ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಗ್ನಿಪಥ’ ಹೆಸರಲ್ಲಿ ಸೇನೆ ಕೇಸರಿಕರಣ: ವಿ.ಎಸ್‌. ಉಗ್ರಪ್ಪ ಗಂಭೀರ ಆರೋಪ

Last Updated 19 ಜೂನ್ 2022, 7:45 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಅಗ್ನಿಪಥ ಯೋಜನೆಯ ಹೆಸರಿನಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಭಾರತೀಯ ಸೇನೆಯನ್ನು ಕೇಸರೀಕರಣಗೊಳಿಸುವ ಹುನ್ನಾರ ನಡೆಸಿದೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌. ಉಗ್ರಪ್ಪ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನಿಂದಲೂ ಪ್ರತಿ ವರ್ಷ 50,000 ಯುವಕರನ್ನು ಸೈನ್ಯಕ್ಕೆ ಭರ್ತಿ ಮಾಡಲಾಗುತ್ತಿದೆ. ಈಗ ಇದ್ದಕ್ಕಿದ್ದಂತೆ 46,000 ‘ಅಗ್ನಿವೀರರ’ ನೇಮಕ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. 17ರಿಂದ 23 ವರ್ಷ, ಯುವಕರ ವಯಸ್ಸಿನಲ್ಲಿ ಬಹಳ ಮಹತ್ವದ್ದು. ಅತ್ತ ಯುವಕರು ಓದು ಪೂರ್ಣಗೊಳಿಸಲು ಆಗದು. ಇನ್ನೊಂದೆಡೆ ನಾಲ್ಕು ವರ್ಷ ಸೈನ್ಯದಲ್ಲಿ ಕೆಲಸ ನಿರ್ವಹಿಸಿದ ನಂತರ ಮುಂದೇನು ಮಾಡಬೇಕು? ಯುವಕ/ಯುವತಿಯರನ್ನು ಅತಂತ್ರಗೊಳಿಸಿ, ಅವರ ಭವಿಷ್ಯ ಹಾಳು ಮಾಡುವುದು ಸರಿಯಲ್ಲ ಎಂದರು.

ಪ್ರತಿ ವರ್ಷ 20 ಲಕ್ಷ ಯುವಕರು ಪದವಿ ಪೂರ್ಣಗೊಳಿಸಿದರೆ 5 ಲಕ್ಷ ಮಂದಿ ಸ್ನಾತಕೋತ್ತರ ಪದವಿ ಮುಗಿಸುತ್ತಾರೆ. ಮೂರೂ ಸೇನಾ ಪಡೆಗಳಲ್ಲಿ ಒಟ್ಟು 46,000 ಯುವಕರಿಗೆ ನಾಲ್ಕು ವರ್ಷ ಉದ್ಯೋಗ ಕೊಟ್ಟರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ವಿದೇಶಗಳಲ್ಲಿ ಕಾಲೇಜು ಶಿಕ್ಷಣದ ಜೊತೆಗೆ ಸೈನ್ಯ ತರಬೇತಿ ನೀಡಲಾಗುತ್ತದೆ. ಆದರೆ, ನಮ್ಮ ದೇಶದಲ್ಲಿ ಜಾರಿಗೆ ತರಲು ಹೊರಟಿರುವ ‘ಅಗ್ನಿಪಥ’ದಿಂದ ಶಿಕ್ಷಣ ಅರ್ಧಕ್ಕೆ ಮೊಟಕುಗೊಳ್ಳುತ್ತದೆ. ನಾಲ್ಕು ವರ್ಷ ಸೈನ್ಯದಲ್ಲಿ ಕೆಲಸ ನಿರ್ವಹಿಸಿದ ನಂತರ ಮುಂದೇನು? ಎಂಬ ಪ್ರಶ್ನೆ ಮೂಡುತ್ತದೆ ಎಂದು ಹೇಳಿದರು.

ದೇಶದಲ್ಲಿ ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮುನ್ನ ಸರ್ಕಾರ ಸಂಸತ್ತಿನಲ್ಲಿ ಅದರ ಬಗ್ಗೆ ಚರ್ಚಿಸಬೇಕು. ತಜ್ಞರ ಅಭಿಪ್ರಾಯ ಪಡೆದುಕೊಳ್ಳಬೇಕು. ಸರ್ವಪಕ್ಷಗಳ ಸಭೆ ಕರೆದು ಸಮಾಲೋಚಿಸಬೇಕು. ಅದ್ಯಾವುದನ್ನೂ ಮಾಡದೇ ಕೇಂದ್ರ ಸರ್ಕಾರ ‘ಅಗ್ನಿಪಥ’ ಯೋಜನೆ ಜಾರಿಗೆ ತರಲು ಹೊರಟಿದೆ. ಈಗಾಗಲೇ ದೇಶದಾದ್ಯಂತ ಯುವಕರು ಹಿಂಸಾತ್ಮಕ ಚಳವಳಿ ನಡೆಸುತ್ತಿದ್ದಾರೆ. ಆದರೆ, ಯುವಕರು ಹಿಂಸೆ ತೊರೆದು ಅಹಿಂಸೆಯ ಮಾರ್ಗದಲ್ಲಿ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಹೋರಾಟ ನಡೆಸಬೇಕು ಎಂದು ತಿಳಿಸಿದರು.

ಇಡೀ ಜಗತ್ತಿನಲ್ಲಿ ಅತ್ಯಂತ ಶಿಸ್ತುಬದ್ಧ ಸೈನ್ಯ ವ್ಯವಸ್ಥೆ ಇರುವುದು ಭಾರತದಲ್ಲಿ. ಅದರ ಘನತೆಗೆ ಬಿಜೆಪಿ ಕುಂದು ತರುವ ಪ್ರಯತ್ನ ನಡೆಸಿದೆ. ಇದು ರಾಷ್ಟ್ರವಿರೋಧಿ ಕೃತ್ಯ. ಬಿಜೆಪಿಯವರು ದೇಶಭಕ್ತರಲ್ಲ. ಬ್ರಿಟಿಷರ ಅವಧಿಯಲ್ಲಿ ಬ್ರಿಟಿಷರ ಜೊತೆ ಸೇರಿಕೊಂಡಿದ್ದರು. ಈಗ ಅಧಿಕಾರಕ್ಕೆ ಬಂದ ನಂತರ ಸಮಾಜ ಒಡೆದು ಆಳುತ್ತಿದ್ದಾರೆ ಎಂದು ಟೀಕಿಸಿದರು.

ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡುವುದಾಗಿ ಮೋದಿ ಭರವಸೆ ನೀಡಿದ್ದರು. ಆದರೆ, ಏಳು ವರ್ಷಗಳಲ್ಲಿ 44,483 ಹುದ್ದೆಗಳನ್ನಷ್ಟೇ ತುಂಬಿದ್ದಾರೆ. ಇವರ ಅಧಿಕಾರದ ಅವಧಿಯಲ್ಲಿ ದೇಶದಲ್ಲಿ ಬಡತನ, ನಿರುದ್ಯೋಗ ಪ್ರಮಾಣ ಮಿತಿ ಮೀರಿದೆ. ಇದರ ವಿರುದ್ಧ ಸ್ವತಃ ಬಿಜೆಪಿಯ ಮುಖಂಡರಾದ ಸುಬ್ರಮಣಿಯನ್‌ ಸ್ವಾಮಿ, ವರುಣ್‌ ಗಾಂಧಿ ಕಿಡಿಕಾರಿದ್ದಾರೆ. ದೇಶದ ಸೌಹಾರ್ದತೆ ಹಾಳುಗೆಡವಿದ್ದಾರೆ. ಭ್ರಷ್ಟಾಚಾರ ಮಿತಿ ಮೀರಿದೆ. ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದು ಮೋದಿಯವರ ಕೊಡುಗೆ ಎಂದು ಟೀಕಿಸಿದರು.

ಯಾರೇ ಮತೀಯವಾದಿಗಳಿದ್ದರೂ ಅವರ ವಿರುದ್ಧ ಧ್ವನಿ ಎತ್ತುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಆ ಕೆಲಸವನ್ನೇ ನಟಿ ಸಾಯಿ ಪಲ್ಲವಿ ಮಾಡಿದ್ದಾರೆ. ಆದರೆ, ಕೆಲ ಮತಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಮುಗಿ ಬಿದ್ದಿರುವುದು ಸರಿಯಲ್ಲ. ಇದು ಖಂಡನಾರ್ಹ. ಆರ್‌ಎಸ್‌ಎಸ್‌ನವರು ಮೊದಲಿನಿಂದಲೂ ಸ್ತ್ರೀ ದ್ವೇಷಿಗಳು ಎಂದು ಟೀಕಿಸಿದರು.

ಕಾಂಗ್ರೆಸ್‌ ಮುಖಂಡರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ವೀರಭದ್ರ ನಾಯಕ, ಪಾಂಡುರಂಗ, ಸುರೇಶ ಇದ್ದರು.

*
ಜೈ ಜವಾನ್‌, ಜೈ ಕಿಸಾನ್‌ ಕಾಂಗ್ರೆಸ್‌ ಪಕ್ಷದ ಘೋಷವಾಕ್ಯ. ಆದರೆ, ಬಿಜೆಪಿಯಿಂದ ಈ ದೇಶದ ರೈತರು, ಸೈನಿಕರಿಗೆ ದೊಡ್ಡ ಪೆಟ್ಟಾಗಿದೆ.
–ವಿ.ಎಸ್‌. ಉಗ್ರಪ್ಪ, ಕೆಪಿಸಿಸಿ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT