ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಮೂರು ತಿಂಗಳ ಅವಧಿಯಲ್ಲಿ 2 ಹಂತದಲ್ಲಿ ಜಿಲ್ಲಾ ಕಚೇರಿ ಸ್ಥಾಪನೆ

Last Updated 6 ಜುಲೈ 2021, 9:37 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ನೂತನ ವಿಜಯನಗರ ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ಜಿಲ್ಲಾ ಕಚೇರಿಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಇಡೀ ಪ್ರಕ್ರಿಯೆ ಮುಗಿಯಲು ಮೂರು ತಿಂಗಳು ಬೇಕಾಗಬಹುದು’ ಎಂದು ವಿಶೇಷ ಅಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ತಿಳಿಸಿದರು.

ನಗರದ ತುಂಗಭದ್ರಾ ಸ್ಟೀಲ್‌ ಪ್ರಾಡಕ್ಟ್ಸ್‌ಗೆ (ಟಿಎಸ್‌ಪಿ) ಸೇರಿದ ಹಳೆಯ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಆರಂಭಿಸಲು ಉದ್ದೇಶಿಸಿರುವ ಜಿಲ್ಲಾ ಕಚೇರಿಯನ್ನು ಮಂಗಳವಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯ, ಹುದ್ದೆಗಳ ಸೃಜನೆ, ಜಿಲ್ಲಾ ಕಚೇರಿಗಳ ಕೆಲಸ ನಿರ್ವಹಣೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಈಗಾಗಲೇ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಎರಡು ಹಂತಗಳಲ್ಲಿ ಜಿಲ್ಲಾ ಕಚೇರಿಗಳನ್ನು ಸ್ಥಾಪಿಸಿ, ಅದರ ಪ್ರಕಾರ ಸಿಬ್ಬಂದಿ ನಿಯೋಜನೆ ಮಾಡಬೇಕೆಂದು ಸಲಹೆ ನೀಡಿದ್ದಾರೆ. ಅವರ ನಿರ್ದೇಶನದಂತೆ ಪ್ರಸ್ತಾವ ಸಿದ್ಧಪಡಿಸಿ ಇಷ್ಟರಲ್ಲೇ ಕಳುಹಿಸಿಕೊಡಲಾಗುವುದು. ಈ ತಿಂಗಳೊಳಗೆ ಅನುಮೋದನೆ ಸಿಗಬಹುದು’ ಎಂದು ಭರವಸೆ ವ್ಯಕ್ತಪಡಿಸಿದರು.

‘ಸರ್ಕಾರ ಈಗಾಗಲೇ ವಿಜಯನಗರವನ್ನು ಕಂದಾಯ ಜಿಲ್ಲೆಯಾಗಿ ಘೋಷಿಸಿದೆ. ಗಡಿಗಳನ್ನು ಗುರುತಿಸಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗಳು ಅಸ್ತಿತ್ವಕ್ಕೆ ಬಂದ ನಂತರ, ಅಲ್ಲಿ ಸಿಬ್ಬಂದಿ ಬೇಕಾಗುತ್ತದೆ. ಕಂದಾಯ ಇಲಾಖೆಗೆ ಶಿರಸ್ತೇದಾರರನ್ನು ಪ್ರಾದೇಶಿಕ ಆಯುಕ್ತರೇ ನೇಮಕ ಮಾಡುತ್ತಾರೆ. ಆದರೆ, ಇತರೆ ಕಚೇರಿಗಳಲ್ಲಿ ತಕ್ಷಣವೇ ಅಧಿಕಾರಿಗಳು, ಸಿಬ್ಬಂದಿ ನೇಮಕಾತಿ ಆಗುವುದಿಲ್ಲ. ಇರುವ ಸಿಬ್ಬಂದಿಯನ್ನೇ ಹಂಚಿಕೆ ಮಾಡಬೇಕಾಗುತ್ತದೆ’ ಎಂದರು.

‘39ರಿಂದ 40 ಇಲಾಖೆಗಳಿಗೆ ಹೈದರಾಬಾದ್‌ ಕರ್ನಾಟಕ 371 (ಜೆ) ಅಡಿ ಅಧಿಕಾರಿ, ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕಾಗುತ್ತದೆ. ಕೆಲವು ಇಲಾಖೆಗಳಲ್ಲಿ ಅನೇಕ ಸಣ್ಣ ಸಣ್ಣ ಕಚೇರಿಗಳು ಬರುತ್ತವೆ. ಅದಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 65ರಿಂದ 70 ಕಚೇರಿಗಳನ್ನು ಸ್ಥಾಪಿಸಬೇಕಾಗುತ್ತದೆ. ಜಿಲ್ಲಾ ಆಸ್ಪತ್ರೆ, ಪೊಲೀಸ್‌ ಇಲಾಖೆಗೆ 300ಕ್ಕಿಂತ ಹೆಚ್ಚು ಸಿಬ್ಬಂದಿ ಬೇಕಾಗುತ್ತದೆ. ಇದಕ್ಕಾಗಿ ಹೆಚ್ಚಿನ ಕಾಲಾವಕಾಶ ಬೇಕು’ ಎಂದು ಹೇಳಿದರು.

‘ಜಿಲ್ಲಾ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ಟಿಎಸ್‌ಪಿ ಕಟ್ಟಡದ ನವೀಕರಣಕ್ಕೆ ಜಿಲ್ಲಾ ಖನಿಜ ನಿಧಿಯಿಂದ ಅನುದಾನ ಬಿಡುಗಡೆಗೆ ಕೋರಲಾಗಿದ್ದು, ಒಂದು ವಾರದೊಳಗೆ ಬಳ್ಳಾರಿ ಜಿಲ್ಲಾಧಿಕಾರಿ ಅನುಮೋದನೆ ಕೊಡುವ ಭರವಸೆ ಇದೆ. ಅನುದಾನ ಬಂದ ತಕ್ಷಣವೇ ಕೆಲಸ ಆರಂಭಿಸಲಾಗುವುದು’ ಎಂದು ವಿವರಿಸಿದರು.

‘ತಾತ್ಕಾಲಿಕವಾಗಿ ಟಿಎಸ್‌ಪಿಯಲ್ಲಿ ಕೆಲ ಇಲಾಖೆಗಳ ಕಚೇರಿ ಆರಂಭಿಸಲಾಗುವುದು. ಅದಕ್ಕಾಗಿ ಲೋಕೋಪಯೋಗಿ ಇಲಾಖೆಯವರು ಕೆಲಸ ನಿರ್ವಹಿಸುತ್ತಿದ್ದಾರೆ. ಎಲ್ಲಿ ಯಾವ ಕಚೇರಿ ಆರಂಭಿಸಬೇಕು. ಯಾವ ಇಲಾಖೆಯ ನೂತನ ಕಟ್ಟಡ ಎಲ್ಲಿ ಕಟ್ಟಬೇಕು ಎನ್ನುವುದರ ಬಗ್ಗೆ ಪ್ರಾಥಮಿಕ ಹಂತದ ಪರಿಶೀಲನೆ ನಡೆಸಲಾಗಿದೆ. ಅಷ್ಟೇ ಅಲ್ಲ, ಕಟ್ಟಡ ನಿರ್ಮಾಣ ಯಾವಾಗ ಪೂರ್ಣಗೊಳಿಸಲಾಗುವುದು ಎನ್ನುವುದರ ಅಂದಾಜು ಮಾಹಿತಿಯೊಂದಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದರು.

‘ಕಚೇರಿಗಳ ಆರಂಭಕ್ಕೆ ಇತ್ತೀಚೆಗೆ ಬಾಡಿಗೆ ಕಟ್ಟಡಕ್ಕೆ ಟೆಂಡರ್‌ ಕರೆಯಲಾಗಿತ್ತು. ಆರು ಜನ ಮುಂದೆ ಬಂದಿದ್ದಾರೆ. ನಗರಸಭೆ, ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿದ್ದಾರೆ. ಎರಡು ಕಟ್ಟಡಗಳು ನಗರದ ಮಧ್ಯ ಭಾಗದಲ್ಲಿದ್ದು, ಅವುಗಳನ್ನು ಬಾಡಿಗೆಗೆ ಪಡೆಯಲು ಚಿಂತನೆ ನಡೆದಿದೆ. ಇನ್ನು, ಬಿಎಸ್‌ಎನ್‌ಎಲ್‌ ಹಳೆಯ ಕಟ್ಟಡ ಉತ್ತಮವಾಗಿದ್ದು, ಅದನ್ನು ಸುಪರ್ದಿಗೆ ಪಡೆದು, ಯಾವ ಕಚೇರಿ ಆರಂಭಿಸಬೇಕು ಎನ್ನುವುದರ ಬಗ್ಗೆ ಇನ್ನಷ್ಟೇ ತೀರ್ಮಾನ ತೆಗೆದುಕೊಳ್ಳಬೇಕಿದೆ. ಮೊದಲ ಹಂತದಲ್ಲಿ ₹68 ಕೋಟಿ ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಕೋರಲಾಗಿದೆ’ ಎಂದು ಮಾಹಿತಿ ನೀಡಿದರು.

ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ಕಂದಾಯ ಅಧಿಕಾರಿ ಮಲ್ಲಿಕಾರ್ಜುನಗೌಡ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಿಶೋರ್‌, ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಸೈಯದ್‌ ಮನ್ಸೂರ್‌ ಅಹಮ್ಮದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT