂದ ರೈತರು ಎರಡು ಬೆಳೆ ಬೆಳೆಯುತ್ತಾರೆ.

ಆದರೆ ಕ್ರಸ್ಟ್‌ಗೇಟ್ ದುರಸ್ತಿ ಮಾಡಲು ಸದ್ಯ 20 ಅಡಿಯಷ್ಟು ನೀರನ್ನು ಖಾಲಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದರಿಂದ ಈ ಯೋಜನೆಯನ್ನೇ ನಂಬಿದ ರೈತರು ಆತಂಕಗೊಂಡಿದ್ದಾರೆ. ಜೊತೆಗೆ ಈ ಬಾರಿ ಮಳೆಯೂ ಸರಿಯಾಗಿ ಬಾರದೆ ಕೈಕೊಟ್ಟಿರುವುದುರಿಂದ ಅವರ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಕಳೆದ ವರ್ಷ ಜಲಾಶಯ ತುಂಬಿರದ ಕಾರಣದ ಎರಡ್ಮೂರು ತಿಂಗಳು ಮಾತ್ರ ಜಮೀನುಗಳಿಗೆ ನೀರು ಹರಿದಿತ್ತು. ಈ ಬಾರಿ ಬೇಗನೆ ತುಂಬಿದ್ದರಿಂದ ನೀರು ಹರಿಸಲು ಆರಂಭಿಸಲಾಗಿತ್ತು. ರೈತರು ಸಂತಸದಿಂದಲೇ ಭತ್ತ ನಾಟಿ ಸೇರಿದಂತೆ ಮುಸಕಿನ ಜೋಳ, ಕಬ್ಬು ಶೇಂಗಾ, ಅಲಸಂದಿ ಬಿತ್ತನೆಯಲ್ಲಿ ತೊಡಗಿದ್ದರು.

ಆದರೆ ವಾರದೊಳಗೆ ಜಲಾಶಯದ ನೀರಿನ ಮಟ್ಟ ಕಡಿಯಾಗುವುದರಿಂದ ಯೋಜನೆಗೆ ನೀರು ಹರಿದು ಬರುವುದು ನಿಲ್ಲುತ್ತದೆ. ಇದರಿಂದ ರೈತರು ಸಂದಿಗ್ಧ ಪರಿಸ್ಥಿತಿ ಎದುರಿಸುವಂತಾಗಿದೆ ಎನ್ನುತ್ತಾರೆ ವ್ಯಾಸನಕೆರೆ ರೈತರಾದ ಹುಗ್ಗಿ ಬಸವರಾಜ ಮತ್ತು ಅಯ್ಯನಹಳ್ಳಿಯ ಮಾಬುಸಾಬು.

ವ್ಯಾಸನಕೆರೆ ಏತ ನೀರಾವರಿ ಯೋಜನೆಯ ಮೊದಲನೆ ಹಾಗೂ ಎರಡನೇ ಹಂತ ಸುಮಾರು 3 ಸಾವಿರ ಎಕರೆಗೆ ನೀರುಣಿಸಿದರೆ, ಏತ ನೀರಾವರಿ ಮೂಲಕ ಡಣಾಯಕನಕೆರೆಗೆ ನೀರು ತುಂಬಿಸಲಾಗುತ್ತಿದ್ದು, ಸುಮಾರು 2 ಸಾವಿರ ಎಕರೆಗೂ ಹೆಚ್ಚು ಜಮೀನಿಗೆ ಈ ನೀರು ಸಿಗುತ್ತದೆ.

ಬರಿದಾಗಿದ್ದ ಕೆರೆಯಲ್ಲಿ ಈ ಬಾರಿ ಸಾಕಷ್ಟು ನೀರು ಸಂಗ್ರಹವಾಗಲಿದೆ ಎಂದು ನಂಬಿದ್ದ ಆಯಕಟ್ಟಿನ ಪ್ರದೇಶದ ರೈತರಲ್ಲಿ ಸಂತಸ ಹೆಚ್ಚಾಗಿತ್ತು. ಆದರೆ ಈ ಅವಘಡದಿಂದಾಗಿ ಮುಂದೆ ಕೆರೆಗೆ ನೀರು ಹರಿದು ಬರುವುದು ಅನುಮಾನ ಮೂಡಿಸಿದೆ.

ಜಿಲ್ಲೆಯ ಎರಡು ಉಪವಿಭಾಗಗಳಲ್ಲಿ ಬರುವ 30ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳ ವ್ಯಾಪ್ತಿಯ ರೈತರಲ್ಲಿ ಇದೇ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು.

ಭತ್ತ ನಾಟಿ ಮಾಡಿದ್ದೇವೆ. ಆದರೆ ಈ ಅವಾಂತರದಿಂದಾಗಿ ನೀರಿನ ಮಟ್ಟ ಕಡಿಮೆಯಾಗುವದರಿಂದ ನೀರು ಹರಿದು ಬರುವ ಬಗ್ಗೆ ಅನುಮಾನವಿದೆ.
ಹುಗ್ಗಿ ಬಸವರಾಜ, ವೆಂಕಟಾಪುರ ಗ್ರಾಮದ ರೈತ
ಈ ಏತ ನೀರಾವರಿ ಯೋಜನೆಯನ್ನೇ ನಂಬಿ ಬಿತ್ತಿಬೆಳೆದ ವ್ಯಾಪ್ತಿಯ ನೂರಾರು ರೈತರಲ್ಲಿ ಈಗಾಗಲೇ ಆತಂಕ ಮೂಡಿದೆ ಬೇಗ ಗೇಟ್ ಅಳವಡಿಸಿ ನೀರು ತುಂಬಲಿ.
ಅಯ್ಯನಹಳ್ಳಿ ಮಾಬು ಸಾಹೇಬ್, ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮರಿಯಮ್ಮನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT