ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಜಿಲ್ಲೆ ವಿಭಜನೆ ಪ್ರತಿಷ್ಠೆ ಆಗದಿರಲಿ: ವಿ.ಎಸ್‌. ಉಗ್ರಪ್ಪ

Last Updated 26 ಫೆಬ್ರುವರಿ 2021, 14:17 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ‘ಅಖಂಡ ಬಳ್ಳಾರಿ ಜಿಲ್ಲೆ ವಿಭಜಿಸಿ ನೂತನ ವಿಜಯನಗರ ಜಿಲ್ಲೆ ಮಾಡಿರುವುದು ಪ್ರತಿಷ್ಠೆಯ ವಿಷಯ ಆಗದಿರಲಿ. ಅದರ ಅಭಿವೃದ್ಧಿಗೆ ಶ್ರಮಿಸುವುದು ಮುಖ್ಯ’ ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್‌. ಉಗ್ರಪ್ಪ ಹೇಳಿದರು.

‘ಸ್ವಾತಂತ್ರ್ಯ ಬಂದಾಗಿನಿಂದಲೂ ಬಳ್ಳಾರಿಗೆ ವಿಶೇಷ ಸ್ಥಾನ ಇದೆ. ಎಲ್ಲರೂ ಒಂದೇ ಕುಟುಂಬವಾಗಿ ಬಾಳಬೇಕು. ಎರಡು ಜಿಲ್ಲೆಗಳು ಎರಡು ಕಣ್ಣುಗಳಿದ್ದಂತೆ. ಜಿಲ್ಲೆ ಘೋಷಣೆಯಾದ ನಂತರ ಅದರ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಅಭಿವೃದ್ಧಿಗಾಗಿ ಸರ್ಕಾರ ಜಿಲ್ಲೆ ಮಾಡಿದೆ. ಆದರೆ, ಇನ್ನೊಂದು ಯಾದಗಿರಿ, ರಾಮನಗರ ಜಿಲ್ಲೆಗಳಂತೆ ಅಭಿವೃದ್ಧಿ ಆಗದೇ ಇರಬಾರದು. ಯಾರು ಕೂಡ ಈ ವಿಷಯವನ್ನು ಪ್ರತಿಷ್ಠೆಗೆ ತೆಗೆದುಕೊಳ್ಳಬಾರದು’ ಎಂದು ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲೆ ಘೋಷಣೆಯಾಗಿದೆ. ಈಗ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಬೇಕು. ತುಂಗಭದ್ರಾ ಜಲಾಶಯದ ಹೂಳು ತೆಗೆಸಬೇಕು. ಹೊಸ ಜಿಲ್ಲೆ ವ್ಯಾಪ್ತಿಯ ತಾಲ್ಲೂಕುಗಳಿಗೆ ಸದ್ಬಳಕೆ ಆಗಬೇಕು. ಪ್ರತಿ ವರ್ಷ ಅಪಾರ ನೀರು ನದಿ ಮೂಲಕ ಆಂಧ್ರಕ್ಕೆ ಹರಿದು ಹೋಗುತ್ತದೆ. ಹಂಪಿ ಅಭಿವೃದ್ಧಿ ಪಡಿಸಿ, ಮೂಲಸೌಕರ್ಯ ಕಲ್ಪಿಸಬೇಕು’ ಎಂದರು.

‘ಕಾಂಗ್ರೆಸ್‌ನಲ್ಲಿ ಯಾವುದೇ ವಿಧವಾದ ಗುಂಪುಗಾರಿಕೆ ಇಲ್ಲ. ಸಿದ್ದರಾಮಯ್ಯನವರು ಆಯುರ್ವೇದ ಚಿಕಿತ್ಸೆಗೆ ರೆಸಾರ್ಟ್‌ಗೆ ತೆರಳಿದ್ದರು. ನವದೆಹಲಿ ಪ್ರವಾಸ ಪೂರ್ವನಿಯೋಜಿತವಾಗಿತ್ತು’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಮುಖಂಡರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ಗುಜ್ಜಲ್‌ ನಾಗರಾಜ್‌, ನಿಂಬಗಲ್‌ ರಾಮಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT