ಭಾನುವಾರ, ಜನವರಿ 16, 2022
28 °C
ಕನ್ನಡ ವಿ.ವಿ ಸಿಂಡಿಕೇಟ್‌ ಸಭೆ ; ಸಭೆಯ ಸ್ಥಳದಲ್ಲಿ ನೌಕರರ ಪ್ರವೇಶ ನಿಷೇಧ

ನೌಕರರ ದನಿ ಅಡಗಿಸಲು ಮುಂದಾಯಿತೇ ವಿ.ವಿ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯವು ತನ್ನ ನೌಕರರ ದನಿ ಅಡಗಿಸಲು ಮುಂದಾಯಿತೇ ಎಂಬ ಪ್ರಶ್ನೆ ಮೂಡಿದೆ.

ಸೋಮವಾರ (ಡಿ.6) ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಸಿಂಡಿಕೇಟ್‌ ಸಭೆ ನಡೆಯಲಿದೆ. ಸಭೆ ನಡೆಯಲಿರುವ ಸ್ಥಳದಲ್ಲಿ ಬೋಧಕ ಹಾಗೂ ಬೋಧಕೇತರ ನೌಕರರ ಪ್ರವೇಶವನ್ನು ನಿಷೇಧಿಸಿರುವುದೇ ಇಂಥದ್ದೊಂದು ಪ್ರಶ್ನೆ ಮೂಡಲು ಮುಖ್ಯ ಕಾರಣ.

ಬೋಧಕ ಹುದ್ದೆಗಳ ನೇಮಕಾತಿ ಕೈಬಿಡಬೇಕು. ಅರ್ಹರಿಗೆ ಬಡ್ತಿ ನೀಡಬೇಕು. ನಿವೃತ್ತರಿಗೆ ಪಿಂಚಣಿ ಕೊಡಬೇಕು. ಅರ್ಹ ನೌಕರರ ಪ್ರೊಬೇಷನರಿ ಅವಧಿ ಪೂರ್ಣಗೊಂಡಿದೆ ಎಂದು ಘೋಷಿಸುವುದು ಸೇರಿದಂತೆ 12 ಬೇಡಿಕೆಗಳನ್ನು ಈಡೇರಿಸಬೇಕೆಂದು ಅಧ್ಯಾಪಕರ ಸಂಘ ಹಾಗೂ ಬೋಧಕೇತರ ನೌಕರರ ಸಂಘದವರು ಆಗ್ರಹಿಸುತ್ತ ಬಂದಿದ್ದಾರೆ. ಇದಕ್ಕೆ ಸಂಬಂಧಿಸಿ ವಿಶ್ವವಿದ್ಯಾಲಯದ ಕುಲಸಚಿವರು ಹಿಂಬರಹ ಕೊಟ್ಟಿದ್ದಾರೆ. ಆದರೆ, ಅದಕ್ಕೆ ಸಂಘದವರು ಸಮಾಧಾನಗೊಂಡಿಲ್ಲ.

ಕುಲಸಚಿವರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿರುವ ಸಂಘದವರು ಎಲ್ಲ ಸಿಂಡಿಕೇಟ್‌ ಸದಸ್ಯರು, ಡೀನ್‌ಗಳನ್ನು ಭೇಟಿಯಾಗಿ ದಾಖಲೆಗಳನ್ನು ಸಲ್ಲಿಸಿ, ವಿವರಣೆ ನೀಡಲು ಮುಂದಾಗಿದ್ದಾರೆ. ಆದರೆ, ಸಭೆ ನಡೆಯಲಿರುವ ಸ್ಥಳದ ಕಡೆ ಅವರು ಸುಳಿಯದಂತೆ ಕುಲಸಚಿವ ಪ್ರೊ. ಎ.ಸುಬ್ಬಣ್ಣ ರೈ ಆದೇಶ ಹೊರಡಿಸಿದ್ದಾರೆ. ಸಭೆ ನಡೆಯಲಿರುವ ಸ್ಥಳದಲ್ಲಿ ಪೊಲೀಸ್‌ ಬಂದೋಬಸ್ತ್‌ಗೂ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.

ನ. 12ರಿಂದ ಇದುವರೆಗೆ ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ವಿವಿಧ ಪತ್ರಿಕೆಗಳು ಅನವಶ್ಯಕವಾಗಿ ಗೊಂದಲ ಸೃಷ್ಟಿಸುವ ವರದಿಗಳನ್ನು ಪ್ರಕಟಿಸಿದ್ದಾರೆ ಎಂದು ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಯತ್ನ ಕುಲಸಚಿವರು ಮಾಡಿದ್ದಾರೆ. ಆದರೆ, ಯಾವ ರೀತಿಯಲ್ಲಿ ಮಾಧ್ಯಮಗಳು ಗೊಂದಲ ಸೃಷ್ಟಿಸಿವೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿಲ್ಲ.

ಪಾರದರ್ಶಕವಾಗಿದ್ದರೆ ತಡೆಯುವುದೇಕೇ?: ವಿ.ವಿಯ ಆಡಳಿತವು ಪಾರದರ್ಶಕವಾಗಿದ್ದರೆ ನೌಕರರು, ಸಿಂಡಿಕೇಟ್‌ ಸದಸ್ಯರಿಗೆ ಅವರ ಕೋರಿಕೆ ಸಲ್ಲಿಸಲು ತಡೆಯುತ್ತಿರುವುದೇಕೇ ಎಂಬ ಪ್ರಶ್ನೆಯೂ ಮೂಡಿದೆ. ಸಿಂಡಿಕೇಟ್‌ ಸಭೆ ಇದ್ದದ್ದರಿಂದ ಸಂಘದವರು ಹಲವು ದಿನಗಳಿಂದ ದಾಖಲೆಗಳನ್ನು ಕಲೆ ಹಾಕಿದ್ದು, ಸಿಂಡಿಕೇಟ್‌ ಗಮನಕ್ಕೆ ತರಲು ಮುಂದಾಗಿದ್ದಾರೆ. ಇದನ್ನರಿತೇ ವಿ.ವಿ. ಅವರಿಗೆ ಅವಕಾಶ ಕೊಡದಿರಲು ನಿರಾಕರಿಸಿದೆ ಎಂದು ಗೊತ್ತಾಗಿದೆ.

17 ಬೋಧಕ ಹುದ್ದೆಗಳನ್ನು ತುಂಬಲೇಬೇಕೆಂದು ಜಿದ್ದಿಗೆ ಬಿದ್ದಂತಿರುವ ಆಡಳಿತವು, ಸಿಂಡಿಕೇಟ್‌ ಸಭೆಯಲ್ಲಿ ಅದಕ್ಕೆ ಒಪ್ಪಿಗೆ ಪಡೆದು ಇಡೀ ಪ್ರಕ್ರಿಯೆ ಪೂರ್ಣಗೊಳಿಸಲು ತೀವ್ರ ಕಸರತ್ತು ನಡೆಸಿದೆ. ಆದರೆ, ಸಿಂಡಿಕೇಟ್‌ನ ಕೆಲವು ಸದಸ್ಯರೇ ಈ ಕುರಿತು ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದು, ಹುದ್ದೆಗಳ ನೇಮಕ ಪ್ರಕ್ರಿಯೆ ತಡೆ ಹಿಡಿಯಬೇಕೆಂದು ಕೋರಿದ್ದಾರೆ. ₹40 ಲಕ್ಷದಿಂದ ₹50 ಲಕ್ಷಕ್ಕೆ ಬೋಧಕ ಹುದ್ದೆ ಮಾರಾಟ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದು ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಸೋಮವಾರ ನಡೆಯಲಿರುವ ಸಭೆ ಮಹತ್ವ ಪಡೆದುಕೊಂಡಿದೆ.

ಶೋಧನಾ ಸಮಿತಿಗೆ ಹೆಸರು: ಹಂಪಿ ಕನ್ನಡ ವಿ.ವಿ. ಹೊಸ ಕುಲಪತಿ ಆಯ್ಕೆಗಾಗಿ ಶೋಧನಾ ಸಮಿತಿ ರಚಿಸಲಾಗುತ್ತಿದ್ದು, ಅದಕ್ಕೆ ಒಬ್ಬರ ಹೆಸರು ಶಿಫಾರಸು ಮಾಡಬೇಕೆಂದು ಸರ್ಕಾರ ಸೂಚಿಸಿರುವುದರಿಂದ ಸೋಮವಾರದ (ನ.6) ಸಭೆಯಲ್ಲಿ ನಿರ್ಣಯ ಕೈಗೊಳ್ಳಬಹುದು. ವಿಶ್ರಾಂತ ಕುಲಪತಿಗಳಾದ ಮಲ್ಲೇಪುರಂ ಜಿ. ವೆಂಕಟೇಶ, ಪದ್ಮಾ ಶೇಖರ, ಅಂಬಳಿಕೆ ಹಿರಿಯಣ್ಣ, ಹಿ.ಚಿ. ಬೋರಲಿಂಗಯ್ಯನವರ ಹೆಸರು ಕೇಳಿ ಬರುತ್ತಿದ್ದು, ಇವರಲ್ಲಿ ಒಬ್ಬರ ಹೆಸರು ಕಳಿಸಿಕೊಡಬಹುದು ಎಂದು ಗೊತ್ತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು