ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ತಮ್ಮ ಟ್ಯಾಂಕರ್‌ಗೆ ನೀರು ಕೊಡಲು ನಿರಾಕರಣೆ: ಶಾಸಕರ ವಿರುದ್ಧ ಆನಂದ್ ಸಿಂಗ್‌ ಹೋರಾಟ

ಹೊಸಪೇಟೆಯಲ್ಲಿ ನೀರಿಗಾಗಿ ‘ಹೈಡ್ರಾಮಾ’
Published 26 ಮೇ 2024, 11:21 IST
Last Updated 26 ಮೇ 2024, 11:21 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಮಾಜಿ ಸಚಿವ ಆನಂದ್ ಸಿಂಗ್ ಅವರಿಗೆ ಸೇರಿದ ಎರಡು ಟ್ಯಾಂಕರ್‌ಗಳಿಗೆ ನೀರು ಕೊಡಲು ನಗರಸಭೆ ಭಾನುವಾರ ನಿರಾಕರಿಸಿದ್ದರಿಂದ ಅರ್ಧ ದಿನ ಇಲ್ಲಿ ನೀರಿನ ‘ಹೈಡ್ರಾಮಾ’ ನಡೆಯಿತು. 

‘ನಾನು 2004ರಿಂದಲೂ ಉಚಿತವಾಗಿ ನೀರು ಪೂರೈಸುವ ಜನಸೇವೆ ಮಾಡುತ್ತ ಬಂದಿದ್ದೇನೆ. ಇದೀಗ ಶಾಸಕ ಎಚ್‌.ಆರ್.ಗವಿಯಪ್ಪ ಅವರು ನೀರು ಕೊಡದಂತೆ ರಾಜಕೀಯ ಮಾಡುತ್ತಿದ್ದಾರೆ’ ಎಂದು ನೇರವಾಗಿ ಆರೋಪಿಸಿದ ಆನಂದ್ ಸಿಂಗ್, ಚಿತ್ತವಾಡ್ಗಿಯ ನೀರು ಪೂರೈಕೆ ಟ್ಯಾಂಕ್ ಸಮೀಪ ರಸ್ತೆಯಲ್ಲೇ ಧರಣಿ ಕುಳಿತರು.

ಸುಮಾರು ಎರಡು ಗಂಟೆಗಳ ಕಾಲ ನಡೆದ ಧರಣಿ ಮತ್ತು ಪ್ರತಿಭಟನೆಯ ಕೊನೆಯಲ್ಲಿ ಆಯುಕ್ತ ಚಂದ್ರಪ್ಪ ಅವರು ಸೋಮವಾರ ನಗರಸಭೆಯಲ್ಲಿ ಈ ವಿಷಯ ಮಂಡಿಸಿ, ಒಪ್ಪಿಗೆ ಪಡೆದು, ಮೇಲಧಿಕಾರಿಗಳ ಅನುಮತಿ ಮೇರೆಗೆ ನೀರು ಕೊಡುವ ನಿರ್ಧಾರ ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೊನೆಗೊಂಡಿತು.

ಖಾಸಗಿಯವರಿಗೆ ನೀರು  ಕೊಡಲು ಅವಕಾಶ ಇಲ್ಲ: ’ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ 8ರಿಂದ 10 ವಾರ್ಡ್‌ಗಳಲ್ಲಿ ನೀರು ಪೂರೈಕೆಯಲ್ಲಿ ಸಮಸ್ಯೆ ಇದೆ. ಅಲ್ಲಿಗೆ ಪ್ರತಿದಿನ 36 ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ. ಆರು ಖಾಸಗಿ ಟ್ಯಾಂಕರ್‌ ಮಾಲೀಕರನ್ನು ಟೆಂಡರ್‌ನಲ್ಲಿ ಗುಗುರುತಿಸಿಕೊಂಡು ಅವರಿಂದ ನೀರು ಪೂರೈಕೆ ಮಾಡಿಸಲಾಗುತ್ತಿದೆ. ನಗರಸಭೆಯ ಎರಡು ಟ್ಯಾಂಕರ್‌ಗಳಿವೆ. ಅವುಗಳೂ ನೀರು ಪೂರೈಸುತ್ತಿವೆ. ಆದರೆ ಖಾಸಗಿಯವರಿಗೆ ನಗರಸಭೆಯ ನೀರು ನೀಡುವುದಕ್ಕ ಅವಕಾಶ ಇಲ್ಲ. ಅದನ್ನು ಇಲ್ಲಿ ಭಾನುವಾರದಿಂದ ಜಾರಿಗೆ ತರಲಾಗಿದೆ ಅಷ್ಟೇ’ ಎಂದು ಆಯುಕ್ತ ಚಂದ್ರಪ್ಪ ಸ್ಪಷ್ಟಪಡಿಸಿದರು.

’ನಗರಸಭೆ ವ್ಯಾಪ್ತಿಯಿಂದ ಪಡೆದ ನೀರನ್ನು ಗ್ರಾಮಾಂತರ ಪ್ರದೇಶಗಳಿಗೆ ಸಾಗಿಸುತ್ತಿರುವ ಆರೋಪವೂ ಕೇಳಿಬಂದಿದೆ. ಇದಕ್ಕೆಲ್ಲ ಅವಕಾಶ ಇಲ್ಲ’ ಎಂದೂ ಅವರು ಹೇಳಿದರು.

ಆದರೆ ಈ ಹೇಳಿಕೆಯನ್ನು ಒಪ್ಪುವ ಸ್ಥಿತಿಯಲ್ಲಿ ಆನಂದ್ ಸಿಂಗ್ ಇರಲಿಲ್ಲ. ‘ಶಾಸಕರು ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನನ್ನ ವಾಹನ, ನನ್ನ ಡೀಸೆಲ್‌, ಅದರಲ್ಲಿ ನಾನು ಜನರಿಗೆ ನೀರು ಪೂರೈಸಿದರೆ ಇವರಿಗೇನು ನಷ್ಟ? ಈ ಹಿಂದೆ ನಾನು ಶಾಸಕನಾಗಿದ್ದೆ, ಸಚಿವನಾಗಿದ್ದೆ. ಆಗ ಗವಿಯಪ್ಪ ಅವರೂ ನೀರು ವಿತರಿಸುತ್ತಿದ್ದರು. ಅದನ್ನು ನಾನು ತಡೆದಿದ್ದೇನೆಯೇ?’ ಎಂದು ಪ್ರಶ್ನಿಸಿದ ಆನಂದ್ ಸಿಂಗ್ ಪಕ್ಷಾತೀತವಾಗಿ ಹಾಜರಿದ್ದ ನಗರಸಭೆಯ ಬಹುತೇಕ ಸದಸ್ಯರ ಜತೆಗೆ ಧರಣಿ ಕುಳಿತರು.

‘ನಗರದೊಳಗೆ ಮಾತ್ರವಲ್ಲ, ಹೊಸೂರಿನಂತಹ ಗ್ರಾಮೀಣ ಪ್ರದೇಶಗಳಲ್ಲೂ ಆನಂದ್ ಸಿಂಗ್ ಅವರ ಟ್ಯಾಂಕರ್‌ಗೆ ನೀರು ಕೊಡದಂತೆ ಅಲ್ಲಿಯ ಸ್ಥಳೀಯ ಆಡಳಿತಕ್ಕೆ ಸೂಚನೆ ಹೋಗಿದೆ. ಇದು ದ್ವೇಷದ ರಾಜಕೀಯವಲ್ಲದೆ ಮತ್ತೇನು?’ ಎಂದು ಅವರು ಪ್ರಶ್ನಿಸಿದರು.

ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವ ತನಕ ಸ್ಥಳದಿಂದ ಕದಲುವುದಿಲ್ಲ ಎಂದು ಆನಂದ್ ಸಿಂಗ್ ಪಟ್ಟು ಹಿಡಿದರು. ಕೊನೆಗೆ ಆಯುಕ್ತರು, ನಗರಸಭೆ ಅಧ್ಯಕ್ಷೆ ಲತಾ, ಹಲವು ಸದಸ್ಯರು, ಶಾಸಕರು ಹಾಗೂ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ, ಸೋಮವಾರ ನಗರಸಭೆಯಲ್ಲಿ ಆನಂದ್ ಸಿಂಗ್ ಅವರ ಎರಡು ಟ್ಯಾಂಕರ್‌ಗಳಿಗೆ ನೀರು ಪೂರೈಸುವ ವಿಷಯ ಮಂಡಿಸಿ, ಒಪ್ಪಿಗೆ ಪಡೆಯುವ ಭರವಸೆ ನೀಡಿದರು.

ಹೋರಾಟ ನಿಶ್ಚಿತ: ಪ್ರತಿಭಟನೆಗೆ ಯಶಸ್ಸು ದೊರೆತ ಬಳಿಕ ಮಾತನಾಡಿದ ಆನಂದ್ ಸಿಂಗ್, ‘ಶಾಸಕ ಗವಿಯಪ್ವ ಅವರು 15 ವರ್ಷ ಮಾತನಾಡದೆ ಸುಮ್ಮನಿದ್ದರು ಎಂಬ ಕಾರಣಕ್ಕೆ ನಾನೂ ಅವರಂತೆಯೇ ಮಾತನಾಡದೆ ಸುಮ್ಮನಿರಲು ಸಾಧ್ಯವಿಲ್ಲ. ಒಂದು ವರ್ಷ ಸುಮ್ಮನಿದ್ದೆ. ಇನ್ನು ಮುಂದೆ ಅವರ ಕಾರ್ಯವೈಖರಿಯನ್ನು ಟೀಕಿಸುವುದು ನಿಶ್ಚಿತ’ ಎಂದರು.

‘ಸರ್ಕಾರ ಇದೆ, ನಿಮಗ್ಯಾಗೆ ಉಸಾಬರಿ?’

‘ನಗರದಲ್ಲಿ ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೋ, ಅಲ್ಲಿಗೆ ನೀರು ಪೂರೈಸುವ ವ್ಯವಸ್ಥೆಯನ್ನು ನಗರಸಭೆ, ಜಿಲ್ಲಾಡಳಿತ ಮಾಡುತ್ತದೆ. ನಿಮಗ್ಯಾಕೆ ಉಸಾಬರಿ? ನೀವು 15 ವರ್ಷ ಅಧಿಕಾರ ಚಲಾಯಿಸಿದ ಬಳಿಕವೂ ನಿಮ್ಮ ಟ್ಯಾಂಕರ್‌ನಲ್ಲಿ ನೀರು ಪೂರೈಸುತ್ತೀದ್ದೀರಿ ಎಂದರೆ ನೀವು ಸರಿಯಾದ ಕುಡಿಯುವ ವ್ಯವಸ್ಥೆ ಮಾಡಿಲ್ಲ ಎಂದೇ ಅರ್ಥ’ ಎಂದು ಶಾಸಕ ಎಚ್‌.ಆರ್.ಗವಿಯಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನೀವು ನೀರು ಪೂರೈಸಿದ್ದು ಸಾಕು, ಸರ್ಕಾರವೇ ಅದನ್ನು ಮಾಡುತ್ತದೆ ಎಂಬ ಕಾರಣಕ್ಕೇ ಅವರಿಗೆ ನೀರು ಬಿಡುವುದು ಬೇಡ ಎಂದು ತಿಳಿಸಲಾಗಿತ್ತು. ಇದರಲ್ಲಿ ರಾಜಕೀಯ ಏನೂ ಇಲ್ಲ. ನಾನು ಹಿಂದೆ ಜಾತ್ರೆಯ ಸಮಯದಲ್ಲಿ ಮಾತ್ರ ನೀರು ಕೊಡುವ ವ್ಯವಸ್ಥೆ ಮಾಡುತ್ತಿದ್ದೆ. ಆನಂದ್ ಸಿಂಗ್ ಅವರು ನೀರಿನ ವಿಚಾರದಲ್ಲಿ ಹೈಡ್ರಾಮಾ ಮಾಡಬೇಕು ಎಂಬ ಸಲುವಾಗಿಯೇ ಬೀದಿಗಳಿದಿದ್ದಾರೆ’ ಎಂದು ಅವರು ದೂರಿದರು.

‘ಹೊಸೂರು ಸಹಿತ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳಲ್ಲಿ ಇದೀಗ ಜಿಂದಾಲ್‌ ಕಂಪನಿಯ ನೆರವು ಪಡೆದು ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮನೆಮನೆಗೆ ಪೈಪ್‌ಲೈನ್ ಹಾಕಿಸಲಾಗುತ್ತಿದೆ. ಬಹುತೇಕ ಈ ಕೆಲಸ ಮುಗಿಯುವ ಹಂತಕ್ಕೆ ಬಂದಿದೆ. ಇದು ನಾನು ಒಂದು ವರ್ಷದಲ್ಲಿ ಮಾಡಿದಂತಹ ಕೆಲಸ. ಇಷ್ಟಾದ ಮೇಲೂ ಅಲ್ಲಿಗೆ ಖಾಸಗಿ ಟ್ಯಾಂಕರ್ ನೀರು ಪೂರೈಸುವ ಅಗತ್ಯ ಏನಿದೆ? ಅಲ್ಲಿ ಸಮಸ್ಯೆ ಇದ್ದ ಕಡೆ ಗ್ರಾಮ ಪಂಚಾಯಿತಿಗಳಿಂದಲೇ ನೀರು ಪೂರೈಸಲಾಗುತ್ತಿದೆ’ ಎಂದು ಶಾಸಕರು ಹೇಳಿದರು.

‘ಜಿಂದಾಲ್‌ ಕಟ್ಟಿಸಿದ ಮನೆ’

‘ಶಾಸಕ ಗವಿಯಪ್ಪ ಅವರು ಹೋದ ಬಂದ ಸಚಿವರಿಗೆಲ್ಲ ನನ್ನ ಮನೆಯನ್ನು ತೋರಿಸಿ ಇದು ಜಿಂದಾಲ್‌ ಕಟ್ಟಿಸಿದ ಮನೆ ಎಂದು ಹೇಳಿ ನನ್ನ ಮರ್ಯಾದೆ ಕಳೆದಿದ್ದಾರೆ. ಅವರು ಹಾಗೆ ಹೇಳಿಲ್ಲವೆಂದಾದರೆ ಸಾಯಿಬಾಬಾ ಗುಡಿಗೆ ಬಂದು ಪ್ರಮಾಣ ಮಾಡಲಿ’ ಎಂದು ಆನಂದ್ ಸಿಂಗ್ ಸವಾಲು ಹಾಕಿದರು.

‌ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ‘ಇಂತಹ ಕ್ಷುಲ್ಲಕ ವಿಚಾರಗಳನ್ನು ಆನಂದ್ ಸಿಂಗ್ ಅವರು ಸಾರ್ವಜನಿಕವಾಗಿ ಹೇಳಲೇಬಾರದಿತ್ತು. ಇದು ಅವರ ಘನತೆಗೆ ತಕ್ಕುದಲ್ಲ. ಹೀಗೆ ಹೇಳುವ ಮೂಲಕ ಅವರ ಮರ್ಯಾದೆಯನ್ನು ಅವರೇ ಕಳೆದುಕೊಳ್ಳುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT