ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಬುಕ್ಕಸಾಗರ ಕಡೆಬಾಗಿಲು ತುಂಗಭದ್ರಾ ಸೇತುವೆ ಸಮೀಪ ತಿರುವಿನಲ್ಲಿ ಶುಕ್ರವಾರ ಬೆಳಿಗ್ಗೆ ಬೈಕ್‌ಗೆ ಕ್ಯಾಂಟರ್ ಡಿಕ್ಕಿ ಹೊಡೆದುದರಿಂದ ಇಬ್ಬರು ಮೃತಪಟ್ಟಿದ್ದಾರೆ.
ತಾಲ್ಲೂಕಿನ ಪಿ.ಕೆ.ಹಳ್ಳಿಯವರಾದ ಶಂಕರ್ (26) ಸ್ಥಳದಲ್ಲೇ ಮೃತಪಟ್ಟರೆ, ಸುಂಕಪ್ಪ (28) ಹುಬ್ಬಳ್ಳಿಯ ಕಿಮ್ಸ್‌ಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳಿದಿದ್ದಾರೆ. ಕ್ಯಾಂಟರ್ ಚಾಲಕ ಬಳ್ಳಾರಿಯ ಬೋಯ ರುವೇಶ (31) ವಿರುದ್ಧ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್ ಕಮಲಾಪುರ ಕಡೆಯಿಂದ ಗಂಗಾವತಿ ಕಡೆಗೆ ಹಾಗೂ ಕ್ಯಾಂಟರ್ ಗಂಗಾವತಿ ಕಡೆಯಿಂದ ಕಮಲಾಪುರದತ್ತ ಬರುತ್ತಿತ್ತು. ಕ್ಯಾಂಟರ್ ಅನ್ನು ಅತಿ ವೇಗವಾಗಿ ಮತ್ತು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದ ಕಾರಣ ಅದು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಮಲಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.