ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

Published 29 ಜನವರಿ 2024, 8:47 IST
Last Updated 29 ಜನವರಿ 2024, 8:47 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಮಂಡ್ಯ ಜಿಲ್ಲೆಯ ಕೆರೆಗೋಡಿನಲ್ಲಿ ಧ್ವಜಸ್ತಂಭದಿಂದ ಹನುಮ ಧ್ವಜವನ್ನು ಇಳಿಸಿದ ಸರ್ಕಾರದ ಕ್ರಮವನ್ನು ವಿರೋದಿಸಿ ಹಾಗೂ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ  ಲಾಠಿಚಾರ್ಜ್‌ ನಡೆಸಿದ ಪೊಲೀಸರ ಕ್ರಮವನ್ನು ವಿರೋಧಿಸಿ ಬಿಜೆಪಿ ವತಿಯಿಂದ ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ವೇಳೆ ರಾಜ್ಯ ಸರ್ಕಾರ ಹಿಂದೂ ವಿರೋಧಿ ಎಂದು ಆರೋಪಿಸಲಾಯಿತು ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾಯಿತು.

ಚನ್ನಬಸವನಗೌಡ ಮಾತನಾಡಿ, ‘ರಾಜ್ಯದಲ್ಲಿ ಶಾಂತಿಯುತ ವಾತಾವರಣ ನೆಲೆಸಿರುವಾಗ ಸರ್ಕಾರ ಕೋಮು ಭಾವನೆ ಕೆರಳಿಸುವಂತಹ ಕೆಲಸ ಮಾಡಿದೆ. ಹಿಂದೂಗಳನ್ನು ದಮನಿಸುವ ಸಲುವಾಗಿ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡಿದೆ. ಬಿಜೆಪಿ ಇದನ್ನು ಉಗ್ರವಾಗಿ ಖಂಡಿಸುತ್ತದೆ. ಸರ್ಕಾರ ತನ್ನ ಧೋರಣೆಯನ್ನು ಬದಲಿಸದಿದ್ದರೆ ರಾಜ್ಯದಾದ್ಯಂತ ಈ ಪ್ರತಿಭಟನೆ ತೀವ್ರಗೊಳ್ಳಲಿದೆ’ ಎಂದು ಎಚ್ಚರಿಸಿದರು.

ಪಕ್ಷದ ಯುವ ಮುಖಂಡ ಸಿದ್ಧಾರ್ಥ ಸಿಂಗ್‌ ಮಾತನಾಡಿ, ರಾಜ್ಯ  ಸರ್ಕಾರ ಹಿಂದೂಗಳ ಭಾವನೆಗಳನ್ನು ಹತ್ತಿಕ್ಕಲು ಯತ್ನಿಸುತ್ತಿದೆ, ಸಮಾಜದಲ್ಲಿ ಸಾಮರಸ್ಯದ ಬದಲಿಗೆ ಅಶಾಂತಿ ಮೂಡಿಸಲು ಹವಣಿಸುತ್ತಿರುವ ಸರ್ಕಾರದ ಧೋರಣೆ ಬದಲಾಗದಿದ್ದರೆ ಜನರೇ ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ರಾಜ್ಯ ಸರ್ಕಾರ ಒಂದು ಧರ್ಮದ ಪರವಾಗಿ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ರಾಷ್ಟ್ರಧ್ವಜವನ್ನು ಮಧ್ಯಾಹ್ನ 3 ಗಂಟೆಗೆ ಹಾರಿಸುವ ಮೂಲಕ ರಾಷ್ಟ್ರಧ್ವಜನಕ್ಕೆ ಅವಮಾನ ಮಾಡಲಾಗಿದೆ. ತಕ್ಷಣವೇ ಕೆರೆಗೋಡಿನಲ್ಲಿ ಮತ್ತೆ ಹನುಮ ಧ್ವಜ ಹಾರಿಸಬೇಕು. ಈ ಮೂಲಕ ಹಿಂದೂ ಸಮಾಜಕ್ಕೆ ಗೌರವ ಕೊಡುವ ರೀತಿ ರಾಜ್ಯ ಸರ್ಕಾರ ನಡೆದುಕೊಳ್ಳಬೇಕು ಎಂದು ಕೋರುವ ಮನವಿಯನ್ನು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಲಾಯಿತು.

ಪಕ್ಷದ ಮುಖಂಡರಾದ ಕಾಸೆಟ್ಟಿ ಉಮಾಪತಿ, ಸಾಲಿ ಸಿದ್ದಯ್ಯಸ್ವಾಮಿ, ಭೋಜಪ್ಪ, ಶಂಕರ ಮೇಟಿ, ಭಾರತಿ ಪಾಟೀಲ್‌, ಮಧುಸೂದನ, ಚಂದ್ರು, ಹೊನ್ನೂರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT