ಭಾನುವಾರ, ಫೆಬ್ರವರಿ 23, 2020
19 °C
ಸದಸ್ಯರ ಅವಧಿ ಮುಕ್ತಾಯವಾಗಿ ಆರು ತಿಂಗಳು; ಅಭಿವೃದ್ಧಿಗೆ ಕುಂಠಿತ

ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆ ಯಾವಾಗ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಇಲ್ಲಿಯ ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರ ಅಧಿಕಾರ ಅವಧಿ 2019ರ ಜುಲೈ 30ಕ್ಕೆ ಮುಕ್ತಾಯವಾಗಿದೆ. ಹೊಸದಾಗಿ ಚುನಾವಣೆ ನಡೆಯದ ಕಾರಣ ಆರು ತಿಂಗಳಿನಿಂದ ಪಾಲಿಕೆಯಲ್ಲಿ ಸದಸ್ಯರೇ ಇಲ್ಲದಂತಾಗಿದೆ.

2014–15ರಲ್ಲಿ ವಿಜಯಪುರ ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿತು. ಆಗ, ಸದಸ್ಯರಾಗಿದ್ದವರೇ ಅಧಿಕಾರದಲ್ಲಿ ಮುಂದುವರಿದಿದ್ದರು. ಇದೀಗ, ಅವರ ಅಧಿಕಾರ ಅವಧಿ ಮುಕ್ತಾಯವಾಗಿದ್ದರಿಂದ ವಾರ್ಡ್‌ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಪರದಾಡುವಂತಾಗಿದೆ.

ನಗರದಲ್ಲಿ ಒಟ್ಟು 35 ವಾರ್ಡ್‌ಗಳಿವೆ. ಈ ಪೈಕಿ ಕಳೆದ ಅವಧಿಯಲ್ಲಿ ಬಿಜೆಪಿಯಿಂದ 13, ಕಾಂಗ್ರೆಸ್ 10, ಜೆಡಿಎಸ್ 8, ಪಕ್ಷೇತರ 2, ಕೆಜೆಪಿ ಹಾಗೂ ಎನ್‌ಸಿಪಿ ತಲಾ ಒಬ್ಬರು ಸದಸ್ಯರು ಇದ್ದರು. ಮಹಾನಗರ ಪಾಲಿಕೆಯಾದ ಬಳಿಕ ಇದೇ ಮೊದಲ ಬಾರಿಗೆ ಚುನಾವಣೆ ನಡೆಯಬೇಕಿದ್ದು, ಆಕಾಂಕ್ಷಿಗಳು ಚುನಾವಣೆಯನ್ನು ಎದುರು ನೋಡುತ್ತಿದ್ದಾರೆ.

ಏಕೆ ವಿಳಂಬ?: ಅವಧಿ ಮುಕ್ತಾಯದ ಸಂದರ್ಭದಲ್ಲಿ ವಾರ್ಡ್ ವಿಂಗಡಣೆ, ಮೀಸಲಾತಿಯನ್ನು ನಿಗದಿಪಡಿಸಲಾಗಿತ್ತು. ಆದರೆ, ವಾರ್ಡ್ ವಿಂಗಡಣೆ ಪ್ರಶ್ನಿಸಿ ಕೆಲ ಸದಸ್ಯರು ಕಲಬುರ್ಗಿಯ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅದೇ ಸಂದರ್ಭದಲ್ಲಿ ಸರ್ಕಾರ ಕೂಡ ಅಫಿಡವಿಟ್‌ ಸಲ್ಲಿಸಿತ್ತು. ವಾರ್ಡ್‌ಗಳ ಮರು ವಿಂಗಡಣೆ ಮಾಡಿ, ಮತ್ತೊಮ್ಮೆ ಮೀಸಲಾತಿಯನ್ನು ನಿಗದಿಪಡಿಸಬೇಕು ಎಂದು ಹೈಕೋರ್ಟ್‌ ತೀರ್ಪು ನೀಡಿತ್ತು.

‘ಆರು ತಿಂಗಳಿನಿಂದ ಪಾಲಿಕೆ ಸದಸ್ಯರು ಇಲ್ಲದ್ದರಿಂದ ನಮ್ಮ ಗೋಳು ಯಾರಿಗೆ ಹೇಳಬೇಕು ಎಂಬುದು ತಿಳಿಯದಾಗಿದೆ. ಎಲ್ಲವನ್ನೂ ಅಧಿಕಾರಿಗಳಿಂದ ಮಾಡಿಸಿಕೊಳ್ಳಲು ಆಗುವುದಿಲ್ಲ. ಪಾಲಿಕೆ ಸದಸ್ಯರಿದ್ದರೆ ಅವರನ್ನು ಹಕ್ಕಿನಿಂದ ಕೇಳಬಹುದು. ಈಗ ಯಾರನ್ನು ಕೇಳಬೇಕು’ ಎಂಬುದು ನಗರದ ನಿವಾಸಿಗಳ ಪ್ರಶ್ನೆಯಾಗಿದೆ.

‘ಪಾಲಿಕೆ ಸದಸ್ಯರು ವಾರ್ಡ್‌ನ ಜನರ ಜೊತೆ ನೇರ ಸಂಪರ್ಕದಲ್ಲಿ ಇರುತ್ತಾರೆ. ಇದೊಂದು ಸೇವಾ ಕ್ಷೇತ್ರ. ನೀರು, ವಿದ್ಯುತ್, ಚರಂಡಿ ಮತ್ತು ರಸ್ತೆ ಸಮಸ್ಯೆಗಳಿಗೆ ಸಂಬಂಧಿಸಿದ ದೂರುಗಳನ್ನು ಜನರು ನಮ್ಮ ಬಳಿಯೇ ಹೇಳಿಕೊಳ್ಳುತ್ತಾರೆ. ಹೀಗಾಗಿ, ಆದಷ್ಟು ಬೇಗ ಚುನಾವಣೆ ನಡೆಯಬೇಕು. ಇದರಿಂದ ಜನರಿಗೆ ಸೇವೆ ಒದಗಿಸಲು ಅನುಕೂಲವಾಗುತ್ತದೆ’ ಎಂದು ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ಹೇಳುತ್ತಾರೆ.

‘ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ವಾರ್ಡ್‌ ಮರು ವಿಂಗಡಣೆ, ಮೀಸಲಾತಿ ನಿಗದಿ ಬಳಿಕ ಅಧಿಸೂಚನೆ ಹೊರಡಿಸಲಾಗುತ್ತದೆ. ಆ ಬಳಿಕ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಇನ್ನಷ್ಟೇ ನಡೆಯಬೇಕಿದೆ’ ಎಂದು ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದ ಸಾರ್ವಜನಿಕರು ನೇರವಾಗಿ ಪಾಲಿಕೆ ಕಚೇರಿಗೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಪಂದಿಸುತ್ತಾರೆ. ಅನುದಾನ ಲಭ್ಯವಿದ್ದರೆ ಕೂಡಲೇ ಕೆಲಸಗಳನ್ನು ಮಾಡಿಕೊಡಲಾಗುವುದು’ ಎಂದು ಹೇಳಿದರು.

*
ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆ ನಡೆದಿಲ್ಲ. ವಾರ್ಡ್‌ಗಳ ಮರುವಿಂಗಡಣೆ, ಮೀಸಲಾತಿ ನಿಗದಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಆದೇಶ ಬರಬೇಕಿದೆ
- ಹರ್ಷ ಶೆಟ್ಟಿ, ಆಯುಕ್ತ, ಮಹಾನಗರ ಪಾಲಿಕೆ

*
ಅಧಿಕಾರ ಅವಧಿ ಮುಕ್ತಾಯವಾಗಿ ಆರು ತಿಂಗಳಾಗಿದೆ. ಅಭಿವೃದ್ಧಿ ಕೆಲಸಗಳ ದೃಷ್ಟಿಯಿಂದ ಆದಷ್ಟು ಬೇಗ ಚುನಾವಣೆ ನಡೆದರೆ ಒಳ್ಳೆಯದು
-ರವೀಂದ್ರ ಲೋಣಿ, ಮಾಜಿ ಸದಸ್ಯ, ಮಹಾನಗರ ಪಾಲಿಕೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು