ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: 20ರಂದು ವೆಂಕಯ್ಯ ನಾಯ್ಡು ಭೇಟಿ, ನಗರಕ್ಕೆ ಬಂದ ವಾಯುಸೇನೆ ಹೆಲಿಕಾಪ್ಟರ್‌

Last Updated 18 ಆಗಸ್ಟ್ 2021, 8:51 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಆ. 20ರಂದು ನಗರಕ್ಕೆ ಭೇಟಿ ನೀಡಲಿರುವುದರಿಂದ ವಾಯುಸೇನೆಯ ಹೆಲಿಕಾಪ್ಟರ್‌ ಇಲ್ಲಿನ ಮುನ್ಸಿಪಲ್‌ ಮೈದಾನಕ್ಕೆ ಬಂದಿಳಿದೆ.

ಮುನ್ಸಿಪಲ್‌ ಮೈದಾನದ ಒಳಾಂಗಣ ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಹೆಲಿಪ್ಯಾಡ್‌ ಇದೆ. ಆದರೆ, ಉಪರಾಷ್ಟ್ರಪತಿ ಭೇಟಿ ನಿಮಿತ್ತ ಮುನ್ಸಿಪಲ್‌ ಮೈದಾನದ ಮಧ್ಯ ಭಾಗದಲ್ಲಿ ಮತ್ತೊಂದು ತಾತ್ಕಾಲಿಕ ಹೆಲಿಪ್ಯಾಡ್‌ ನಿರ್ಮಿಸಲಾಗಿದೆ. ಮೈದಾನದ ಸುತ್ತ ಬ್ಯಾರಿಕೇಡ್‌ ಅಳವಡಿಸಲಾಗಿದ್ದು, ಯಾರೂ ಒಳ ಬರದಂತೆ ಭದ್ರತೆ ಕಲ್ಪಿಸಲಾಗಿದೆ.

ತಾತ್ಕಾಲಿಕವಾಗಿ ನಿರ್ಮಿಸಿರುವ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ಪೂರ್ವಾಭ್ಯಾಸ ಬುಧವಾರ ನಡೆಯಿತು. ಹಲವು ಸಲ ಹೆಲಿಕಾಪ್ಟರ್‌ ಹಾರಾಟ, ಲ್ಯಾಂಡಿಂಗ್‌ ನಡೆಯಿತು. ಹೀಗಾಗಿ ನಗರದ ಜನತೆಯ ಚಿತ್ತ ಆಕಾಶದತ್ತ ನೆಟ್ಟಿತ್ತು. ಹೆಲಿಕಾಪ್ಟರ್‌ ನೋಡಲು ಮೈದಾನದ ಸುತ್ತ ಜನ ಸೇರಿದ್ದರು. ಮೈದಾನದಲ್ಲಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್‌ ಎಚ್‌. ವಿಶ್ವನಾಥ್ ಬೀಡು ಬಿಟ್ಟಿದ್ದು, ಪ್ರತಿಯೊಂದನ್ನು ಪರಿಶೀಲಿಸುತ್ತಿದ್ದಾರೆ.

ವೆಂಕಯ್ಯ ನಾಯ್ಡು ಅವರು ಆ. 20ರಂದು ಸಂಜೆ 5ಕ್ಕೆ ವಾಯುಸೇನೆಯ ವಿಶೇಷ ಹೆಲಿಕಾಪ್ಟರ್‌ನಲ್ಲಿ ಕುಟುಂಬ ಸಮೇತ ನಗರದ ಮುನ್ಸಿಪಲ್‌ ಮೈದಾನಕ್ಕೆ ಬಂದಿಳಿಯುವರು. ಅಲ್ಲಿಂದ ನೇರವಾಗಿ ತುಂಗಭದ್ರಾ ಜಲಾಶಯಕ್ಕೆ ರಸ್ತೆ ಮಾರ್ಗವಾಗಿ ತೆರಳುವರು. ಬಳಿಕ ಹಂಪಿ–ಕಮಲಾಪುರ ಸಮೀಪದ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಮಯೂರ ಭುವನೇಶ್ವರಿ ಹೋಟೆಲ್‌ನಲ್ಲಿ ವಾಸ್ತವ್ಯ ಮಾಡುವರು.

ಆ. 21ರಂದು ಬೆಳಿಗ್ಗೆ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ ಕೊಡುವರು. ಬಳಿಕ ಹಂಪಿ ಸ್ಮಾರಕಗಳನ್ನು ವೀಕ್ಷಿಸುವರು. ರಾತ್ರಿ ಅಲ್ಲೇ ವಾಸ್ತವ್ಯ ಮಾಡಿ, ಮರುದಿನ ಬೆಳಿಗ್ಗೆ ಹುಬ್ಬಳ್ಳಿಗೆ ಪ್ರಯಾಣ ಬೆಳೆಸುವರು.

ಉಪರಾಷ್ಟ್ರಪತಿ ಕಚೇರಿಯ ಸಿಬ್ಬಂದಿಗೆ ಈಗಾಗಲೇ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಕೊಠಡಿಗಳನ್ನು ಮೀಸಲಿಡಲಾಗಿದೆ. ಹಂಪಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಸ್ವಚ್ಛತಾ ಕಾರ್ಯ ಭರದಿಂದ ನಡೆದಿದೆ. ವಿರೂಪಾಕ್ಷ ದೇವಸ್ಥಾನ, ಕಡಲೆಕಾಳು ಗಣಪ ಸ್ಮಾರಕದ ಬಳಿ ತಾತ್ಕಾಲಿಕವಾಗಿ ಕಟ್ಟಿಗೆಯಿಂದ ಮೆಟ್ಟಿಲು ನಿರ್ಮಿಸಲಾಗಿದೆ.

ವಾಯುಸೇನೆಯ ಸಿಬ್ಬಂದಿ
ವಾಯುಸೇನೆಯ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT