ಮಂಗಳವಾರ, ಜುಲೈ 27, 2021
24 °C
ರಾಷ್ಟ್ರೀಯ ಡೆಂಗಿ ರೋಗ ನಿಯಂತ್ರಣಾ ದಿನಾಚರಣೆ

ವಿಜಯಪುರ | 102 ಜನರಿಗೆ ಡೆಂಗಿ: ಜೇಬುನ್ನಿಸಾಬೇಗಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯಲ್ಲಿ ಜನವರಿಯಿಂದ ಮೇ ವರೆಗೆ ಒಟ್ಟು 310 ಜನರ ರಕ್ತವನ್ನು ಪರೀಕ್ಷೆ ಮಾಡಲಾಗಿದ್ದು, 102 ಜನರಿಗೆ ಡೆಂಗಿ ದೃಡಪಟ್ಟಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಜೇಬುನ್ನಿಸಾಬೇಗಂ ಬೀಳಗಿ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಗುರುವಾರ ರಾಷ್ಟ್ರೀಯ ಡೆಂಗಿ ರೋಗ ನಿಯಂತ್ರಣಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸಿಂದಗಿ ತಾಲ್ಲೂಕಿನಲ್ಲಿ 22 ಜನರಿಗೆ ಡೆಂಗಿ ದೃಡಪಟ್ಟಿದೆ. ಬಸವನ ಬಾಗೇವಾಡಿಯಲ್ಲಿ 15, ಮುದ್ದೆಬಿಹಾಳ 12, ಇಂಡಿ 23, ವಿಜಯಪುರ 30 ಜನರಿಗೆ ಕಾಣಿಸಿಕೊಂಡಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಡೆಂಗಿ ರೋಗ ಪರೀಕ್ಷಿಸಲು ಜಿಲ್ಲಾಸ್ಪತ್ರೆಯಲ್ಲಿ ಡಿ.ಪಿ.ಎಚ್.ಎಲ್ ಲ್ಯಾಬ್ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದರು.

ಡೆಂಗಿ ರೋಗ ನಿಯಂತ್ರಣ ಸಂಬಂಧ ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ತೆರಳಿ ಲಾರ್ವಾ ಸರ್ವೇ ಹಾಗೂ ಜನರಿಗೆ ತಿಳಿಹೇಳುವ ಕಾರ್ಯ ಕೈಗೊಂಡಿದ್ದಾರೆ ಎಂದು ಹೇಳಿದರು.

ಹೆಚ್ಚಿನ ಪ್ರಮಾಣದಲ್ಲಿ ಡೆಂಗಿ ಕಂಡುಬಂದಿರುವ ಪ್ರದೇಶಗಳ ಬಡವರಿಗೆ ಇಲಾಖೆಯಿಂದ ಉಚಿತವಾಗಿ ಸೊಳ್ಳೆ ಪರದೆಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.

ಡೆಂಗಿ ನಿಯಂತ್ರಣಕ್ಕಾಗಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳು ಒಳಚರಂಡಿ ಹಾಗೂ ಕೊಳಚೆ ಪ್ರದೇಶಗಳನ್ನು ಸ್ವಚ್ಛವಾಗಿಡಲು ತಿಳಿಸಲಾಗಿದೆ ಎಂದರು.

ನಗರ ಹಾಗೂ ಪಟ್ಟಣ ಪ್ರದೇಶಗಳ ಪರಿಸರದಲ್ಲಿ ಸೊಳ್ಳೆ ಉತ್ಪತ್ತಿ ನಿಯಂತ್ರಣಗೊಳಿಸುವ ಸಲುವಾಗಿ ಈಗಿರುವ ನಾಗರಿಕ ಬೈಲಾಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ ಹಾಗೂ ಅನುಪಯುಕ್ತ ಹಾಗೂ ಘನತ್ಯಾಜ್ಯ ವಸ್ತುಗಳ ಸೂಕ್ತ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಮೀನುಗಾರಿಕೆ ಇಲಾಖೆಯಿಂದ ಲಾರ್ವಾಹಾರಿ ಮೀನುಗಳಾದ ಗಪ್ಪಿ ಮತ್ತು ಗ್ಯಾಂಬ್ಯುಸಿಯಾಗಳನ್ನು ಬೆಳೆಸಿ ಜಿಲ್ಲೆಯಾದ್ಯಂತ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತಿದ್ದು, ಈಗಾಗಲೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಗಪ್ಪಿ ಹಾಗೂ ಗ್ಯಾಂಬ್ಯುಸಿಯಾ ಮೀನುಗಳನ್ನು ಬಿಡಲಾಗಿದೆ. ಅಗತ್ಯ ಸ್ಥಳಗಳಲ್ಲಿ ಈ ಮೀನುಗಳನ್ನು ಸೂಕ್ತ ಸಮಯದಲ್ಲಿ ಉಚಿತವಾಗಿ ಒದಗಿಸಲಾಗುತ್ತಿದೆ ಎಂದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ವರಿ ಗೋಲಗೇರಿ, ಜಿಲ್ಲಾ ಕೀಟಶಾಸ್ತ್ರಜ್ಞ ಡಾ. ರಿಯಾಜ್‌ ದೇವಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು