ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮನ ಸೆಳೆಯುವ 'ನೆಲದ ನಕ್ಷತ್ರ' ಉಚ್ಚಂಗಿದುರ್ಗ

ಐತಿಹಾಸಿಕ ಕೋಟೆಯಲ್ಲಿ ನೆಲೆಸಿದ ಉಚ್ಚಂಗೆಮ್ಮ 
Published 11 ಏಪ್ರಿಲ್ 2024, 6:21 IST
Last Updated 11 ಏಪ್ರಿಲ್ 2024, 6:21 IST
ಅಕ್ಷರ ಗಾತ್ರ

ಅರಸೀಕೆರೆ (ಉಚ್ಚಂಗಿದುರ್ಗ): ಆಕಾಶದಲ್ಲಿ ಹೊಳೆಯುವ ನಕ್ಷತ್ರವಿದ್ದಂತೆ ಐತಿಹಾಸಿಕ ಕುರುಹುಗಳ ಪ್ರಾಕೃತಿಕ ಸೌಂದರ್ಯವನ್ನು ಒಡಲಲ್ಲಿಟ್ಟುಕೊಂಡು 'ನೆಲದ ನಕ್ಷತ್ರ' ಖ್ಯಾತಿ ಹೊಂದಿರುವ ಉಚ್ಚಂಗಿದುರ್ಗದ 'ಗ್ವಾಲಿಯರ್ ಕೋಟೆ' ಪ್ರವಾಸಿಗರ ಗಮನ ಸೆಳೆಯುವ ತಾಣವಾಗಿದೆ.

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗ, ಜಿಲ್ಲಾ ಕೇಂದ್ರ ಹೊಸಪೇಟೆಯಿಂದ ತುಸು ದೂರ ಎನಿಸಿದರೂ, ದಾವಣಗೆರೆ ಜಿಲ್ಲಾ ಕೇಂದ್ರದಿಂದ ಕೇವಲ 25 ಕಿಮೀ ದೂರದಲ್ಲಿದೆ. ಇಲ್ಲಿನ ಐತಿಹಾಸಿಕ ಬೆಟ್ಟ ಚಾರಣಪ್ರಿಯರನ್ನು ಸೆಳೆದರೆ, ಮಹಾಶಕ್ತಿ ಉಚ್ಚಂಗೆಮ್ಮ ದೇವಿ ಲಕ್ಷಾಂತರ ಮಂದಿ ಭಕ್ತರ ಧ್ರುವೀಕರಣಕ್ಕೂ ಸಾಕ್ಷಿಯಾಗಿದೆ.

ಉಚ್ಚಂಗಿದುರ್ಗದಲ್ಲಿ ಐತಿಹಾಸಿಕ ಬೃಹದಾಕಾರದ ಬೆಟ್ಟವೇ ಪ್ರಧಾನ ಆಕರ್ಷಣೆ. ಜೂನ್-ನವೆಂಬರ್ ತಿಂಗಳ ಅವಧಿಯಲ್ಲಿ ಇಡೀ ಬೆಟ್ಟ ಹಸಿರಿನಿಂದ ಕಂಗೊಳಿಸುವುದರಿಂದ ಪ್ರಕೃತಿಪ್ರಿಯರ ಭೇಟಿಗೆ ಪ್ರಸಕ್ತವಾಗಿರುತ್ತದೆ.

ಸುಮಾರು 600 ಅಡಿಗಳ ಎತ್ತರದಲ್ಲಿರುವ ಬೆಟ್ಟದ ಕಲ್ಲು ಬಂಡೆಗಳನ್ನು ಸುತ್ತುವರೆದ ಗ್ವಾಲಿಯರ್ ಮಾದರಿಯ ಕೋಟೆ, ರಾಜಗುರು ಪುರವರ್ಗ ಮಠ, ಅರಿಶಿಣ ಹೊಂಡದೊಂದಿಗೆ ಬೆಟ್ಟದ ತುದಿಯಲ್ಲಿರುವ ಶ್ರೀ ಉಚ್ಚಂಗೆಮ್ಮ ದೇವಿ ಬೃಹತ್ ದೇವಸ್ಥಾನ ಎತ್ತರವಾಗಿ ಮುಗಿಲಿಗೆ ಮುತ್ತಿಡುವಂತೆ ದೂರದಿಂದ ಗೋಚರಿಸುತ್ತದೆ.

ಬೆಟ್ಟದ ಪಶ್ಚಿಮ ಭಾಗದಲ್ಲಿ ಐತಿಹಾಸಿಕ ಹಾಲಮ್ಮ ದೇವಿ ನೆಲೆ, ಹಾಲಮ್ಮನ ತೋಪು ಇದ್ದು, ಪರಿಸರ ಪ್ರೇಮಿಗಳಿಗೆ ಆಕರ್ಷಣೆಯ ಕೇಂದ್ರವಾಗಿದೆ. ಬೃಹದಾಕಾರದ ನೂರಾರು ಮರಗಳು ಕಾಡಿನ ಅನುಭವ ನೀಡುತ್ತದೆ. ತೋಪಿನ ಕಡೆಯಿಂದ ನೋಡಿದರೆ ಎತ್ತರದ ಉಚ್ಚೆಂಗಿ ಬೆಟ್ಟ, ಮಲಗಿರುವ ಹೆಣ್ಣಿನ ಆಕಾರದಲ್ಲಿ ಗೋಚರಿಸುತ್ತದೆ.

ಉತ್ತರ-ದಕ್ಷಿಣಾಭಿಮುಖವಾಗಿ ಹಬ್ಬಿರುವ ಬೆಟ್ಟದಲ್ಲಿರುವ ಕೋಟೆಯನ್ನು ಪ್ರವೇಶಿಸುವ ದ್ವಾರವನ್ನು ಆನೆ ಬಾಗಿಲು ಎನ್ನುತ್ತಾರೆ. ವೀಕ್ಷಣೆಗೆ ರಾಣಿ ಅರಮನೆ, ರಾಜನ ಅರಮನೆ, ಹೊನ್ನೆಜರಿ, ಆನೆಹೊಂಡ, ಅರಿಶಿಣಹೊಂಡ, ಈಶ್ವರ ದೇವಸ್ಥಾನ, ಹಾಲಮ್ಮ ತೋಪು ಹೀಗೆ ಪುರಾತನ ದೇವಸ್ಥಾನಗಳು ನೋಡುಗರ ಕಣ್ಮನ ಸೆಳೆಯುತ್ತದೆ.

ಬೆಟ್ಟದ ನೆತ್ತಿಯಲ್ಲಿ ನೆಲೆಸಿರುವ ಉಚ್ಚಂಗೆಮ್ಮ ದೇವಿಗೆ ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ಹಾವೇರಿ, ಕೊಪ್ಪಳ, ಚಿತ್ರದುರ್ಗ ಜಿಲ್ಲೆಗಳ ಜೊತೆಗೆ ನೆರೆಯ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲೂ ಭಕ್ತ ಸಮೂಹ ಹೊಂದಿದೆ.

ಮಂಗಳವಾರ, ಶುಕ್ರವಾರ, ಹುಣ್ಣಿಮೆಗಳಲ್ಲಿ ಸಾವಿರಾರು ಭಕ್ತರು ದರ್ಶನಕ್ಕೆ ಬರುತ್ತಾರೆ. ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಚಂದ್ರಮಾನ ಯುಗಾದಿ ಅಂಗವಾಗಿ ವಾರಗಳ ಕಾಲ ನಡೆಯುವ ಜಾತ್ರೆಯು ನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ.

ರಾಜದುರ್ಗಮವಾದ ಬೆಟ್ಟದಲ್ಲಿ ಕೋಟೆ ನಿರ್ಮಿಸಿದ ಬನವಾಸಿ ಕದಂಬರು ಉತ್ತಂಗಿಯನ್ನು ಒಂದು ಶಾಖೆಯ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದ್ದಾರೆ. ಗಂಗರು‌, ರಾಷ್ಟ್ರಕೂಟರು, ನೊಳಂಬ, ಪಲ್ಲವರು, ಪಾಂಡ್ಯ ರಾಜರು ಸೇರಿದಂತೆ ಬ್ರಿಟಿಷರು ಆಳ್ವಿಕೆ ನಡೆಸಿರುವ ಐತಿಹ್ಯ ಇದೆ.

ಉಚ್ಚಂಗಿದುರ್ಗದ ಕೋಟೆ
ಉಚ್ಚಂಗಿದುರ್ಗದ ಕೋಟೆ
ಐತಿಹಾಸಿಕ ಕೋಟೆ ದೇವಸ್ಥಾನ ವೀಕ್ಷಣೆಗೆ ಲಕ್ಷಾಂತರ ಜನರು ಆಗಮಿಸುತ್ತಾರೆ. ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸಬೇಕು
ಮಡ್ರಳ್ಳಿ ಕೆಂಚಪ್ಪ ಉಚ್ಚಂಗಿದುರ್ಗ ನಿವಾಸಿ
ಇಲಾಖೆಯಿಂದ ಸಾಕಷ್ಟು ಅನುದಾನ ಲಭ್ಯವಿದೆ. ಕ್ರಿಯೆಯೋಜನೆಯನ್ನು ರೂಪಿಸಲಾಗಿದೆ. ಮಾದರಿ ತಾಣವಾಗಿ ರೂಪಿಸಲಾಗುವುದು
ಕೆ.ಮಲ್ಲಪ್ಪ ಕಾರ್ಯನಿರ್ವಾಹಕ ಅಧಿಕಾರಿ ಉತ್ಸವಾಂಬ ದೇವಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT